ಜಾತಿವಾರು ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆ ಆಧರಿಸಿ ಮೀಸಲಾತಿಯನ್ನು ಶೇ.50ರಿಂದ 70ಕ್ಕೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದ್ದು, ಶೋಷಿತ ವರ್ಗಗಳ ಬಗ್ಗೆ ಬದ್ಧತೆಯಿದ್ದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೀಸಲಾತಿ ಹೆಚ್ಚಳಕ್ಕೆ ಸಹಕರಿಸುವುದಾಗಿ ಘೋಷಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬೆಂಗಳೂರು: ಜಾತಿವಾರು ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆ ಆಧರಿಸಿ ಮೀಸಲಾತಿಯನ್ನು ಶೇ.50ರಿಂದ 70ಕ್ಕೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದ್ದು, ಶೋಷಿತ ವರ್ಗಗಳ ಬಗ್ಗೆ ಬದ್ಧತೆಯಿದ್ದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೀಸಲಾತಿ ಹೆಚ್ಚಳಕ್ಕೆ ಸಹಕರಿಸುವುದಾಗಿ ಘೋಷಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಮತಕ್ಕಾಗಿ ಮೀಸಲಾತಿ ಹೆಚ್ಚಳ ಘೋಷಣೆ ರುವುದಾಗಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮೀಸಲಾತಿ ಹೆಚ್ಚಳದ ಪರವಾಗಿದ್ದರೆ ಬಹಿರಂಗವಾಗಿ ಘೋಷಿಸುವ ಧೈರ್ಯ ತೋರಿಸಲಿ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಗೊರಗುಂಟೆಪಾಳ್ಯದ ಡಾ.ಪ್ರಭಾಕರ್ ಕೋರೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೋವಿ ಅಭಿವೃದ್ಧಿ ನಿಗಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮೀಸಲಾತಿಯನ್ನು ಶೇ.50 ರಿಂದ 70ಕ್ಕೆ ಹೆಚ್ಚಳ ಮಾಡಬೇಕೆಂಬುದು ನಮ್ಮ ಬದ್ಧತೆಯಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೀಸಲಾತಿ ಪರವಾಗಿದ್ದರೆ ಬಹಿರಂಗವಾಗಿ ಮೀಸಲಾತಿ ಹೆಚ್ಚಳಕ್ಕೆ ಸಹಕಾರ ಘೋಷಿಸಲಿ ಎಂದರು.
ಮೀಸಲಾತಿ ಹೆಚ್ಚಳ ಮಾಡಲು ಈಗಾಗಲೇ ಪ್ರಯತ್ನ ಆರಂಭಿಸಿದ್ದೇನೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಿದರೆ ಮೆರಿಟ್ ಹೋಗಿಬಿಡುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೆರಿಟ್ (ಪ್ರತಿಭೆ) ಎಂಬುದು ಯಾರ ಸ್ವತ್ತೂ ಅಲ್ಲ. ಪ್ರತಿಭೆಯನ್ನು ಬೆಳೆಸಲು ಸೂಕ್ತ ವಾತಾವರಣ ನಿರ್ಮಿಸುವುದು ನಮ್ಮ ಬದ್ಧತೆ. ಮೀಸಲಾತಿ ವಿರೋಧಿಸಿ ಹೋರಾಟ ಮಾಡುವ ನಿಮ್ಮಿಂದ ನಾನು ಮೀಸಲಾತಿ ಪಾಠ ಕಲಿಯಬೇಕಾಗಿಲ್ಲ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದರು.
ಭೋವಿ ಸಮಾಜದ ಅಭಿವೃದ್ಧಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಮಠದ ಸ್ವಾಮೀಜಿಗಳು ಮಠಕ್ಕೆ ಹಣ, ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ, ಆಡಳಿತದಲ್ಲಿ ಅವಕಾಶ ಕೇಳಿದ್ದಾರೆ. ಈ ಎಲ್ಲವನ್ನೂ ಈಡೇರಿಸಲು ನಾನು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
ನಿಮಗಾಗಿ ದುಡಿದಿದ್ದೇನೆ ಆಶೀರ್ವದಿಸಿ: ಹಿಂದಿನ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ₹21 ಸಾವಿರ ಕೋಟಿ ಕೊಟ್ಟಿದ್ದರು. ನಾನು ಅಧಿಕಾರಕ್ಕೆ ಬಂದ ಬಳಿಕ ಎಸ್‌ಸಿ, ಎಸ್‌ಟಿಗೆ ₹86 ಸಾವಿರ ಕೋಟಿ ಹಣ ನೀಡಿದ್ದೇನೆ. ಎಸ್‌ಸಿ,ಎಸ್‌ಟಿಗಳಿಗೆ ಗುತ್ತಿಗೆಯಲ್ಲೂ ಮೀಸಲಾತಿ ನೀಡಿದ ದೇಶದ ಮೊದಲ ರಾಜ್ಯ ನಮ್ಮದು. ಹೀಗಾಗಿ ನಿಮಗಾಗಿ ದುಡಿದಿರುವ ಹಾಗೂ ಮುಂದೆಯೇ ನಿಮ್ಮ ಏಳಿಗೆಗಾಗಿ ಶ್ರಮಿಸುವ ನಮಗೆ ಆಶೀರ್ವಾದ ಮಾಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಮನವಿ ಮಾಡಿದರು.
ಭೋವಿ ಸಮುದಾದವರು ಶ್ರಮಜೀವಿಗಳು. ದೇವಾಲಯದಿಂದ ಸಮಾಧಿವರೆಗೆ ಪ್ರತಿಯೊಂದೂ ನಿಮ್ಮ ಶ್ರಮದ ಫಲವಾಗಿಯೇ ನಿರ್ಮಾಣವಾಗುತ್ತದೆ. ನೀವು ಕೆಲಸಕ್ಕಾಗಿ ವಲಸೆ ಹೋಗುವುದರಿಂದ ನಿಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೈ ಮುಗಿದು ಬೇಡುತ್ತೇನೆ. ದಯವಿಟ್ಟು ನೀವು ಏನೇ ಮಾಡಿದರೂ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಮರೆಯಬೇಡಿ ಎಂದು ಅವರು ಕೋರಿದರು.
ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿ: ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಚಿವ ಶಿವರಾಜ ತಂಗಡಗಿ, ಭೋವಿ ಸಮುದಾಯದವರು ಹೆಚ್ಚಾಗಿ ಕಲ್ಲು ಒಡೆದು ಜೀವನ ನಡೆಸುವರು. ಆದರೆ ಈಗ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಿರುವುದರಿಂದ ಭೋವಿ ಜನರ ಜೀವನ ಸಾಕಷ್ಟು ದುಸ್ತರವಾಗಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಸಣ್ಣ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಶ್ರೀ ಸಿದ್ದರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಅನ್ನ ಭಾಗ್ಯದ ಹಾಗೆ ರಾಜ್ಯದಲ್ಲಿ ಉದ್ಯೋಗ ಭಾಗ್ಯಯೋಜನೆ ಜಾರಿ ಮಾಡಬೇಕು ಎಂದು ಮನವಿ ಮಾಡಿದರು.
