ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವಸತಿ ರಹಿತರಿಗೆ ಬೆಂಗಳೂರು ನಗರದಲ್ಲಿ ಸ್ವಂತ ಸೂರು ಒದಗಿಸುವ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಬೆಂಗಳೂರು(ಡಿ.6): ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವಸತಿ ರಹಿತರಿಗೆ ಬೆಂಗಳೂರು ನಗರದಲ್ಲಿ ಸ್ವಂತ ಸೂರು ಒದಗಿಸುವ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ವಸತಿ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರು ನಗರ ಜಿಲ್ಲೆಯ 1,200 ಎಕರೆ ಜಮೀನಿನಲ್ಲಿ ಕೆಳ ಅಂತಸ್ತು ಹೊರತುಪಡಿಸಿ ಮೂರು ಮಹಡಿಯ ವಸತಿ ಗೃಹಗಳನ್ನು ನಿರ್ಮಿಸಿ, ಅರ್ಹ ಕುಟುಂಬಗಳಿಗೆ ವಿತರಿಸಲಾಗುವುದು ಎಂದರು.

ಬಿಬಿಎಂಪಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕನಿಷ್ಠ 5 ವರ್ಷಗಳ ಕಾಲ ಸೂರಿಲ್ಲದೆ ವಾಸಿಸುತ್ತಿರುವ ಅರ್ಹ ಫಲಾನುಭವಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಕುಟುಂಬದ ವಾರ್ಷಿಕ ಆದಾಯ ಗರಿಷ್ಠ 87 000 ರು.ಗಳ ಒಳಗಿರಬೇಕು. ಯೋಜನೆಯಡಿ ಪ್ರತಿ ಮನೆಗೆ 5.50 ಲಕ್ಷ ರು.ದಿಂದ 6 ಲಕ್ಷ ರು. ಹಣ ಖರ್ಚು ಮಾಡಲಾಗುತ್ತಿದೆ.

ಮನೆಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಶೇ.30ರಷ್ಟು, ಪರಿಶಿಷ್ಟ ವರ್ಗಕ್ಕೆ ಸೇರಿದವರಿಗೆ ಶೇ.10ರಷ್ಟು , ಅಲ್ಪಸಂಖ್ಯಾತರಿಗೆ ಶೇ.10ರಷ್ಟು ಹಾಗೂ ಸಾಮಾನ್ಯ ವರ್ಗ ದವರಿಗೆ ಶೇ.50ರಷ್ಟು ಮೀಸಲಿನಡ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 3.50 ಲಕ್ಷ ರು. ಹಾಗೂ ಸಾಮಾನ್ಯ ವರ್ಗದ ವರಿಗೆ 2.70 ಲಕ್ಷ ರು.ಸಹಾಯಧನ ನೀಡಲಿದ್ದು, ಮನೆ ಹಂಚಿಕೆ ವೇಳೆಯಲ್ಲಿ ಫಲಾನುಭವಿಗಳು ಹಣವನ್ನು ತುಂಬಬಹುದಾಗಿದೆ.

ಅಲ್ಲದೇ ಬ್ಯಾಂಕ್ ಗಳಿಂದ ಸಾಲದ ನೆರವು ಪಡೆಯಲು ಸಹಾಯ ಮಾಡಲಾಗುವುದು ಎಂದು ಹೇಳಿದರು. 2018ರ ಜನವರಿ 5ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕವನ್ನು 250 ರು.ಗಳಿಂದ 1000 ರು.ಗಳಿಗೆ ಇಳಿಸಲಾಗಿದೆ. ಶೇ.75ರಷ್ಟು ಮನೆಗಳನ್ನು ಲಾಟರಿ ಮೂಲಕ ಹಾಗೂ ಶೇ.25ರಷ್ಟು ಮನೆಗಳನ್ನು ಕಡುಬಡವರಿಗೆ ಆದ್ಯತೆಯ ಮೇಲೆ ಹಂಚಿಕೆ ಮಾಡಲಾಗುವುದು. ಈ ಯೋಜನೆಯಡಿ ವಸತಿ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಎಂದರು.

ದೇಶದಲ್ಲೇ ಈ ವಸತಿ ಯೋಜನೆ ವಿಶಿಷ್ಟವಾಗಿದ್ದು, ಪ್ರತಿ ವರ್ಷ ಒಂದು ಲಕ್ಷ ಮನೆಗಳ ನಿರ್ಮಾಣ ಮಾಡುವ ಉದ್ದೇಶ ಸರ್ಕಾರದ್ದಾಗಿದೆ. ಈ ಯೋಜನೆ ನಿರಂತರವಾಗಿ ನಡೆಯಲಿದೆ. ಇದರ ಉಪಯೋಗ ವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ವಸತಿ ಸಚಿವ ಎಂ. ಕೃಷ್ಣಪ್ಪ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದ ರಾಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.