ನರಹಂತಕ ಯಾರೆಂದು ಅಟಲ್‌, ಅಡ್ವಾಣಿಗೆ ಗೊತ್ತು

First Published 8, Mar 2018, 8:03 AM IST
CM Siddaramaiah Slams BJP Leaders
Highlights

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಾತನಾಡುವ ಸ್ಥಿತಿಯಲ್ಲಿದ್ದರೆ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಮಾತನಾಡಲು ಅವಕಾಶ ನೀಡಿದರೆ ‘ನರಹಂತಕ’ ಯಾರು ಎಂದು ಹೇಳುತ್ತಿದ್ದರು. ಈ ಇಬ್ಬರು ನಾಯಕರ ಮೌನ ಬಿಜೆಪಿಯ ಮಾನ ಉಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು : ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಾತನಾಡುವ ಸ್ಥಿತಿಯಲ್ಲಿದ್ದರೆ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಮಾತನಾಡಲು ಅವಕಾಶ ನೀಡಿದರೆ ‘ನರಹಂತಕ’ ಯಾರು ಎಂದು ಹೇಳುತ್ತಿದ್ದರು. ಈ ಇಬ್ಬರು ನಾಯಕರ ಮೌನ ಬಿಜೆಪಿಯ ಮಾನ ಉಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ತಮ್ಮನ್ನು ‘ನರಹಂತಕ’ ಎಂದು ಟೀಕಿಸಿದ ಬಿಜೆಪಿ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್‌ ಮೂಲಕ ತರಾಟೆಗೆ ತೆಗೆದುಕೊಂಡಿರುವ ಅವರು, ಬಿಜೆಪಿ ನಾಯಕರು ಬಳಸಿರುವ ಭಾಷೆ ಅವರ ಸಂಸ್ಕೃತಿ ತೋರಿಸುತ್ತದೆ ಅಥವಾ ಅವರಿಗೆ ಸಂಸ್ಕೃತಿ ಇಲ್ಲವೆಂಬುದನ್ನು ತೋರಿಸುತ್ತದೆ. ಅವರ ಮಟ್ಟಕ್ಕೆ ನಾನು ಇಳಿಯಲಾರೆ, ಆದರೆ ಬಸವಣ್ಣನವರ ವಚನ ಮಾತ್ರ ಉಲ್ಲೇಖಿಸುತ್ತೇನೆ ಎಂದು ಹೇಳಿ, ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ...’ ಎಂಬ ಎಂದು ವಚನ ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.

ಮೋದಿ ಕಾಲ್ಗುಣ: ರಾಹುಲ್‌ ಗಾಂಧಿ ಅವರ ಕಾಲ್ಗು​ಣದ ಬಗ್ಗೆ ವ್ಯಂಗ್ಯ ಮಾಡುವ ಬಿಜೆ​ಪಿ ನಾಯ​ಕ​ರಿಗೆ ತಿರು​ಗೇಟು ನೀಡಿದ ಅವರು, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಂದ್ರ ಮೋದಿ ಅವರು ವ್ಯಾಪಕ ಪ್ರಚಾರ ನಡೆಸಿದ್ದರೂ, ಅಲ್ಲಿನ ಎಂಟು ಕ್ಷೇತ್ರಗಳ ಪೈಕಿ ಏಳನ್ನು ಕಾಂಗ್ರೆಸ್‌ ಗೆದ್ದಿತ್ತು. ಅವರ ಕಾಲ್ಗುಣ ಚೆನ್ನಾಗಿತ್ತು. ಅದೇ ನಿರೀಕ್ಷೆಯಲ್ಲಿ ಈಗಲೂ ಇದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂಸ್ಕೃತಿ, ಮನುಷ್ಯತ್ವ ಇಲ್ಲದ ಬಿಜೆಪಿ ನಾಯಕರು:

