ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಪ್ರಭಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ

ಬೆಂಗಳೂರು (ಜ.07): ‘ನಾನು ಹಿಂದು, ಹೀಗಾಗಿ ಹಿಂದು ಎಂದು ಪ್ರಬಲವಾಗಿ ಕ್ಲೇಮ್ ಮಾಡಿಕೊಳ್ಳುತ್ತೇನೆ. ಹಿಂದುತ್ವ ಬಿಜೆಪಿಗರ ಗುತ್ತಿಗೆಯಲ್ಲ. ಇಲ್ಲಿ ಮುಖ್ಯ ಜಾತ್ಯತೀತ ಸಿದ್ಧಾಂತದ ಬಗೆಗಿನ ಬದ್ಧತೆ. ಅದರಲ್ಲಿ ಕಾಂಗ್ರೆಸ್ ಯಾವ ಹೊಂದಾಣಿಕೆಯನ್ನೂ ಮಾಡಿಕೊಂಡಿಲ್ಲ.’ ಗುಜರಾತ್ ಚುನಾವಣೆಯಲ್ಲಿ ಮೃದು ಹಿಂದುತ್ವ ತತ್ವ ಪಾಲಿಸುವ ಹೊಸ ಪ್ರಯೋಗಕ್ಕೆ ಮುಂದಾದ ಕಾಂಗ್ರೆಸ್ ರಾಜ್ಯದಲ್ಲೂ ಅದೇ ಪ್ರಯೋಗವನ್ನು ಈ ಬಾರಿ ಪ್ರಬಲವಾಗಿ ಮಾಡಲಿದೆ ಎಂಬ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುತ್ವ ಬಿಜೆಪಿಗರ ಗುತ್ತಿಗೆಯಲ್ಲ.

ನಾವು ಹಿಂದುಗಳೇ ಹೀಗಾಗಿ ಹಿಂದು ಎಂದು ಪ್ರಬಲವಾಗಿ ಕ್ಲೇಮ್ ಮಾಡುತ್ತಿದ್ದೇವೆ ಎನ್ನುವ ಮೂಲಕ ಬಿಜೆಪಿಯ ಟ್ರಂಪ್ ಕಾರ್ಡ್ ಅನ್ನು ಕರಗಿಸಲು ಮುಂದಾಗಿದ್ದಾರೆ. ರಾಹುಲ್ ಗಾಂಧಿ ಅವರ ‘ಟೆಂಪಲ್ ರನ್’ ಅನ್ನು ಸಮರ್ಥಿಸಿಕೊಳ್ಳುವುದಷ್ಟೇ ಅಲ್ಲ, ತಾವು ದೇವಾಲಯಗಳನ್ನು ಸುತ್ತುವುದಾಗಿಯೂ ಘೋಷಿಸಿದ್ದಾರೆ. ರಾಜ್ಯದ 20 ಜಿಲ್ಲೆಗಳನ್ನು ಸುತ್ತಾಡಿ ಜನರ ನಾಡಿ ಮಿಡಿತ ಪರೀಕ್ಷಿಸಿರುವ ಸಿದ್ದರಾಮಯ್ಯ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ತುಂಬು ವಿಶ್ವಾಸ ಹೊಂದಿದ್ದಾರೆ. ನೇರ ಮಾತು, ಸತ್ಯ ಮರೆಮಾಚದ ತಮ್ಮ ಸ್ವಭಾವವನ್ನೇ ತಂತ್ರಗಾರಿಕೆ ಎನ್ನುವ, ಜಾತಿ ವಿಭಜನೆ ಮಾಡುತ್ತಿದ್ದಾರೆ ಎಂಬ ಟೀಕೆಗಳನ್ನು ನಾಜೂಕಾಗಿ ಬದಿಗೆ ಸರಿಸುತ್ತಾರೆ. ಕೋಮುವಾದಿ ಸಂಘಟನೆ, ಅದು ಹಿಂದು ಆಗಿರಲಿ, ಮುಸ್ಲಿಂ ಆಗಿರಲಿ ಅವರೊಂದಿಗೆ ಹೊಂದಾಣಿಕೆಯಿಲ್ಲ ಎಂದು ಸ್ಪಷ್ಟವಾಗಿ ಘೋಷಿಸುತ್ತಾರೆ. ನಾಯಕತ್ವ ನೀಡಿ ಚುನಾವಣೆ ಗೆಲ್ಲುವ ತವಕ ತೋರುವ ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಬದ್ಧತೆ ತೋರದ ಹೈಕಮಾಂಡ್ ನಿಲುವನ್ನು ಸಮರ್ಥಿಸಿಕೊಳ್ಳುವ ರಾಜಕೀಯ ಪ್ರೌಢಿಮೆ ಮೆರೆಯುತ್ತಾರೆ. ರಾಜ್ಯ ಯಾತ್ರೆಯ ಗಡಿಬಿಡಿಯ ನಡುವೆಯೇ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಚುನಾವಣೆಯಲ್ಲಿ ಎದುರಾಗಲಿರುವ ಅಮಿತ್ ಶಾ ಹಾಗೂ ಮೋದಿ ತಂತ್ರಗಾರಿಕೆಯನ್ನು ಪ್ರಬಲ ಪ್ರಾದೇಶಿಕ ನಾಯಕತ್ವ, ಸಮರ್ಥ ನೆಟ್‌ವರ್ಕ್ ಹಾಗೂ ಕನ್ನಡ ಅಸ್ಮಿತೆಯಂತಹ ಅಸ್ತ್ರಗಳ ಮೂಲಕ ಮಣಿಸಲು ಸಜ್ಜಾಗಿರುವುದನ್ನು ವಿಶದವಾಗಿ ವಿವರಿಸಿದ್ದಾರೆ.

