ನಿನ್ನೆ ತಮ್ಮ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್ ಅವರಿಗೆ ಸೇರಿದ ಡೈರಿ ಬಹಿರಂಗವಾದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿತ್ತು. ಆದರೆ ಇಡೀ ದಿನ ತಮ್ಮ ಅಧಿಕೃತ ನಿವಾಸದಲ್ಲೇ ಇದ್ದ ಸಿಎಂ ಯಾರಿಗೂ ಭೇಟಿಗೆ ಅವಕಾಶ ಕಲ್ಪಿಸಲಿಲ್ಲ.
ಬೆಂಗಳೂರು(ಫೆ.24): ಹೈಕಮಾಂಡ್ಗೆ ಕಪ್ಪ ಕೊಟ್ಟ ವಿಚಾರವಾಗಿ ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್ ಅವರ ಡೈರಿಯಲ್ಲಿನ ಅಂಶಗಳು ಬಹಿರಂಗವಾದ ಹಿನ್ನೆಲೆಯಲ್ಲಿ ಇಂದು ಸಿದ್ಧರಾಮುಯ್ಯ ಸಂಪೂರ್ಣ ಮೌನ ಕಾಯ್ದುಕೊಂಡರು. ಬೆಂಬಲಿಗರು ಮತ್ತು ಮಾಧ್ಯಮಕ್ಕೆ ಭೇಟಿಗೆ ಆಸ್ಪದ ನೀಡದ ಸಿಎಂ, ಶಿವರಾತ್ರಿ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ದೇವರ ದರ್ಶನ ಮಾಡಿ ಯಾವುದೇ ಬೆಂಗಾವಲು ವಾಹನವಿಲ್ಲದೆ ಖಾಸಗಿಯಾಗಿ ಅಜ್ಞಾತ ಸ್ಥಳಕ್ಕೆ ತೆರಳಿದರು.
ನಿನ್ನೆ ತಮ್ಮ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್ ಅವರಿಗೆ ಸೇರಿದ ಡೈರಿ ಬಹಿರಂಗವಾದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿತ್ತು. ಆದರೆ ಇಡೀ ದಿನ ತಮ್ಮ ಅಧಿಕೃತ ನಿವಾಸದಲ್ಲೇ ಇದ್ದ ಸಿಎಂ ಯಾರಿಗೂ ಭೇಟಿಗೆ ಅವಕಾಶ ಕಲ್ಪಿಸಲಿಲ್ಲ.
ಸಿಎಂ ಭೇಟಿಗೆ ಆಗಮಿಸಿದ್ದ ಶಾಸಕರಾದ ವಸಂತ ಬಂಗೇರ, ವಿಜಯಾನಂದ ಕಾಶಪ್ಪನವರ್ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಬರಿಗೈಯಲ್ಲಿ ವಾಪಸಾಗಬೇಕಾಯ್ತು.
ಸಂಜೆ ಏಳು ಗಂಟೆಗೆ ಶಿವರಾತ್ರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳಬೇಕಿದ್ದ ಸಿಎಂ ಮೂರು ಗಂಟೆ ಮುಂಚಿತವಾಗಿಯೇ ಅದನ್ನು ಮುಗಿಸಿಬಿಟ್ಟು ಕೇವಲ 15 ನಿಮಿಷದಲ್ಲಿ ದೇವಸ್ಥಾನಕ್ಕೆ ತೆರಳಿ ಮತ್ತೆ ಅಧಿಕೃತ ನಿವಾಸಕ್ಕೆ ವಾಪಸಾದರು.
ದೇವಸ್ಥಾನದಿಂದ ವಾಪಸಾದ ಸಿಎಂ ಮತ್ತೆ ಐದೇ ನಿಮಿಷಗಳ ಅಂತರದಲ್ಲಿ ಖಾಸಗಿ ವಾಹನದಲ್ಲಿ ತಮ್ಮ ಆಪ್ತ ಶಾಸಕರೊಬ್ಬರ ಜೊತೆ ಅಜ್ಞಾತ ಸ್ಥಳಕ್ಕೆ ತೆರಳಿದರು. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಎಲ್ಲೂ ಕೂಡಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡದ ಸಿಎಂ ಸಂಪೂರ್ಣ ಅಂತರ ಕಾಯ್ದುಕೊಂಡರು.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.