ಮಕ್ಕಳ ಜೀವಕ್ಕೆ ಎರವಾಗುವ ರಷ್ಯಾ ಮೂಲದ ‘ಬ್ಲೂ ವೇಲ್’ ಅಂತರ್ಜಾಲ ಆಟವನ್ನು ತತ್‌ಕ್ಷಣವೇ ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ತಿರುವನಂತಪುರ(ಆ.13): ಮಕ್ಕಳ ಜೀವಕ್ಕೆ ಎರವಾಗುವ ರಷ್ಯಾ ಮೂಲದ ‘ಬ್ಲೂ ವೇಲ್’ ಅಂತರ್ಜಾಲ ಆಟವನ್ನು ತತ್‌ಕ್ಷಣವೇ ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

‘ಪ್ರಾಣಕ್ಕೆ ಬೆದರಿಕೆಯೊಡ್ಡುವ ಈ ಆಟವು ನಮ್ಮ ಹೊಸ್ತಿಲಲ್ಲೇ ಇದೆ. ರಾಷ್ಟ್ರಾದ್ಯಂತ ಅತ್ಯಮೂಲ್ಯವಾದ ಜೀವಗಳ ರಕ್ಷಣೆಗಾಗಿ ಬ್ಲೂ ವೇಲ್ ಆಟದ ಮೇಲೆ ನಿಷೇ‘ ಹೇರಿಕೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಪಿಣರಾಯಿ ಪ್ರತಿಪಾದಿಸಿದ್ದಾರೆ.

‘ಇದೇನು ವಿಡಿಯೊ ಗೇಮ್ ಅಲ್ಲ. ಆದರೆ, ಅನಾಮಿಕ ವ್ಯಕ್ತಿಯಿಂದ ನಿರ್ದೇಶನ ಪಡೆಯುವ ಈ ಆಟವು ಕೊನೆಗೆ ಆತ್ಮಹತ್ಯೆಯಲ್ಲಿ ಅಂತ್ಯವಾಗುತ್ತದೆ. ಈ ಗೇಮ್‌ನಿಂದಾಗಿ ಈಗಾಗಲೇ ರಾಷ್ಟ್ರದಲ್ಲಿ ಕೆಲವರು ಆತ್ಮಹತ್ಯೆಗೂ ಶರಣಾಗಿರುವ ಬಗ್ಗೆ ಮಾಧ್ಯಮ ವರದಿಗಳು ಬೆಳಕು ಚೆಲ್ಲಿವೆ’ ಎಂದು ಅವರು ಹೇಳಿದ್ದಾರೆ. ಅಲ್ಲದೆ ರಾಜ್ಯ ಪೊಲೀಸರು ಜಾಗೃತಿ ಮೂಡಿಸಲು ಯತ್ನಿಸುತ್ತಿದೆ ಎಂದಿದ್ದಾರೆ.