ಸಂದರ್ಶನದ ಪೂರ್ಣಪಾಠ ಇಂತಿದೆ.

* ನೀವು ಈಗಾಗಲೇ ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಸಂಚಾರ ಮಾಡಿದ್ದೀರಿ. ಏನು ಹೇಳುತ್ತದೆ, ಜನರ ನಾಡಿ ಮಿಡಿತ?

ನಮ್ಮ ಸರ್ಕಾರದ ಸಾಧನೆ, ಸರ್ಕಾರ ರೂಪಿಸಿದ ಯೋಜನೆಗಳ ಬಗ್ಗೆ ಜನರು ಸಂತೋಷವಾಗಿದ್ದಾರೆ. ಹೀಗಾಗಿ ಎಲ್ಲ ಕಡೆ ನಾವು ನಿರೀಕ್ಷೆಯೂ ಮಾಡದಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಆಡಳಿತ ಪರ ಅಲೆಯಿದೆ.

*ಇದಕ್ಕೆ ಕಾರಣವೇನು? ಸರ್ಕಾರದ ಸಾಧನೆಯೇ ಅಥವಾ ಪ್ರತಿಪಕ್ಷಗಳು ದುರ್ಬಲವಾಗಿರುವುದೇ?

ಜನರಲ್ಲಿ ಪ್ರತಿಪ್ರಕ್ಷಗಳ ಬಗ್ಗೆ ಒಳ್ಳೆ ಅಭಿಪ್ರಾಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಆಡಳಿತವನ್ನು ಜನರು ನೋಡಿದ್ದಾರೆ. ಈಗ ನಮ್ಮ ಆಡಳಿತವನ್ನು ನೋಡುತ್ತಿದ್ದಾರೆ. ಎರಡನ್ನೂ ಅವರು ಹೋಲಿಸಿ ನೋಡುತ್ತಾರೆ. ವಿಶೇಷವಾಗಿ ಬಿಜೆಪಿ ಹೇಗೆ ರಾಜ್ಯವನ್ನು ಲೂಟಿ ಮಾಡಿತು ಎಂಬುದು ಅವರಿಗೆ ನೆನಪಿದೆ. ಇದೇ ವೇಳೆ ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಸಾಲ ಮನ್ನಾ, ಮಾತೃ ಪೂರ್ಣ, ವಿದ್ಯಾಸಿರಿ... ಇಂತಹ ಕಾಂಗ್ರೆಸ್‌ನ ಕಾರ್ಯಕ್ರಮಗಳು ಜನರನ್ನು ಮುಟ್ಟಿವೆ. ಆರೂವರೆ ಕೋಟಿ ಜನಸಂಖ್ಯೆಯಲ್ಲಿ ಶೇ.90 ಜನರಿಗೆ ಒಂದಲ್ಲ, ಒಂದು ಸೌಲಭ್ಯ ದೊರಕಿದೆ. ಹೀಗಾಗಿ ಜನರಿಗೆ ನಮ್ಮ ಸರ್ಕಾರದ ಮೇಲೆ ಕೋಪವಿಲ್ಲ.

ಹಾಗಿದ್ದರೆ, ನೀವು ಸಾಧನೆ ಮೇಲೆ ಮತ ಕೇಳಬೇಕು. ಅದನ್ನು ಬಿಟ್ಟು ಮೃದು ಹಿಂದುತ್ವದ ಜಪ ಆರಂಭಿಸಿದ್ದಿರಲ್ಲ, ಏಕೆ?

ಇಲ್ಲ, ನಾವು ಮೃದು ಹಿಂದುತ್ವ ಪ್ರತಿಪಾದನೆ ಮಾಡುತ್ತಿಲ್ಲ. ಆದರೆ, ನಾವು ಹಿಂದುಗಳೇ.. ಹೀಗಾಗಿ ಹಿಂದು ಎಂದು ಹೇಳಿಕೊಳ್ಳುತ್ತೇವೆ. ನಾನು ಹಿಂದು ಎಂದುಕೊಂಡ ಕೂಡಲೇ ಅದು ಸಾಫ್ಟ್ ಹಿಂದುತ್ವವಾಗುವುದಿಲ್ಲ. ? ಕಾಂಗ್ರೆಸ್ ನಾಯಕರೂ ಹಿಂದೆಂದಿಗಿಂತ ಈಗ ಪ್ರಬಲವಾಗಿ ಈಗ ತಾವು ಹಿಂದು ಎಂದು ಕ್ಲೇಮ್ ಮಾಡುತ್ತಿದ್ದಾರೆ? ನಾನು ಹಿಂದು. ಹೀಗಾಗಿ ನಾನು ಹಿಂದು ಎಂದು ಪ್ರಬಲವಾಗಿ ಕ್ಲೇಮ್ ಮಾಡುತ್ತೇನೆ.

