ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಮತದಾನ ಪ್ರಮಾಣ ಎಷ್ಟೇ ನಡೆದಿದ್ದರೂ ಗೆಲ್ಲುವುದು ನಾವೇ. ಈ ಎರಡೂ ಚುನಾವಣೆಗಳಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಗೆಲುವು ನಮ್ಮ ಪರವಾಗಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದರು.

ಮೈಸೂರು: ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ಉಪ ಚುನಾವಣೆಯ ಮತದಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಎರಡೂ ಕ್ಷೇತ್ರಗಳಲ್ಲಿಯೂ ಗೆಲುವು ಕಾಂಗ್ರೆಸ್‌ನದ್ದೇ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಮತದಾನ ಪ್ರಮಾಣ ಎಷ್ಟೇ ನಡೆದಿದ್ದರೂ ಗೆಲ್ಲುವುದು ನಾವೇ. ಈ ಎರಡೂ ಚುನಾವಣೆಗಳಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಗೆಲುವು ನಮ್ಮ ಪರವಾಗಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದರು.

ಅಂತರ ಕಡಿಮೆಯಾದರೂ ನನ್ನದೇ ಗೆಲುವು: ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ಹಣದ ಹೊಳೆ ಹರಿಸಿದ್ದು ನನಗೆ ಬೇಸರ ತಂದಿದೆ. ಆದರೆ ಜನರು ಹಣಕ್ಕೆ ಬೆಲೆ ಕೊಡಲ್ಲ ಎಂದು ಬಿಜೆಪಿ ಅಭ್ಯರ್ಥಿಯಾದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಹೇಳಿದ್ದಾರೆ. ನಂಜನಗೂಡಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಇದು ದುರಹಂಕಾರ- ಸ್ವಾಭಿಮಾನ ನಡುವಿನ ಹೋರಾಟವಾಗಿದೆ. ಕಾಂಗ್ರೆಸ್‌ ಹಣದ ಹೊಳೆ ಹರಿಸುತ್ತಿದ್ದಾರೆ. ಇದರಿಂದ ತನ್ನ ಗೆಲವಿನ ಅಂತರ ಕಡಿಮೆಯಾಗುತ್ತದೆ. ಆದರೆ ಗೆಲುವು ತನ್ನದೇ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಹಣದ ಹೊಳೆಯಲ್ಲಿ ಚಾಮುಂಡೇಶ್ವರಿ ಉಪಚುನಾವಣೆಯನ್ನೇ ಮೀರಿಸುತ್ತಿದ್ದು, ಹಣ ಹಂಚುವುದರಲ್ಲಿ ಕೆಳ ಮಟ್ಟದ ಪೊಲೀಸರು ಶಾಮೀಲಾಗಿದ್ದಾರೆ. ರಾಜ್ಯದಲ್ಲಿ ಇಂತಹ ಭ್ರಷ್ಟಾಚಾರ ನೋಡಿರಲಿಲ್ಲ. ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿದಿದ್ದಾರೆ ಎಂದರು.

ಗೆಲ್ಲುತ್ತೇನೆ- ಕಳಲೆ: ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಉಪಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಈ ನಡುವೆ ಗುಂಡ್ಲುಪೇಟೆಯ ಕಾಂಗ್ರೆಸ್‌ ಅಭ್ಯರ್ಥಿ ಗೀತಾ, ಬಿಜೆಪಿ ಅಭ್ಯರ್ಥಿ ನಿರಂಜನ್‌ ಅವರೂ ತಾವೇ ಗೆಲ್ಲುವುದಾಗಿ ಅಚಲ ವಿಶ್ವಾಸ ವ್ಯಕ್ತಪಡಿಸಿದರು.