ಮುಖ್ಯಮಂತ್ರಿಯಾದ ಬಳಿಕ ಚಾಮರಾಜನಗರಕ್ಕೆ ಏಳು ಬಾರಿ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವ ಭಾವನೆ ಈ ಹಿಂದೆ ಇತ್ತು. ಹೀಗಾಗಿ ಮುಖ್ಯ ಮಂತ್ರಿಯಾದವರು ಚಾಮರಾಜನಗರ ಭೇಟಿಯಿಂದ ದೂರವೇ ಉಳಿಯುತ್ತಿದ್ದರು. ಆದರೆ, ಮೂಢನಂಬಿಕೆಯನ್ನು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಸಿದ್ದರಾಮಯ್ಯ ಮಾತ್ರ ಇಂಥ ಭಾವನೆ ಹುಸಿ ಮಾಡಲೆಂದೇ ಚಾಮರಾಜನಗರಕ್ಕೆ ಏಳು ಬಾರಿ ಭೇಟಿ ನೀಡಿದ್ದಾರೆ.

ಚಾಮರಾಜನಗರ(ಆ.11): ಮುಖ್ಯಮಂತ್ರಿಯಾದ ಬಳಿಕ ಚಾಮರಾಜನಗರಕ್ಕೆ ಏಳು ಬಾರಿ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವ ಭಾವನೆ ಈ ಹಿಂದೆ ಇತ್ತು. ಹೀಗಾಗಿ ಮುಖ್ಯ ಮಂತ್ರಿಯಾದವರು ಚಾಮರಾಜನಗರ ಭೇಟಿಯಿಂದ ದೂರವೇ ಉಳಿಯುತ್ತಿದ್ದರು. ಆದರೆ, ಮೂಢನಂಬಿಕೆಯನ್ನು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಸಿದ್ದರಾಮಯ್ಯ ಮಾತ್ರ ಇಂಥ ಭಾವನೆ ಹುಸಿ ಮಾಡಲೆಂದೇ ಚಾಮರಾಜನಗರಕ್ಕೆ ಏಳು ಬಾರಿ ಭೇಟಿ ನೀಡಿದ್ದಾರೆ.

ನಗರದ ತಾಲೂಕು ಕಚೇರಿ ಸಮೀಪದ ಮೈದಾನದಲ್ಲಿ ಗುರುವಾರ ಬಿ.ರಾಚಯ್ಯ ಸ್ಮಾರಕ ನಿರ್ಮಾಣ, ಬಿ. ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಶಿಲಾನ್ಯಾಸ ಕಾರ್ಯಕ್ರಮದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ, ನನ್ನ ಕಾರಿನ ಮೇಲೆ ಕಾಗೆ ಕೂತರೆ ಅಪಶಕುನ ಎಂಬ ಗೊಡ್ಡು ಮೂಢನಂಬಿಕೆಗಳಿಗೆಲ್ಲ ನಾನು ತಲೆಕೆಡಿಕೊಳ್ಳುವುದಿಲ್ಲ. ವಿಕೃತ ಮನಸ್ಸಿದ್ದರೆ ಯಾವ ದೇವರೂ ಒಳ್ಳೆಯದು ಮಾಡುವುದಿಲ್ಲ. ಒಳ್ಳೆಯ ಮನಸ್ಸಿದ್ದರೆ ಎಲ್ಲ ದೇವರೂ ಒಳ್ಳೆಯದನ್ನೇ ಮಾಡುತ್ತಾರೆ ಎಂದು ಪ್ರತಿಪಾದಿಸಿದರು.

ಚಾಮರಾಜನಗರಕ್ಕೆ ಬಂದರೆ ಮುಖ್ಯಮಂತ್ರಿಯ ಅಧಿಕಾರಕ್ಕೆ ಹೋಗುತ್ತದೆ ಎಂಬ ಮೂಢನಂಬಿಕೆಯನ್ನು ಹೋಗಲಾಡಿಸಿದ್ದೇನೆ. ಈಗ ಚಾಮರಾಜನಗರ ಆ ಮೂಢನಂಬಿಕೆಯಿಂದ ಮುಕ್ತವಾಗಿದೆ. ಆ ಮೂಢನಂಬಿಕೆ ಹೋಗಬೇಕು ಎಂದೇ ನಾನು ಪದೇ ಪದೆ ಚಾಮರಾಜನಗರಕ್ಕೆ ಬರುತ್ತಿದ್ದೇನೆ. ನನ್ನ ಅಧಿಕಾರ ಇದರಿಂದ ಮತ್ತಷ್ಟು ಗಟ್ಟಿಯಾಗಿದೆ. 2018ರ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 1997ರಲ್ಲಿ ಚಾಮರಾಜನಗರ ಜಿಲ್ಲೆಯಾಗಿ ಘೋಷಣೆ ಮಾಡಿದಾಗ ವಾಟಾಳ್ ನಾಗರಾಜ್ ಮತ್ತಿತರರು ಸೇರಿಕೊಂಡು ಸಮಾಜವಾದಿ ಜೆ.ಎಚ್. ಪಟೇಲರನ್ನು ಅಧಿಕಾರ ಕಳೆದುಕೊಳ್ಳಲಿದ್ದಾರೆಂಬ ಆತಂಕದಿಂದ ಮಹದೇಶ್ವರ ಬೆಟ್ಟದಲ್ಲಿ ಕಾರ್ಯಕ್ರಮ ಮಾಡಿಸಿದರು. ನಾನು, ಬಿ. ರಾಚಯ್ಯನವರು, ಎ.ಆರ್. ಕೃಷ್ಣಮೂರ್ತಿ ಸೇರಿಕೊಂಡು ಚಾಮರಾಜನಗರದಲ್ಲಿ ಕಾರ್ಯಕ್ರಮ ಮಾಡಿ, ಕೀ ಕೊಟ್ಟು ಹೋದೆವು. ರಾಚಯ್ಯನವರು ರಾಜ್ಯಪಾಲರಾದರು. ನಾನು ಮುಖ್ಯಮಂತ್ರಿಯಾದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾಗೆ ಕೂತರೇನು, ಗೂಬೆ ಕೂತರೇನು?:

ಕೆಲವರು, ಸಿದ್ದರಾಮಯ್ಯ ಕಾರಿನ ಮೇಲೆ ಕಾಗೆ ಕೂತುಬಿಟ್ಟಿತು, ಅದು ಅಪಶಕುನ ಎಂದರು. ಕಾಗೆಯೂ ಒಂದು ಪಕ್ಷಿ, ಅದು ಕಾರಿನ ಮೇಲೆ ಕೂತರೆ ತಪ್ಪೇನು? ‘ಕಾಗೆ ಕೂತ್ ಬಿಡ್ತು, ಶನಿ ಹೆಗಲೇರ್‌ಬುಟ್ಟ ಅಂತ ಹೇಳಿದ್ದೇ ಹೇಳಿದ್ದು. ಕಾಗೆ ಕೂತರೇನು, ಗೂಬೆ ಕೂತರೇನು, ಗರುಡ ಕೂತರೇನು? ಎಲ್ಲ ಪ್ರಾಣಿ, ಪಕ್ಷಿಗಳೂ ಒಂದೇ’ ಎಂದು ಮುಖ್ಯಮಂತ್ರಿ ವಿಶ್ಲೇಷಿಸಿದರು.