ಇಷ್ಟಕ್ಕೂ ಹಿಂದು ಎಂಬುದು ಬಿಜೆಪಿಯವರ ಗುತ್ತಿಗೆಯೇನೂ ಅಲ್ಲವಲ್ಲ? ಇಲ್ಲಿ ಮುಖ್ಯವಿರುವುದು ಜಾತ್ಯತೀತ ಸಿದ್ಧಾಂತಕ್ಕೆ ಕಾಂಗ್ರೆಸ್ ಬದ್ಧತೆ ಪ್ರಶ್ನೆ. ಅದರಲ್ಲಿ ಯಾವುದೇ ಹೊಂದಾಣಿಕೆಯನ್ನು ನಾವು ಮಾಡಿಕೊಂಡಿಲ್ಲ. ನಾನು ಜನರನ್ನು, ಅವರು ಯಾವುದೇ ಧರ್ಮದವರಾಗಿದ್ದರೂ ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಇಷ್ಟಕ್ಕೂ ಹಿಂದು ಧರ್ಮ ಇನ್ನೊಬ್ಬರನ್ನು

ದ್ವೇಷಿಸಬೇಕು ಎನ್ನುತ್ತದೆಯೇ? ಬಿಜೆಪಿಯವರು ಕೋಮುವಾದದ ಮೂಲಕ ಮತಗಳನ್ನು ಧರ್ಮದ ಆಧಾರದ ಮೇಲೆ ಕ್ರೋಢೀಕರಣ ಮಾಡುತ್ತಿದ್ದಾರೆ. ? ಆದರೆ, ವಿಭಜನೆಯೇ ಈಗ ರಾಜಕೀಯದ ಮೂಲಮಂತ್ರವಾಗಿದೆ, ಬಿಜೆಪಿ ಧರ್ಮ ವಿಭಜನೆ ಮಾಡುತ್ತಿದೆ ಎಂದು ಆರೋಪಿಸಲಾಗುತ್ತದೆ. ಕಾಂಗ್ರೆಸ್‌ನಿಂದ ಜಾತಿ ವಿಭಜನೆ ಆಗುತ್ತಿದೆಯೇ? ಅದ್ಯಾರು... ನಾವು ಜಾತಿ ವಿಭಜನೆ ಮಾಡುತ್ತಿದೇವೆ ಎಂದು ಹೇಳಿದ್ದು. ನಾವು ಎಲ್ಲಿ ಜಾತಿ ವಿಭಜನೆ ಮಾಡುತ್ತಿದ್ದೇವೆ?

* ಲಿಂಗಾಯತ ಪ್ರತ್ಯೇಕ ಧರ್ಮ ಎಂಬುದು ಜಾತಿ ವಿಭಜನೆಯ ತಂತ್ರ ಎಂಬ ಆರೋಪವಿದೆ?

ಅದು ಆರೋಪ ಅಷ್ಟೇ, ಸತ್ಯ ಅಲ್ಲ. ನಾವು ಜಾತಿ ವಿಭಜನೆ ಮಾಡುತ್ತಿಲ್ಲ. ಲಿಂಗಾಯತ ಧರ್ಮ ಮಾಡಬೇಕು ಎಂಬುದು ಕೆಲವರ ವಾದ. ಅವರು ಮನವಿ ಕೊಟ್ಟಿದ್ದಾರೆ. ವೀರಶೈವ-ಲಿಂಗಾಯತ ಧರ್ಮ ಆಗಬೇಕು ಎಂದು ಇನ್ನು ಕೆಲವರು ಪತ್ರ ಕೊಟ್ಟಿದ್ದಾರೆ. ಪಂಚ ಪೀಠದವರು, ನಾವು ಸನಾತನ ಧರ್ಮದ ಒಂದು ಭಾಗ ಎಂದು ಹೇಳುತ್ತಾರೆ. ಹೀಗೆ ಭಿನ್ನ ಅಭಿಪ್ರಾಯಗಳು ಇರುವುದರಿಂದ ನಾನು ಅಲ್ಪಸಂಖ್ಯಾತ ಆಯೋಗದಲ್ಲಿ ಇದರ ಚಾರಿತ್ರಿಕ, ಸಾಮಾಜಿಕ, ಕಾನೂನಿನ ಚೌಕಟ್ಟಿನಲ್ಲಿ ಅಧ್ಯಯನ ಮಾಡಿ ವರದಿ ನೀಡಲು ತಜ್ಞರ ಸಮಿತಿ ರಚನೆ ಮಾಡಿದ್ದೇನೆ. ಬಸವಣ್ಣ ಸನಾತನ ಧರ್ಮಕ್ಕೆ ವಿರುದ್ಧವಾಗಿದ್ದವರು. ಬಸವ ಅನುಯಾಯಿಗಳು ಲಿಂಗಾಯತ ಧರ್ಮ ಮಾಡಿ ಅಂತ ಹೇಳುತ್ತಾರೆ. ಇದರ ಅರ್ಥ ನಾನು ಅವರಿಗೆ ಸಪೋರ್ಟ್ ಮಾಡುತ್ತಿದ್ದೇನೆ ಎಂದು ಅಲ್ಲವಲ್ಲ...

