ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ, ನ್ಯಾಯಸಮ್ಮತವಾಗಿಯೇ ಚುನಾವಣೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು (ಮಾ.24):  ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ, ನ್ಯಾಯಸಮ್ಮತವಾಗಿಯೇ ಚುನಾವಣೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಸಚಿವ ಕಾಗೋಡು ತಿಮ್ಮಪ್ಪ ಮತ್ತು ಶಾಸಕ ಬಾಬುರಾವ್‌ ಚಿಂಚನಸೂರು ತಪ್ಪು ಮತ ಚಲಾಯಿಸಿರುವ ಕುರಿತು ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್‌ಗೆ ಸೋಲು ಖಚಿತ ಎಂಬುದು ಮನವರಿಕೆಯಾದ ಮೇಲೆ ಇಲ್ಲದ ಆರೋಪ ಮಾಡಲಾಗಿದೆ. ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿಯೂ ಅಕ್ರಮ ನಡೆದಿಲ್ಲ. ನ್ಯಾಯಸಮ್ಮತವಾಗಿ ಚುನಾವಣೆ ನಡೆದಿದೆ. ಜೆಡಿಎಸ್‌ ಚುನಾವಣೆ ಬಹಿಷ್ಕಾರ ಮಾಡಿದರೂ ಅಥವಾ ಮತದಾನಕ್ಕೆ ಗೈರು ಹಾಜರಿಯಾದರೂ ನಮಗೆ ಸಂಬಂಧ ಇಲ್ಲ ಎಂದು ಹೇಳಿದರು.

ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್‌ ಚಿಂಚನಸೂರು ಅವರು ಮತ ಚಲಾಯಿಸುವ ಅಂತಿಮ ಹಂತದಲ್ಲಿ ತಪ್ಪು ಮಾಡಿರುವುದನ್ನು ಗಮನಿಸಿದ್ದಾರೆ. ಹೀಗಾಗಿ ಮತ್ತೊಂದು ಬ್ಯಾಲೆಟ್‌ ಪೇಪರ್‌ ತೆಗೆದುಕೊಂಡು ಮತ ಚಲಾಯಿಸಿದ್ದಾರೆ. ಈ ರೀತಿ ಮಾಡಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಸ್ಪಷ್ಟನೆ ನೀಡಿದ ಅವರು, ಜೆಡಿಎಸ್‌ ನಾಯಕರು ಹತಾಶೆಗೊಳಗಾಗಿ ಮಾತನಾಡಿದ್ದಾರೆ. ಈಗಾಗಲೇ ಬಂಡಾಯ ಶಾಸಕರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ವಿಫಲರಾಗಿದ್ದಾರೆ. ಸೋಲು ಖಚಿತ ಎಂಬುದು ತಿಳಿದಿದ್ದ ಕಾರಣ ಬೇರೆ ದಾರಿ ಕಾಣದೆ ಹತಾಶೆಯಾಗಿ ಇಂತಹ ತಂತ್ರ ಅನುಸರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.