ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಓದಿದ ಶಾಲೆಯ ಋಣ ತಿರಿಸುವ ಮೂಲಕ ಮಕ್ಕಳಿಗೆ ಕನ್ನಡ ಪಾಠ ಮಾಡಿದ ಪ್ರಸಂಗ ಮಂಗಳವಾರ ನಡೆಯಿತು. ಮೈಸೂರು ತಾಲೂಕು ಕುಪ್ಪೇಗಾಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ‘ನಾ ಕಲಿತ ಶಾಲೆಯ ತೀರಿಸುವೆ ಋಣವ’  ಎಂಬ ವಿನೂತನ ಕಾರ್ಯಕ್ರಮಕ್ಕೆ  ಚಾಲನೆ ನೀಡಿದ ಸಿದ್ದರಾಮಯ್ಯ, ಮಕ್ಕಳಿಗೆ  ವ್ಯಾಕರಣ ಪಾಠ ಮಾಡಿದರು.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಓದಿದ ಶಾಲೆಯ ಋಣ ತಿರಿಸುವ ಮೂಲಕ ಮಕ್ಕಳಿಗೆ ಕನ್ನಡ ಪಾಠ ಮಾಡಿದ ಪ್ರಸಂಗ ಮಂಗಳವಾರ ನಡೆಯಿತು.

ಮೈಸೂರು ತಾಲೂಕು ಕುಪ್ಪೇಗಾಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ‘ನಾ ಕಲಿತ ಶಾಲೆಯ ತೀರಿಸುವೆ ಋಣವ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ಮಕ್ಕಳಿಗೆ ವ್ಯಾಕರಣ ಪಾಠ ಮಾಡಿದರು.

ಇತ್ತೀಚೆಗೆ ಸದನದಲ್ಲಿ ಪ್ರಸ್ತಾಪಿಸಿದ ಸಂಧಿ ಪ್ರಸಂಗವನ್ನು ಇಲ್ಲೂ ಸ್ಮರಿಸಿದ ಅವರು, ತಮ್ಮೂರಿನ ಮಕ್ಕಳನ್ನು ಉದ್ದೇಶಿಸಿ ಹಲವು ಪ್ರಶ್ನೆಗಳನ್ನು ಎಸೆದರು. ಹೃಸ್ವಸ್ವರ ಎಂದರೇನು? ದೀರ್ಘಸ್ವರ ಎಂದರೇನು? ವ್ಯಂಜನ ಎಂದರೇನು? ಎಂದೆಲ್ಲಾ ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವ ಮೂಲಕ ವಿದ್ಯಾರ್ಥಿಗಳು ಶಹಬ್ಬಾಸ್ ಗಿರಿ ಪಡೆದರು.

ಕನ್ನಡ ಓದಿ ಬುದ್ದಿವಂತರಾಗಿ: ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ದರಿಂದಲೇ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಇಂಗ್ಲಿಷ್ ಶಾಲೆಯಲ್ಲಿ ಓದಿದವರೆಲ್ಲರೂ ಬುದ್ದಿವಂತರಾಗುತ್ತಾರೆ ಎಂಬ ಭ್ರಮೆಯಿಂದ ನಮ್ಮ ಹಳ್ಳಿ ಮಕ್ಕಳು ಹೊರಬರಬೇಕು. ಕನ್ನಡ ಮಾಧ್ಯಮದಲ್ಲೇ ಓದಿದ ನಾನು ಎಲ್ಲರಿಗಿಂತಲೂ ಹೆಚ್ಚು ಅಂಕ ಗಳಿಸುತ್ತಿದ್ದೆ. ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದ ಬಳಿಕ ಹಿಂದೆ ಉಳಿದೆ. ಸರ್ಕಾರಿ ಶಾಲೆಯಲ್ಲಿ ಮಾತೃಭಾಷೆಯಲ್ಲಿ ಓದುವ ಮಕ್ಕಳು ಹೆಚ್ಚು ಬುದ್ದಿವಂತರಾಗುತ್ತಾರೆ. ಮಕ್ಕಳು ಸಮಾಜದ ಆಸ್ತಿ. ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಎಂಬುದು ನಮ್ಮ ಸರ್ಕಾರದ ಆಶಯ ಎಂದರು.

ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ತಾವು ಓದಿದ ದಿನಗಳನ್ನು ಮೆಲುಕು ಹಾಕಿದರು. ‘ಕುಪ್ಪೇಗಾಲ ಸರ್ಕಾರಿ ಶಾಲೆಯಲ್ಲಿ ಒಂದು ವರ್ಷ ವಿದ್ಯಾಭ್ಯಾಸ ಮಾಡಿದೆ. ಅದಕ್ಕೂ ಮೊದಲೂ ಶಾಲೆಗೆ ಸೇರದೇ ವೀರಮಕ್ಕಳ ಕುಣಿತದಲ್ಲಿ ಭಾಗವಹಿಸುತ್ತಿದ್ದ ತನ್ನನ್ನು ರಾಜಪ್ಪ ಮೇಷ್ಟ್ರು ಐದನೇ ತರಗತಿಗೆ ಸೇರಿಸಿಕೊಂಡರು. ನನಗೆ ಜನ್ಮ ದಿನಾಂಕವೂ ಗೊತ್ತಿರಲಿಲ್ಲ ಎಂದು ಹೇಳಿದರು.