ನೀವು ಯಾರಿಗೆ ಸಪೋರ್ಟ್ ಮಾಡುತ್ತೀರಿ?

ನನ್ನ ಅಭಿಪ್ರಾಯ ಬೇರೆಯೇ ಇದೆ. ಅದನ್ನು ನಾನು ಹೇಳಲು ಹೋಗುವುದಿಲ್ಲ. ಆದರೆ, ಅವರು (ಬಸವಣ್ಣನ ಅನುಯಾಯಿಗಳು) ಪ್ರತ್ಯೇಕ ಧರ್ಮ ಬೇಕು ಎಂದು ಹೇಳುತ್ತಿದ್ದಾರೆ. ಒಂದು ಸರ್ಕಾರಕ್ಕೆ ಅರ್ಜಿ ಕೊಟ್ಟಾಗ ನಾವು ಅದನ್ನು ಕಸದ ಬುಟ್ಟಿಗೆ ಎಸೆಯಲು ಆಗುತ್ತದೆಯೇ?

ಲಿಂಗಾಯತ, ವೀರಶೈವ ಒಟ್ಟಿಗೆ ಇರಬೇಕು ಎನ್ನುವವರು ತಜ್ಞರ ಸಮಿತಿ ರದ್ದು ಮಾಡದಿದ್ದರೆ, ನಿಮ್ಮ ವಿರುದ್ಧ ಧರ್ಮ ಯುದ್ಧ ಮಾಡುತ್ತೇವೆ ಎಂದಿದ್ದಾರಲ್ಲ?

ಹಾಗಂತ ಒಂದು ಗುಂಪು ಹೇಳುತ್ತಿದೆ. ಎಲ್ಲರೂ ಹೇಳುತ್ತಿಲ್ಲ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದೇ ತರಹದ ಮತ್ತೊಂದು ಮಹತ್ವದ ಜಾತಿ ವಿಭಜನೆ ಆರೋಪ ಸದಾಶಿವ ಆಯೋಗ ಕುರಿತಾದದ್ದು. ವರದಿ ಜಾರಿಗೆ ಸರ್ಕಾರ ಬದ್ಧವೇ? ಸದಾಶಿವ ಆಯೋಗವನ್ನು ನಾವು ರಚನೆ ಮಾಡಿಲ್ಲ. ಎಸ್. ಎಂ.ಕೃಷ್ಣ ಅವರ ಕಾಲದಲ್ಲಿ ರಚನೆಯಾಗಿದ್ದು. ಬಿಜೆಪಿ ಕಾಲದಲ್ಲಿ ವರದಿ ಕೊಟ್ಟಿದ್ದಾರೆ. ಈಗ ಅದರ ಬಗ್ಗೆ ಪರ-ವಿರೋಧ ಅಭಿಪ್ರಾಯಗಳಿವೆ. ಭಿನ್ನ ಅಭಿಪ್ರಾಯವಿರುವುದರಿಂದ ಇದೇ 13 ರಂದು ಸಭೆ ಕರೆದಿದ್ದೇನೆ. ಪರ-ವಿರೋಧ ಇರುವರನ್ನು ಕರೆಸಿ ಚರ್ಚೆ ಮಾಡುತ್ತೇವೆ.

 ದೇವೇಗೌಡರು ಇತ್ತೀಚೆಗೆ ನಿಮಗೊಂದು ಶಹಬಾಷ್ ಗಿರಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಅಮಿತ್ ಶಾನನ್ನು ಮೀರಿಸುವ ಚಾಣಾಕ್ಷ ಎಂದು ಒಪ್ಪುವಿರಾ?

ನಾವು ಚಾಣಾಕ್ಷ ಅಂತ ಹೇಳಲ್ಲ. ನಾನು ನೇರ ರಾಜಕಾರಣ ಮಾಡುತ್ತೇನೆ. ಹೇಳಬೇಕಿರುವುದನ್ನು ನೇರವಾಗಿ ಹೇಳುತ್ತೇನೆ. ಬಹುಶಃ ಅದಕ್ಕೆ ದೇವೇಗೌಡರು ಆ ಪದ ಬಳಸಿರಬೇಕು.

ನಿಮ್ಮ ತಂತ್ರಗಳ ಮುಂದೆ, ಅಮಿತ್ ಶಾ ತಂತ್ರಗಳು ಏನೇನೂ ಅಲ್ಲ ಅನ್ನೋದು ದೇವೇಗೌಡರ ಉವಾಚ?

