ಜೆಡಿಎಸ್‌ನಲ್ಲಿದ್ದಿದ್ದರೆ ನಮ್ಮಪ್ಪನಾಣೆ ಸಿಎಂ ಆಗ್ತಿರಲಿಲ್ಲ: ಸಿದ್ದು | ಬಿಎಸ್‌ವೈಗೆ ಬುದ್ಧಿ ಇಲ್ಲ, ಹೆಗಡೆಗೆ ಸಂಸ್ಕಾರ ಇಲ್ಲ, ಈಶ್ವರಪ್ಪ ಬುದ್ಧಿಮಾಂದ್ಯ

ಮಂಡ್ಯ/ನಾಗಮಂಗಲ: 1996 ರಲ್ಲಿ ಸಿಎಂ ಆಗಬೇಕಾಗಿತ್ತು ತಪ್ಪಿಸಿದರು. 2004ರಲ್ಲಿ ಸಿಎಂ ಆಗಬೇಕಿತ್ತು, ಜನತಾದಳದಿಂದಲೇ ಹೊರ ಹಾಕಿದರು. ಜೆಡಿಎಸ್‌ನಲ್ಲೇ ಇದ್ದಿದ್ದರೆ ಸಿಎಂ ಆಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಾಗಮಂಗಲ ಪಟ್ಟಣದಲ್ಲಿ ಕನಕ ಭವನದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅವರು ಮತ್ತೊಮ್ಮೆ ಜೆಡಿಎಸ್ ಮೇಲಿನ ಅಸಮಾಧಾನವನ್ನು ಹೊರಹಾಕಿದ್ದಾರೆ. ಸೋನಿಯಾ , ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿಯಾಗಿ ಮಾಡಿದರು. ಜೆಡಿಎಸ್ ನಲ್ಲೇ ಇದ್ದರೆ ಸಿಎಂ ಆಗುತ್ತಿರಲಿಲ್ಲ. ಆಗಲು ಅವ್ರ ಬಿಡುತ್ತಿರಲಿಲ್ಲ. ಸಿಎಂ ಮಾತ್ರ ನಮ್ಮಪ್ಪನಾಣೆಗೂ ಆಗುತ್ತಿರಲಿಲ್ಲ ಎಂದರು.

ಬಿಎಸ್‌ವೈಗೆ ಬುದ್ಧಿ ಇಲ್ಲ: ರೈತರಿಗೆ ಸಾಲ ಮನ್ನಾ ಮಾಡಿ ಭಾರ ಕಡಿಮೆ ಮಾಡಿದ್ದೇವೆ. ಇದುವರೆಗೂ ಅಧಿಕಾರ ನಡೆಸಿದವರು ಏನೂ ಮಾಡಲಿಲ್ಲ. ಇದೀಗ ಅಧಿಕಾರಕ್ಕಾಗಿ ಸಾಲಮನ್ನಾ ಮಾಡುವ ಬಗ್ಗೆ

ಮಾತನಾಡುತ್ತಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು. ಯಡಿಯೂರಪ್ಪನಿಗೆ ಬುದ್ಧಿ ಇಲ್ಲ. ಈಶ್ವರಪ್ಪ ಬುದ್ಧಿಮಾಂದ್ಯ, ಅನಂತಕುಮಾರ ಹೆಗಡೆಗೆ ಸಂಸ್ಕೃತಿ, ಸಂಸ್ಕಾರ ಇಲ್ಲ. ನನ್ನನ್ನು ಕಂಡರೆ ಇವರಿಗೆಲ್ಲಾ ಹೊಟ್ಟೆಕಿಚ್ಚು. ನಾನು ಅವರಷ್ಟು ಕೀಳು ಮಟ್ಟಕ್ಕೆ ಹೋಗಲಾರೆ. ಜೈಲಿಗೆ ಹೋಗಿ ಬಂದ ಗಿರಾಕಿಗಳು ನನ್ನನ್ನು ಕಮಿಷನ್ ಏಜೆಂಟ್ ಅಂತಾರೆ. ಆದರೆ ನಾನು ಭ್ರಷ್ಟಾಚಾರ ಮಾಡಿರುವ ಬಗ್ಗೆ ದಾಖಲಾತಿ ಸಮೇತ ತೋರಿಸಿದರೆ ಸಾರ್ವಜನಿಕ ಜೀವನದಲ್ಲಿ ಇರುವುದಿಲ್ಲ ಎಂದರು.

ಜೆಡಿಎಸ್‌ನಿಂದ ಉಚ್ಚಾಟಿಸಲ್ಪಟ್ಟಿರುವ ಚಲುವರಾಯಸ್ವಾಮಿ ಅವರುಜನವರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. 2018ರ ಚುನಾವಣೆಯಲ್ಲಿ ಚಲುವರಾಯಸ್ವಾಮಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಿಎಂ ಕಾರ್ಯವೈಖರಿಗೆ ಚುಂಚಶ್ರೀ ಪ್ರಶಂಸೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸಿಎಂ ಕೆಂಪೇಗೌಡರ ಜಯಂತಿ ಮತ್ತು ಪ್ರಾಧಿಕಾರ ರಚಿಸಿರುವುದು ಸ್ವಾಗತಾರ್ಹ ಎಂದರು. ತಾಲೂಕಿನ ಬೆಳ್ಳೂರಿನ ಕಾಲೇಜು ಆವರಣದಲ್ಲಿ ಆದಿಚುಂಚನಗಿರಿ ಹಾಗೂ 128 ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ಯೋಜನೆಯ ಶಂಕು ಸ್ಥಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪನೆಗೂ ಮುಂದಾಗಿರುವುದು ಸೂಕ್ತ ನಿರ್ಧಾರ ಎಂದರು.