Asianet Suvarna News Asianet Suvarna News

ಕುಮಾರಸ್ವಾಮಿ ತಪ್ಪು ಮಾಡಿರದಿದ್ದರೆ ಕತೆಯೇ ಬೇರೆಯಿರುತ್ತಿತ್ತು

ಯೋಗಿ ಆದಿತ್ಯನಾಥ್ ಕರ್ನಾಟಕ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಬುದ್ಧಿ ಹೇಳಬೇಕಾಗಿಲ್ಲ. ಕರ್ನಾಟಕದ ಆಸ್ಪತ್ರೆ ನೋಡಿ, ಯೋಗಿ ಆದಿತ್ಯನಾಥ್ ಅವರ ರಾಜ್ಯದ ಆಸ್ಪತ್ರೆ ಅಭಿವೃದ್ಧಿ ಮಾಡಲಿ

CM Siddaramaiah Slams BJP Leaders

ಮಡಿಕೇರಿ(ಜ.09): ಕುಮಾರಸ್ವಾಮಿ ಮಾಡಿದ ತಪ್ಪಿನಿಂದ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ದೊರೆಯಿತು. ಕೊಟ್ಟ ಮಾತಿನಂತೆ ಕುಮಾರಸ್ವಾಮಿ ನಡೆದುಕೊಂಡಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ' ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೈಕಲ್, ಸೀರೆ ಬಿಟ್ಟು ಬೇರೆ ಏನಾದರೂ ಕೊಟ್ಟಿದ್ದೀರಾ? ಅದೂ ಕೂಡ ಹರಕಲು ಸೀರೆ, ಮುರುಕಲು ಸೈಕಲ್. ಸಿದ್ದರಾಮಯ್ಯ ಭ್ರಷ್ಟ ಮುಖ್ಯಮಂತ್ರಿ ಎಂದು ಅಮಿತ್ ಷಾ ಹೇಳಿದ್ದಾರೆ. ಆದರೆ ಅಮಿತ್ ಷಾನೇ ಜೈಲಿಗೆ ಹೋಗಿ ಬಂದಿದ್ದಾರೆ. ಬೇಲ್ ಮೇಲೆ ಅಮೀತ್ ಷಾ ಹೊರಗೆ ಬಂದಿದ್ದಾರೆ. 2014 ರಲ್ಲಿ ಮೋದಿ ಸರ್ಕಾರ ಬರದಿದ್ದರೆ ಅಮಿತ್ ಷಾ ಹೊರಗೆ ಬರುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿ ಜೈಲಿಗೆ ಹೋಗಿದ್ದರೆ ಅದು ಯಡಿಯೂರಪ್ಪ ಮಾತ್ರ. ಕಾಂಗ್ರೆಸ್ ನ 5 ವರ್ಷ ಅವಧಿಯಲ್ಲಿ ಯಾವುದೇ ಹಗರಣವಾಗಿಲ್ಲ. ಬಿಜೆಪಿಯ ಯಾರೇ ಕರ್ನಾಟಕಕ್ಕೆ ಬಂದರೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ

ಯೋಗಿ ಆದಿತ್ಯನಾಥ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿ, ನಿಮ್ಮಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ರಾಜ್ಯದಲ್ಲಿ ಎಷ್ಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪ್ರಶ್ನಿಸಿದರು. ಮನುಷ್ಯತ್ವ ಇಲ್ಲದ ಹಿಂದೂತ್ವ ಬಿಜೆಪಿಯಲ್ಲಿ ಮಾತ್ರ ಇದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಡಳಿತದಲ್ಲಿ ಮುಸಲ್ಮಾನರು, ಕ್ರಿಶ್ಚಿಯನ್ನರು, ದಲಿತರು ಇದ್ದಾರಾ ಎಂದರು.

ನಾವು ಅಣ್ಣತಮ್ಮಂದಿರಂತೆ ಇದ್ದೇವೆ

ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್, ಸಿದ್ದರಾಮಯ್ಯ ಪರಮೇಶ್ವರ್ ಸರಿಯಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. 7 ವರ್ಷದಿಂದ ಒಟ್ಟಿಗೆ ಅಣ್ಣ-ತಮ್ಮಂದಿರಂತೆ ಕೆಲಸ ಮಾಡಿದ್ದೇವೆ. ಇಡೀ ರಾಜ್ಯದಲ್ಲಿ ಜನತೆ ಕಾಂಗ್ರೆಸ್'ನತ್ತ ಒಲವು ತೋರಿದ್ದಾರೆ. ಇದನ್ನು ಸಹಿಸದೆ ಬಿಜೆಪಿ ಮುಖಂಡರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಬಗ್ಗೆ ಯೋಗಿ ಆದಿತ್ಯನಾಥ್ ಮಾತನಾಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಯಾವುದೇ ಸವಾಲು ಸ್ವೀಕರಿಸಲು ಸಿದ್ಧರಿದ್ದೇವೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು. ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಅವರಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮೊದಲು ಅವರ ತಪ್ಪುಗಳನ್ನು ಅವರು ತಿದ್ದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಜೈಲಿಗೆ ಹೋಗಿ ಎಂದು ಧರ್ಮದಲ್ಲಿ ಹೇಳಿದ್ದಾರಾ

ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯವರು ಹಿಂದೂ ಹಿಂದೂ ಅಂತಾರೆ, ಇವರಿಗೆ ಮಾತ್ರ ಧರ್ಮ ಇರೋದಾ. ಧರ್ಮದಲ್ಲಿ ಹೇಳಿದ್ದಾರಾ ಚೆಕ್'ನಲ್ಲಿ ಕೋಟಿ ಕೋಟಿ ಲಂಚ ತೆಗೆದುಕೊಳ್ಳಿ ಎಂದು. ಧರ್ಮದಲ್ಲಿ ಹೇಳಿದ್ದಾರಾ ಜೈಲಿಗೆ ಹೋಗಿ ಅಂತ ಎಂದು ಪ್ರಶ್ನಿಸಿದರು. ಧರ್ಮದ ಹೆಸರಿನಲ್ಲಿ ಹತ್ಯೆಯಾದವರನ್ನು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯೇ ಕೊಲೆ ಮಾಡಿದೆ. ಹಿಂದೂ ಧರ್ಮಕ್ಕೆ ನಿಜವಾಗಿಯೂ ಬಿಜೆಪಿ ಹಾಗೂ ಸಂಘ ಪರಿವಾರ ಅಪಚಾರ ಮಾಡುತ್ತಿದೆ. ಬಿಜೆಪಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ಅಜೆಂಡಾ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೈಲಿಗೆ ಹೋಗಿದ್ದು ಅಮಿತ್ ಶಾ ಮರೆತಿರಬೇಕು

ಇಂಧನ ಸಚಿವ ಡಿ ಕೆ ಶಿವಕುಮಾರ್, ಮಂಗಳೂರಿನಲ್ಲಿ ನಡೆದ ಹತ್ಯೆಗಳು ವೈಯಕ್ತಿಕ ಹತ್ಯೆಗಳಾಗಿವೆ. ಅವುಗಳಿಗೆ ಕೋಮು ಬಣ್ಣ ಬಳಿಯುವ ಕಾರ್ಯ ಬಿಜೆಪಿ ಮತ್ತು ಸಂಘಪರಿವಾರದಿಂದ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾಗ ಬಿಜೆಪಿಯವರೇ ಏನು ಮಾಡಿದ್ರಿ. ರಾಜ್ಯದಲ್ಲಿ ನಾವು ಕೊಟ್ಟಿರುವ ಯೋಜನೆಗಳನ್ನು ನೆನಪು ಮಾಡಿಕೊಳ್ಳಿ. ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯರನ್ನು ಜೈಲಿಗೆ ಹಾಕ್ತೇವೆ ಅಂತೀರಲ್ಲಾ. ನಿಮ್ಮ ಜೈಲು ಮರೆತೋಯ್ತ ನಿಮಗೆ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.

ರಾಜ್ಯ ಬಿಜೆಪಿಯವರಿಗೆ ಅಮಿತ್ ಷಾ ಕೋಮು ಗಲಭೆ ಸೃಷ್ಟಿಸೋಕೆ ಹೇಳಿದ್ದಾರೆ. ಈಶ್ವರಪ್ಪ ಅವರು ಸುಳ್ಳು ಹೇಳಿಯಾದರೂ ಹೆಚ್ಚು ಓಟು ಪಡೆಯುವಂತೆ ಹೇಳಿದ್ದಾರೆ. ಇದೇನಾ ಬಿಜೆಪಿ ಸಂಸ್ಕೃತಿ, ಇಂತಹವರು ರಾಜ್ಯಕ್ಕೆ ಬೇಕಾ ಎಂದು ಸಾಧನಾ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಇಂಧನ ಸಚಿವ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ರಕ್ತದ ಹೊಳೆ ಹರಿಸುತ್ತಿದೆ

ಸಂಸದ ಬಿ ಕೆ ಹರಿಪ್ರಸಾದ್, ಬಿಜೆಪಿ ಜಾತಿ ಜಾತಿ, ಧರ್ಮ ಧರ್ಮದ ನಡುವೆ ರಕ್ತದ ಹೊಳೆ ಹರಿಸುತ್ತಿದೆ. ಅಮಿತ್ ಷಾ ಕೊಲೆ ಆರೋಪಿ. ಅವರು ಕಾಂಗ್ರೆಸ್'ಗೆ ಬುದ್ಧಿ ಹೇಳುವ ಅಗತ್ಯವಿಲ್ಲ. ಯೋಗಿ ಆದಿತ್ಯನಾಥ್ ಕರ್ನಾಟಕ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಬುದ್ಧಿ ಹೇಳಬೇಕಾಗಿಲ್ಲ. ಕರ್ನಾಟಕದ ಆಸ್ಪತ್ರೆ ನೋಡಿ, ಯೋಗಿ ಆದಿತ್ಯನಾಥ್ ಅವರ ರಾಜ್ಯದ ಆಸ್ಪತ್ರೆ ಅಭಿವೃದ್ಧಿ ಮಾಡಲಿ ಎಂದು ಅವರು ಹೇಳಿದರು.

Follow Us:
Download App:
  • android
  • ios