ನನಗೆ ತಂತ್ರಗಳೇ ಗೊತ್ತಿಲ್ಲ. ನನ್ನ ತಂತ್ರ ಎಂದರೆ, ನೇರ ಮಾತು. ಬಹಳ ಜನ ರಾಜಕಾರಣಿಗಳು ನೇರ ಮಾತನಾಡುವುದಿಲ್ಲ. ಸತ್ಯ ಹೇಳುವುದಿಲ್ಲ. ಅಂತಹವರ ನಡುವೆ ನಾನು ಸತ್ಯ ಹೇಳುವುದರಿಂದ ತಂತ್ರಗಾರಿಕೆ ಮಾಡುತ್ತೇನೆ ಅಂತ ದೇವೇಗೌಡರು ಹೇಳ್ತಾರೆ. ನಾನು ತಂತ್ರಗಾರಿಕೆಯನ್ನು ಮಾಡಲ್ಲ. ಸತ್ಯ ಮರೆ ಮಾಚುವುದೂ ಇಲ್ಲ.

ಆಯ್ತು, ತಂತ್ರಗಾರಿಕೆ ಮಾಡುವ ಅಮಿತ್ ಶಾ, ನರೇಂದ್ರ ಮೋದಿ ರಾಜ್ಯಕ್ಕೆ ಗುಜರಾತ್ ಫಾರ್ಮುಲಾದೊಂದಿಗೆ ಬರುತ್ತಾರೆ. ಹೇಗೆ ಎದುರಿಸುವಿರಿ?

ಗುಜರಾತ್ ಅನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಲು ಆಗುವುದಿಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್ ಸೋಲಿಗೆ ಮುಖ್ಯ ಕಾರಣ ಅಲ್ಲಿ ನೆಟ್‌ವರ್ಕ್ ದುರ್ಬಲಗೊಂಡಿದ್ದದ್ದು. ಪ್ರತಿಪಕ್ಷದಲ್ಲಿದ್ದಾಗ ಸಹಜವಾಗಿಯೇ ನೆಟ್‌ವರ್ಕ್ ದುರ್ಬಲವಾಗಿರುತ್ತದೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ನೆಟ್‌ವರ್ಕ್ ಮತ್ತು ಪ್ರಾದೇಶಿಕ ನಾಯಕತ್ವ ಪ್ರಬಲವಾಗಿದೆ. ಹೀಗಾಗಿ, ಬಿಜೆಪಿಯವರು ಅಲ್ಲಿ ಮಾಡಿದ ತಂತ್ರ ಇಲ್ಲಿ ಮಾಡಿದರೆ, ನಡೆಯುವುದಿಲ್ಲ. ಇಷ್ಟಕ್ಕೂ ಕರ್ನಾಟಕ ಬಸವಣ್ಣನ ನಾಡು. ಕನಕದಾಸ, ಶಿಶುನಾಳ ಷರೀಫರ ನಾಡು. ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ವಿಭಜನೆ ರಾಜಕಾರಣ ಲಾಭ ತರುವುದಿಲ್ಲ.

ಗುಜರಾತ್‌ನಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಾದೇಶಿಕ ನಾಯಕತ್ವ ಕೊರತೆಯೂ ಕಾರಣ ಅಂತೀರಿ. ಇಲ್ಲಿ ನೀವು ಇದ್ದೀರಿ. ಚುನಾವಣೆಗೆ ನಾಯಕತ್ವವನ್ನು ಪಕ್ಷ ನೀಡಿದೆ. ಆದರೆ, ಮುಂದಿನ ಮುಖ್ಯಮಂತ್ರಿಯಾಗಿ ನಿಮ್ಮನ್ನು ಘೋಷಿಸುತ್ತಿಲ್ಲ?

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿ ಇಲ್ಲ. ಈ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂದು ಹೈಕಮಾಂಡ್ ಹೇಳಿದೆ. ಅಷ್ಟೇ ಅಲ್ಲ, ಕೆಪಿಸಿಸಿಗೆ ಲಿಖಿತ ವಾಗಿಯೇ ನೀಡಿದೆ. ಚುನಾವಣೆ ನಂತರ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತದೆ.

ನಾಯಕತ್ವ ನೀಡಿದಾಗ, ಅಭ್ಯರ್ಥಿ ಎಂದು ಘೋಷಿಸಲು ಹಿಂಜರಿಕೆ ಏಕೆ? ಇದು ದೌರ್ಬಲ್ಯವಲ್ಲವೇ?

ಕಾಂಗ್ರೆಸ್ ಕಳೆದ 70 ವರ್ಷಗಳಿಂದಲೂ ಚುನಾವಣೆ ವೇಳೆ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆಗ ದೌರ್ಬಲ್ಯವಾಗದಿದ್ದದ್ದು ಈಗ ಹೇಗೆ ಆಗುತ್ತದೆ. ಸಿಎಂ ಘೋಷಣೆ ಮಾಡದೆಯೇ ನಾವು ಗೆಲ್ಲುತ್ತಾ ಬಂದಿಲ್ಲವೇ?