ತಮ್ಮ ವಿರುದ್ಧ ಬಿಜೆಪಿ ನಾಯಕರು ಮಾಡಿರುವ ಟೀಕೆಗಳನ್ನು ನೋಡಿದರೆ ಅವರಿಗೆ ಸಂಸ್ಕೃತಿ, ಮನುಷ್ಯತ್ವ ಯಾವುದು ಇಲ್ಲ ಎಂದು ಗೊತ್ತಾಗುತ್ತದೆ, ಅವರ ಟೀಕೆಗೆ ಪ್ರತಿಯಾಗಿ ನನಗೂ ಮಾತನಾಡಲು ಬರುತ್ತದೆ. ಆದರೆ ಮುಖ್ಯಮಂತ್ರಿಯಾಗಿ ಬಿಜೆಪಿಯವರ ಮಟ್ಟಕ್ಕೆ ನಾನು ಇಳಿಯುವುದಿಲ್ಲ ಎಂದೂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಕಳೆದ ನಲವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಆದರೆ ಯಾವತ್ತೂ ಈ ರೀತಿ ಕೆಳಮಟ್ಟಕ್ಕೆ ಇಳಿದು ಮಾತನಾಡಿಲ್ಲ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಬಗ್ಗೆ ಟೀಕೆ ಮಾಡಿರುವುದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಕನ್ನಡಿಗರು ಇದನ್ನು ಸಹಿಸುವುದಿಲ್ಲ. ಖಂಡಿತವಾಗಿ ಕನ್ನಡಿಗರು ತಕ್ಕ ಪಾಠ ಕಲಿಸುತ್ತಾರೆ. ಸಂಸ್ಕಾರ ಇಲ್ಲದವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಪ್ರಚೋದಿಸುತ್ತಿರುವ ಕರಂದ್ಲಾಜೆ:

ಉಡುಪಿಗೆ ಬಂದರೆ ಬಡಿಗೆ ತೆಗೆದುಕೊಂಡು ಹೊಡೆಯುವುದಾಗಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ, ಸಂಸದೆಯಾಗಿ ಅವರು ಈ ರೀತಿ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದ ಅವರು, ಈ ರೀತಿ ಹೇಳಿಕೆ ನೀಡುವ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದರು. 

ಕಾನೂನು ಪ್ರಕಾರ ವಾಪಸ್‌:

‘ಬಿಜೆಪಿಯ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು ನಡೆಸುತ್ತಿದ್ದ ಶಾಲೆಗೆ ನೀಡುತ್ತಿದ್ದ ಅನುದಾನವನ್ನು ಕಾನೂನು ಪ್ರಕಾರವೇ ಹಿಂಪಡೆದುಕೊಂಡಿದ್ದೇವೆ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇಂತಹ ಕ್ಷುಲ್ಲಕ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಾರೆ, ಅವರಿಗೆ ಬೇರೆ ವಿಚಾರಗಳೇ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಖೇಣಿ ಸೇರಿದ್ದಕ್ಕೆ ಮುಜುಗರ ಇಲ್ಲ

ಶಾಸಕ ಅಶೋಕ್‌ ಖೇಣಿ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದರಿಂದ ಯಾವುದೇ ಮುಜುಗರ ಆಗಿಲ್ಲ. ಇಷ್ಟಕ್ಕೂ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿಲ್ಲ. ಖೇಣಿ ಅವರು ಬೇಷರತ್ತಾಗಿ ಪಕ್ಷಕ್ಕೆ ಸೇರಿದ್ದಾರೆ. ಟಿಕೆಟ್‌ ಕೊಡುವುದು, ಬಿಡುವುದು ಹೈಕಮಾಂಡ್‌ಗೆ ವಿವೇಚನೆಗೆ ಬಿಟ್ಟವಿಷಯ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿದರು.

ಜೆಡಿಎಸ್‌ ಜತೆ ಪಾಳಿಕೆ ಮೈತ್ರಿ: ಪ್ರತಿಕ್ರಿಯೆಗೆ ನಕಾರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಜೊತೆ ಮಾಡಿಕೊಂಡಿರುವ ಮೈತ್ರಿಯನ್ನು ಮುರಿದುಕೊಳ್ಳುವುದಾಗಿ ಜೆಡಿಎಸ್‌ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಕಾರ ವ್ಯಕ್ತಪಡಿಸಿದ ಅವರು, ‘ಒಪ್ಪಂದ ಮುರಿದುಕೊಳ್ಳುವುದು ಅಥವಾ ಮುಂದುವರೆಸುವುದು ಅವರಿಗೆ ಸಂಬಂಧ ಪಟ್ಟವಿಷಯ. ಆದರೆ ಒಪ್ಪಂದದ ಪ್ರಕಾರ ನಮ್ಮ ಪಕ್ಷದವರು ಮೇಯರ್‌ ಆಗಿ ಜೆಡಿಎಸ್‌ನವರು ಉಪಮೇಯರ್‌ ಆಗಿದ್ದಾರೆ’ ಎಂದಷ್ಟೇ ಉತ್ತರಿಸಿದರು.

loader