Asianet Suvarna News Asianet Suvarna News

ಜಾರ್ಜ್ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ 8 ಪ್ರಶ್ನೆಗಳು

ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವರಾದ ಡಿಕೆಶಿ, ರಾಮಲಿಂಗಾರೆಡ್ಡಿ ಅವರು ವಿಧಾನಸೌಧದಲ್ಲಿ ಸಭೆ ನಡೆಸಿ ಕಾನೂನು ಹೋರಾಟದ ಚರ್ಚೆ ನಡೆಸಿದರು. ಇದೇ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ ಸಚಿವರ ರಕ್ಷಣೆಗೆ ಬಿಜೆಪಿ ವಿರುದ್ಧ ಕೆಲ ಪ್ರಶ್ನೆಗಳ ಅಸ್ತ್ರಗಳನ್ನು ಎಸೆದಿದ್ದಾರೆ.

cm siddaramaiah asks questions to bjp in defense of kj george

ಬೆಂಗಳೂರು(ಅ. 27): ಡಿವೈಎಸ್'ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಮತ್ತಿತರರಿಗೆ ಸಿಬಿಐ ಎಫ್'ಐಆರ್ ದಾಖಲಿಸಿರುವುದು ಈಗ ರಾಜ್ಯದಲ್ಲಿ ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿದೆ. ಕೆ.ಜೆ.ಜಾರ್ಜ್ ರಾಜೀನಾಮೆ ನೀಡುವವರೆಗೂ ಹೋರಾಟ ಮತ್ತು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಬಿಜೆಪಿ ಮುಖಂಡರು ಪಣತೊಟ್ಟಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ ಸರಕಾರಕ್ಕೆ ಇದು ಪ್ರತಿಷ್ಠೆಯ ವಿಚಾರವಾಗಿದೆ. ಸಚಿವ ಜಾರ್ಜ್ ಅವರನ್ನು ರಕ್ಷಿಸಲು ಸರಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಇಂದು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವರಾದ ಡಿಕೆಶಿ, ರಾಮಲಿಂಗಾರೆಡ್ಡಿ ಅವರು ವಿಧಾನಸೌಧದಲ್ಲಿ ಸಭೆ ನಡೆಸಿ ಕಾನೂನು ಹೋರಾಟದ ಚರ್ಚೆ ನಡೆಸಿದರು. ಇದೇ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ ಸಚಿವರ ರಕ್ಷಣೆಗೆ ಬಿಜೆಪಿ ವಿರುದ್ಧ ಕೆಲ ಪ್ರಶ್ನೆಗಳ ಅಸ್ತ್ರಗಳನ್ನು ಎಸೆದಿದ್ದಾರೆ.

ಬಿಜೆಪಿಗೆ ಸಿದ್ದು ಪ್ರಶ್ನೆಗಳು:
1) ಕೇಂದ್ರದ 8 ಸಚಿವರ ಮೇಲೆ ತನಿಖೆ ನಡೆಯುತ್ತಿದೆ. ಅವರೆಲ್ಲರೂ ರಾಜೀನಾಮೆ ಕೊಟ್ಟಿದ್ದಾರಾ?
2) ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧವೂ ಆರೋಪಗಳು ಇವೆ. ಅವರು ರಾಜಿನಾಮೆ ಕೊಟ್ಟಿದ್ದಾರಾ?
3) ಯಡಿಯೂರಪ್ಪ ಮೇಲೆ 420 ಕೇಸ್ ಇದೆ, ರಾಜಿನಾಮೆ ಕೊಟ್ಟಿದ್ದಾರಾ?
4) ಅನಂತಕುಮಾರ್ ಹೆಗಡೆ ಮೇಲೂ ಕೇಸ್ ಇದೆ. ರಾಜಿನಾಮೆ ಕೊಟ್ಟಿದ್ದಾರಾ?
5) ಹಳೆ ಎಫ್'ಐಆರ್'​ನ ಮುಂದಿನ ಭಾಗವಷ್ಟೇ, ರಾಜಿನಾಮೆ ಯಾಕೆ ಕೊಡಬೇಕು?
6) ಒಂದೇ ಆರೋಪ, ಒಂದೇ ಎಫ್'ಐಆರ್'ಗೆ ಎರಡೆರಡು ಬಾರಿ ರಾಜೀನಾಮೆ ಯಾಕೆ?
7) ಬಿಜೆಪಿಯವರು ಈ ಹಿಂದೆ ಸಿಬಿಐ ಅನ್ನು 'ಚೋರ್ ಬಚಾವ್ ಇನ್ವೆಸ್ಟಿಗೇಶನ್', 'ಕಾಂಗ್ರೆಸ್​​ ಬ್ಯೂರೋ ಇನ್ವೆಸ್ಟಿಗೇಷನ್' ಎಂದಿದ್ದು ಮರೆತುಹೋಯ್ತಾ?
8) ಸಿಬಿಐ ಮೇಲೆ ನಾವು ಪ್ರಭಾವ ಬೀರಲು ಹೇಗೆ ಸಾಧ್ಯ?

ಸಿಐಡಿಯಿಂದ ಸಿಬಿಐವರೆಗೆ
ಡಿವೈಎಸ್'ಪಿ ಗಣಪತಿ ಪ್ರಕರಣ ಸಂಭವಿಸಿದ ಬಳಿಕ ಸಿಐಡಿ ತನಿಖೆಗೆ ಅನುವು ಮಾಡಿಕೊಡಲು ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು. ಸಿಐಡಿ ತನಿಖೆ ನಡೆಸಿ ಕ್ಲೀನ್ ಚಿಟ್ ಕೊಟ್ಟ ಬಳಿಕ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಸಿಐಡಿ ತನಿಖೆ ಸರಿಯಾಗಿ ನಡೆದಿಲ್ಲವೆಂದು ಆಪಾದಿಸಿ ಗಣಪತಿ ಕುಟುಂಬದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸರ್ವೋಚ್ಚ ನ್ಯಾಯಾಲಯವು ಪ್ರಕರಣದ ಮರುತನಿಖೆ ನಡೆಸುವಂತೆ ಸಿಬಿಐಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತನಿಖಾ ವಿವರವೆಲ್ಲವೂ ಸಿಐಡಿಯಿಂದ ಸಿಬಿಐಗೆ ಹಸ್ತಾಂತರವಾಗಿದೆ. ಸಿಬಿಐ ಎಫ್'ಐಆರ್ ಮೂಲಕ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ.

Follow Us:
Download App:
  • android
  • ios