ಸಿದ್ದರಾಮಯ್ಯ ಅವರನ್ನು ಸಿಎಂ ಕ್ಯಾಂಡಿಡೇಟ್ ಅಂತ ಘೋಷಿಸಲಿ ನೋಡೋಣ ಎಂದು ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್‌ಗೆ ಸವಾಲು ಹಾಕಿದ್ದಾರೆ?

ದೇವೇಗೌಡರು ರಾಜಕೀಯ ಉದ್ದೇಶವಿಟ್ಟುಕೊಂಡು ಈ ಮಾತು ಹೇಳಿದ್ದಾರೆ. ಅವರ ಲೆಕ್ಕಾಚಾರ ಏನೆಂದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿನ ಡಿವಿಷನ್ ಆಫ್ ವೋಟಿಂಗ್ (ಬಿಜೆಪಿಯ ಮತಗಳು ಛಿದ್ರಗೊಂಡಿದ್ದು) ಕಾಂಗ್ರೆಸ್ ಬಹುಮತ ಪಡೆಯಲು ಕಾರಣ. ನಿಜಕ್ಕೂ ಸಿದ್ದರಾಮಯ್ಯನ ಶಕ್ತಿ ಗೊತ್ತಾಗಬೇಕಾದರೆ, ಅವರನ್ನು ಸಿಎಂ ಎಂದು ಘೋಷಿಸಿ ಚುನಾವಣೆ ಎದುರಿಸಲಿ. ಆಗ ಸಿದ್ದರಾಮಯ್ಯ ಅವರ ಜನಪ್ರಿಯತೆ ಗೊತ್ತಾಗುತ್ತದೆ ಎಂಬ ಉದ್ದೇಶವಿರುವ ಹೇಳಿಕೆಯದು. ನೋಡಿ, ನಾನು ದೇವೇಗೌಡರನ್ನು ನಾಯಕ ಎಂದು ಒಪ್ಪುತ್ತೇನೆ. ಮಾಜಿ ಪ್ರಧಾನಿಯಾಗಿದ್ದವರು, ಮುಖ್ಯಮಂತ್ರಿಯಾಗಿದ್ದವರು ಅವರು, ಅವರೊಬ್ಬ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ನಾನೊಬ್ಬನೇ ಶಕ್ತಿವಂತ. ಉಳಿದವರ್ಯಾರೂ ಶಕ್ತಿವಂತರಲ್ಲ ಎಂದು ಅವರು ಹೇಳುವುದಿದೆಯಲ್ಲ, ಅದು ಸರಿಯಲ್ಲ. ಹಾಗಿದ್ದರೆ, ಈ ದೇವೇಗೌಡರು ಹಿಂದೆ ಸಾಜಪ ಎಂಬ ಪಕ್ಷ ಮಾಡಿ ಸೋತಿದ್ದು ಏಕೆ? ಆಗ ಕೇವಲ ಎರಡು ಸ್ಥಾನ ಆ ಪಕ್ಷಕ್ಕೆ ಬಂದಿರಲಿಲ್ಲವೇ? ಅದರ ಆಧಾರದ ಮೇಲೆ ನಾವು ದೇವೇಗೌಡರನ್ನು ಅಳೆಯಲು ಆಗುತ್ತದೆಯೇ?

ಕಾಂಗ್ರೆಸ್‌ಗೆ ಮುಸ್ಲಿಂ ಮತಗಳು ಒಗ್ಗೂಡಿ ಬೀಳುವುದನ್ನು ತಪ್ಪಿಸಲು ಜೆಡಿಎಸ್ ಹೆಚ್ಚು ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತದೆಯಂತೆ?

ಜೆಡಿಎಸ್ ಯಾವತ್ತೂ ಜಾತ್ಯತೀತ ತತ್ವಕ್ಕೆ ಬದ್ಧವಾದ ಪಕ್ಷವಲ್ಲ. ಅದೊಂದು ಅವಕಾಶವಾದಿ ಪಕ್ಷ. ಅದಕ್ಕೆ ಕುಟುಂಬ ರಾಜಕಾರಣ ಹಾಗೂ ಅಧಿಕಾರ ಮುಖ್ಯ. ಅದಕ್ಕಾಗಿ ಯಾರ ಜತೆ ಬೇಕಾದರೂ ಅವರು ಹೋಗುತ್ತಾರೆ. ಇದು ಮುಸ್ಲಿಮರಿಗೆ ಗೊತ್ತು. ಜೆಡಿಎಸ್ ನವರು ಮುಸ್ಲಿಂ ಅಭ್ಯರ್ಥಿ ಮಾಡಿದ ಕೂಡಲೇ ಎಲ್ಲಾ ಮುಸ್ಲಿಮರ ಮತ ಜೆಡಿಎಸ್‌ಗೆ ಹೋಗುವುದಿಲ್ಲ. ಅವರು ಯಾವ ಪಕ್ಷದಿಂದ ನಮಗೆ ರಕ್ಷಣೆ ಸಿಗುತ್ತದೆಯೋ, ಯಾವ ಪಕ್ಷ ಎಲ್ಲರನ್ನು ಸಮಾನವಾಗಿ ಕಾಣುತ್ತದೆಯೋ ಆ ಪಕ್ಷಕ್ಕೆ ಬೆಂಬಲ ನೀಡುತ್ತಾರೆ.

