Asianet Suvarna News Asianet Suvarna News

ಪರಮೇಶ್ವರ್ ಗೆದ್ದರೆ ರಾಹುಲ್ ಗಾಂಧಿ ಗೆದ್ದಂತೆ; ರಾಹುಲ್ ಗೆದ್ದರೆ ನಾನು ಗೆದ್ದಂತೆ: ಸಿಎಂ

‘ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಗೆದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೆದ್ದಂತೆ. ರಾಹುಲ್ ಗೆದ್ದರೆ ನಾನು ಗೆದ್ದಂತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

CM Siddaramaiah Appreciate Parameshvar

ಬೆಂಗಳೂರು (ಮಾ. 12): ‘ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಗೆದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೆದ್ದಂತೆ. ರಾಹುಲ್ ಗೆದ್ದರೆ ನಾನು ಗೆದ್ದಂತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ನಾನು ಮತ್ತು ಪರಮೇಶ್ವರ್ ಅವರು ಅಣ್ಣ-ತಮ್ಮಂದಿರಂತಿದ್ದು, ನಮ್ಮೊಳಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ’ ಎಂದು ಸ್ಪಷ್ಟಪಡಿಸಿದರು. ‘ನಮ್ಮಿಬ್ಬರ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಒಂದೇ ಕುಟುಂಬದವರು ಎಂಬಂತೆ ಇದ್ದೇವೆ’ ಎಂದ ಅವರು, ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟು ನಿಜವೋ ನಾವು ಚುನಾವಣೆಯಲ್ಲಿ ಗೆಲ್ಲುವುದು ಕೂಡ ಅಷ್ಟೇ ನಿಜ ಎಂದು ಆತ್ಮವಿಶ್ವಾಸದಿಂದ ನುಡಿದರು. ಮುಂಬರುವ ಚುನಾವಣೆಯಲ್ಲಿ ಪರಮೇಶ್ವರ್ ಅವರು ಗೆದ್ದರೆ ರಾಹುಲ್ ಗಾಂಧಿಯನ್ನು ಬಲಪಡಿಸಿದಂತೆ. ಕೋಮುವಾದಿ ಪಕ್ಷವನ್ನು ಸೋಲಿಸುವ ದೊಡ್ಡ ಜವಾಬ್ದಾರಿ ನಮ್ಮಿಬ್ಬರ ಮೇಲಿದೆ. ದೇವರಾಜ ಅರಸು ಬಳಿಕ ಪೂರ್ಣಾವಧಿ ಸುಭದ್ರ ಸರ್ಕಾರ ಕೊಟ್ಟಿದ್ದು ನಾವೇ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಕುಮಾರಸ್ವಾಮಿಯವರೇ ನೀವು ಸಿಎಂ ಆಗಿದ್ದಿರಿ. ನಿಮ್ಮಪ್ಪನೂ ಸಿಎಂ ಆಗಿದ್ದರು. ನಿಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಕೆಲಸ ಒಂದೇ ಅದು- ಗ್ರಾಮವಾಸ್ತವ್ಯ. ಹಾಸಿಗೆ, ಕಮೋಡ್ ಹಿಡಿದುಕೊಂಡು ಹೋಗಿ ರಾತ್ರಿ ೨ ಗಂಟೆಗೆ ಗ್ರಾಮವಾಸ್ತವ್ಯ ಮಾಡಿ, ಬೆಳಗ್ಗೆ ೬ ಗಂಟೆಗೆ ಬೆಂಗಳೂರಿಗೆ ವಾಪಸಾಗಿದ್ದೇ ಗ್ರಾಮವಾಸ್ತವ್ಯದ ಪರಿ’ ಎಂದು ಕಾಲೆಳೆದರು. ಕೈ ಕಟ್ಟಿಹಾಕಿದ್ದರೆ?: ರೈತರ ಸೇವೆ ಮಾಡಲು ಇನ್ನೊಂದು ಅವಕಾಶ ನೀಡಿ ಎಂದು ಈಗ ಮೊಸಳೆ ಕಣ್ಣೀರು ಸುರಿಸುತ್ತಿರುವ ಜೆಡಿಎಸ್‌ನ ಅಪ್ಪ- ಮಕ್ಕಳನ್ನು ಅಧಿಕಾರವಿದ್ದಾಗ ರೈತರ ಪರ ಕೆಲಸ ಮಾಡಲು ಯಾರಾದರೂ ಕೈ ಕಟ್ಟಿ ಹಾಕಿದ್ದರೆ? ಉತ್ತರ ಕರ್ನಾಟಕದಲ್ಲಿ ನೆಲೆಯೇ ಇಲ್ಲದ ಜೆಡಿಎಸ್ ಅಧಿಕಾರದ ಕನಸು ಕಾಣುತ್ತಿರುವುದು ಹಾಸ್ಯಾಸ್ಪದವಾಗಿದೆ. ಅತಂತ್ರ ವಿಧಾನಸಭೆ ನಿರ್ಮಾಣಕ್ಕಾಗಿ ಕಾಯುತ್ತಾ, ಅಧಿಕಾರಕ್ಕಾಗಿ ಹಪಿಸು ತ್ತಿರುವ ಜೆಡಿಎಸ್‌ಗೆ ೨೦೧೮ರ ಚುನಾವಣೆಯಲ್ಲಿ ೨೫ ಸೀಟುಗಳೂ ಬರುವುದಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಮನ್ ಕೀ ಬಾತ್, ಖಾಲಿ ಬಾತ್ ಸರ್ಕಾರ. ಸುಳ್ಳು ಹೇಳುವುದೇ ಬಿಜೆಪಿಯವರ ಕಸುಬಾಗಿ ಹೋಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಮಹಾನ್ ಸುಳ್ಳುಗಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ದೂರ ಇಡಿ ಯಾತ್ರೆ: ಬಿಜೆಪಿ ನಡೆಸುತ್ತಿರುವ ಬೆಂಗಳೂರನ್ನು ರಕ್ಷಿಸಿ ಯಾತ್ರೆಗೆ ತಿರುಗೇಟು ನೀಡಿದ ಅವರು, ಬೆಂಗಳೂರನ್ನು ಬಿಜೆಪಿಗರಿಂದ ರಕ್ಷಿಸಿದ್ದೇ ನಾವು ಎಂದು ಹಾಸ್ಯ ಮಾಡಿದರು. ಬೆಂಗಳೂರನ್ನು ಬಿಜೆಪಿಯವರು ಹಾಳು ಮಾಡಿ ಹೋಗಿದ್ದರು. ಈಗ ಅವರು ಬೆಂಗಳೂರು ರಕ್ಷಿಸಲು ಹೊರಟಿದ್ದಾರೆ. ಅದಕ್ಕಾಗಿ ನಾವು ಬಿಜೆಪಿಯವರನ್ನು ದೂರ ಇಡಿ ಎಂಬ ಯಾತ್ರೆಯನ್ನು ಆರಂಭಿಸುವುದಾಗಿ ತಿಳಿಸಿದರು. ಅಧಿಕಾರದಲ್ಲಿದ್ದ ವೇಳೆ ಜನಪರ ಕೆಲಸ ಮಾಡದೇ ಚೆಕ್‌ಗಳ ಮೂಲಕ ಲಂಚ ಪಡೆದು ಜೈಲಿಗೆ ಹೋದ ಕುಖ್ಯಾತಿಯ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಬಿಜೆಪಿಗೆ ನಾಚಿಕೆಯಾಗಬೇಕು. ಜೈಲಿಗೆ ಹೋದವರು ಮತ್ತೆ ಮುಖ್ಯಮಂತ್ರಿಯಾಗಬೇಕಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. 

Follow Us:
Download App:
  • android
  • ios