ಮುಸ್ಲಿಂ ಮತಗಳಿಗಾಗಿ ಓವೈಸಿ, ಎಸ್‌ಡಿಪಿಐನಂತಹ ಸಂಘಟನೆ, ಪಕ್ಷಗಳ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುತ್ತಾ?

ನಾವು ಮುಸ್ಲಿಮರೊಂದಿಗೆ ಇದ್ದೇವೆ. ಮುಸ್ಲಿಂ ಸಂಘಟನೆಗಳ ಜತೆ ಇಲ್ಲ. ನಾವು ಯಾವ ಪಕ್ಷ ಹಾಗೂ ಮುಸ್ಲಿಂ ಸಂಘಟನೆಗಳೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕೋಮುವಾದಿ ಸಂಘಟನೆ, ಅದು ಹಿಂದು ಆಗಿರಲಿ, ಮುಸ್ಲಿಂ ಆಗಿರಲಿ ಕಾಂಗ್ರೆಸ್ ಅವರೊಂದಿಗೆ ಹೋಗುವುದಿಲ್ಲ.

ರಾಜ್ಯಕ್ಕೆ ಗುಜರಾತ್‌ನ ದಲಿತ ನಾಯಕ ಜಿಗ್ನೇಶ್ ಮೇವಾನಿ ಬಂದಾಗ, ಕೋಮುವಾದಿ ಶಕ್ತಿ ಎದುರಿಸಲು ಎಲ್ಲಾ ಜಾತ್ಯತೀತ ಪಕ್ಷಗಳು ಒಂದಾಗಬೇಕು. ಕಾಂಗ್ರೆಸ್ ಅತಿ ಆತ್ಮವಿಶ್ವಾಸ ತೋರಬಾರದು ಎಂದಿದ್ದರು?

ಇಲ್ಲ. ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ಒಗ್ಗೂಡುವ ಅಗತ್ಯವಿಲ್ಲ. ಆದರೆ, ದೇಶದಲ್ಲಿ ಅಗತ್ಯವಿದೆ. ಕೋಮುವಾದಿಗಳ ಕಬಂಧ ಬಾಹು ಎಲ್ಲಾ ಕಡೆ ವ್ಯಾಪಿಸುತ್ತಿದೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ಶಕ್ತಿಗಳು ಕ್ರೋಢೀಕರಣವಾಗಬೇಕಾದ ಅಗತ್ಯವಿದೆ.

ನೀವು ಮತ್ತೆ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಿಲ್ಲುತ್ತೇನೆ ಎನ್ನುವಿರಿ. ಆದರೆ, ಕ್ಷೇತ್ರ ಬದಲಾವಣೆ ವಿಚಾರ ಮತ್ತೆ ಮತ್ತೆ ಬರುತ್ತಿದೆ?

ಯಾರೋ ನನಗೆ ಆಗದವರು ಆ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಚಾಮುಂಡೇಶ್ವರಿ ನನ್ನನ್ನು ರಾಜಕೀಯವಾಗಿ ಬೆಳೆಸಿದ ಕ್ಷೇತ್ರ. ಐದು ಬಾರಿ ಅಲ್ಲಿ ಗೆದ್ದಿದ್ದೇನೆ. ಆ ಕ್ಷೇತ್ರವನ್ನು ಬಿಟ್ಟು ಏಕೆ ಹೋಗಬೇಕು? ಸುಮ್ಮನೆ ಇವರೇ ಊಹಾಪೋಹ ಮಾಡುತ್ತಿದ್ದಾರೆ.

? ಅಲ್ಲಿ ನಿಮ್ಮ ವಿರೋಧಿಗಳು ಒಟ್ಟಾಗಿಬಿಟ್ಟಿದ್ದಾರೆ. ಹೀಗಾಗಿ, ನೀವು ಕ್ಷೇತ್ರ ಬದಲಾಯಿಸುವಿರಾ?

ವಿರೋಧಿಗಳು ಒಟ್ಟಾದಾಗಲೇ ನಾನು ಸ್ಟ್ರಾಂಗ್ ಆಗುವುದು. 2006 ರ ಉಪಚುನಾವಣೆಯಲ್ಲಿ ಎಲ್ಲ ವಿರೋಧಿಗಳು ಒಟ್ಟಾಗಿದ್ದರೂ ನಾನು ಗೆಲ್ಲಲ್ಲಿಲ್ಲವೇ? ಅವರದ್ದೇ ಸರ್ಕಾರವಿತ್ತು. ಯದ್ವಾತದ್ವ ಖರ್ಚು ಮಾಡಿದರು. ಜಾತಿ ಮಾಡಿದರೂ... ಎಲ್ಲಾ ಮಾಡಿದರೂ... ನಾನೇ ಗೆದ್ದೆ.

ವರುಣಾ ಕ್ಷೇತ್ರವನ್ನು ತೊರೆಯಲು ಕಾರಣವೇನು?

ಅಲ್ಲಿ ನನ್ನ ಪುತ್ರನಿಗೆ ಹೈಕಮಾಂಡ್ ಟಿಕೆಟ್ ಕೊಟ್ಟರೆ ಆತ ಅಲ್ಲಿ ಚುನಾವಣೆಗೆ ನಿಲ್ಲಲಿ. ಇನ್ನು ಬಹುತೇಕ ಇದು ನನ್ನ ಕೊನೆ ಚುನಾವಣೆ. ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ಹೀಗಾಗಿ ಕೊನೆ ಚುನಾವಣೆಯನ್ನು ಅಲ್ಲಿಯೇ ಸ್ಪರ್ಧೆ ಮಾಡಬೇಕು ಎಂದು ನನಗೆ ಆಸೆ. ಒಂದು ರೀತಿ ಇದು ಎಮೋಷನಲ್ ಅಟ್ಯಾಚ್‌ಮೆಂಟ್.

ಕಳೆದ ಬಾರಿಯೂ ಇದು ನನ್ನ ಕೊನೆ ಚುನಾವಣೆ ಎಂದು ನೀವು ಹೇಳಿದ್ದಿರಿ?

ಕಳೆದ ಬಾರಿಯೂ ಘೋಷಿಸಿದ್ದೆ. ಐದು ವರ್ಷ ಸರ್ಕಾರ ನಡೆಸಿದ್ದೇನೆ. ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ನನ್ನ ಜವಾಬ್ದಾರಿಯಿದೆ. ಈ ಜವಾಬ್ದಾರಿಯಿಂದ ನಾವು ಓಡಿ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಮತ್ತೆ ಸ್ಪರ್ಧಿಸುತ್ತಿದ್ದೇನೆ.

ನಿಮ್ಮ ಪುತ್ರ ಚುನಾವಣೆಗೆ ಬರುತ್ತಿದ್ದಾರೆ ಎಂಬ ಕಾರಣ ಮುಂದಿಟ್ಟುಕೊಂಡು ನಿಮ್ಮ ಪಕ್ಷದ ಇತರ ನಾಯಕರು ತಮ್ಮ ಮಕ್ಕಳಿಗೂ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದಾರಂತಲ್ಲ?

ಮಕ್ಕಳನ್ನು ರಾಜಕಾರಣಕ್ಕೆ ತರುವುದು ಅಪರಾಧವಲ್ಲ. ಜನರು ಒಪ್ಪಿಕೊಂಡರೆ ಅವರು ರಾಜಕಾರಣಕ್ಕೆ ಬಂದರೆ ತಪ್ಪೇನು?

20 ಜಿಲ್ಲೆಗಳಲ್ಲಿ ಓಡಾಡಿ, ಸುಮಾರು 12 ಸಾವಿರ ಕೋಟಿ ರು. ಕಾಮಗಾರಿ ಘೋಷಿಸಿದ್ದೀರಿ. ಆದರೆ, ಇವೆಲ್ಲ ಹಳೆಯವು, ನಾವು ಘೋಷಿಸಿದವು ಎಂದು ಬಿಜೆಪಿಯವರು ಹೇಳುತ್ತಾರಲ್ಲ?

ಐದು ವರ್ಷದಲ್ಲಿ ಎಲ್ಲಾ ಮಾಡಲು ಆಗುತ್ತಾ? ಉದಾಹರಣೆಗೆ ಎತ್ತಿನ ಹೊಳೆ ಪ್ರಾಜೆಕ್ಟ್ ಆಗಿದ್ದು ಸದಾನಂದಗೌಡರ ಕಾಲದಲ್ಲಿ. ನಾವು ಬಂದ ನಂತರ ಅದನ್ನು ಪರಿಷ್ಕರಿಸಿ, ಅನುಮೋದನೆ ನೀಡಿ, ಮಾಡಿ ಕೆಲಸ ಆರಂಭಿಸಿದ್ದೇವೆ. ಅದನ್ನು ಬಿಜೆಪಿಯವರು ತಮ್ಮದು ಎಂದು ಬಿಟ್ಟರೆ ಹೇಗೆ? ಅದು ಅವರ ಯೋಜನೆ ಆಗಿ ಬಿಡುತ್ತದೆಯೇ? ಯಾರು ಒಂದು ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿ, ಟೆಂಡರ್ ಕರೆದು, ಯೋಜನೆ ಆರಂಭಿಸಲು ಹಣ ನೀಡುತ್ತಾರೆಯೋ ಅದು ಅವರ ಕಾಲದ ಕೆಲಸವಾಗುತ್ತದೆ.