Asianet Suvarna News Asianet Suvarna News

ದಳಕ್ಕೆ ವೋಟು ಹಾಕದ ಕರಾವಳಿಗೆ ಕ್ಯಾರೆ ಅನ್ನದ ದಳಪತಿ!

ಕರಾವಳಿ- ಮಲೆನಾಡು ಕಡೆಗಣನೆ

ಬಜೆಟ್​ನಲ್ಲಿ ಕರಾವಳಿಗೆ ಯಾವುದೇ ಘೋಷಣೆ ಇಲ್ಲ

ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಕೊಡುಗೆ ನೀಡದ ಸಿಎಂ

ಮಲೆನಾಡು ಜಿಲ್ಲೆಗಳ ಬಗ್ಗೆಯೂ ಚಕಾರ ಎತ್ತದ ಸಿಎಂ 

ಮಂಡ್ಯ, ರಾಮನಗರ, ಹಾಸನಕ್ಕೆ ವಿಶೇಷ ಒತ್ತು
 

CM Kumarswamy didn't announce any development program for Canara region

ಬೆಂಗಳೂರು(ಜು.5): ಸಿಎಂ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ಬಜೆಟ್ ನಲ್ಲಿ ಕೂಡ ರಾಜಕೀಯ ವೈಷಮ್ಯ ಸುಳಿದಂತೆ ಕಾಣುತ್ತಿದೆ. ಕಾರಣ ಮಂಡ್ಯ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಗೆ  ಭರಪೂರ ಕೊಡುಗೆ ನೀಡಿರುವ ಸಿಎಂ ಕುಮಾರಸ್ವಾಮಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಗೆ ವೋಟು ಹಾಕದ ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಯಾವುದೇ ಯೋಜನೆ ಘೊಷಣೆ ಮಾಡಿಲ್ಲ.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಭಿವೃದ್ಧಿಗೆ ಪ್ರಸಕ್ತ ಬಜೆಟ್ ನಲ್ಲಿ ಯಾವುದೇ ಯೋಜನೆ ಘೊಷಣೆ ಮಾಡಿಲ್ಲ. ಆದರೆ ಜೆಡಿಎಸ್ ಗೆ ಭಾರೀ ಬೆಂಬಲ ನೀಡಿದ್ದ ಮಂಡ್ಯ, ಹಾಸನ ರಾಮನಗರ ಜಿಲ್ಲೆಗಳಿಗೆ ಭರಪೂರ ಕೊಡುಗೆ ಘೋಷಿಸಿ ಸಿಎಂ ತಾರತಮ್ಯದ ಪ್ರದರ್ಶನ ಮಾಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.

ರಾಮನಗರ ಜಿಲ್ಲೆ ಕನಕಪುರದಲ್ಲಿ ಹೊಸ ಮೆಡಿಕಲ್ ಕಾಲೇಜು, ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು 40 ಕೋಟಿ ರೂ. ಮೀಸಲು, ತಲಘಟ್ಟಪುರದಲ್ಲಿ ರಾಜ್ಯ ರೇಷ್ಮೆ ಸಂಶೋಧನೆ ಅಭಿವೃದ್ಧಿ ಸಂಸ್ಥೆಗೆ 5 ಕೋಟಿ, ಚನ್ನಪಟ್ಟಣ ರೇಷ್ಮೆ ಕೈಗಾರಿಕಾ ನಿಗಮಕ್ಕೆ 5 ಕೋಟಿ ರೂ, ಮಂಡ್ಯ ಜಿಲ್ಲೆ ಸರ್ವತೋಮುಖ ಅಭಿವೃದ್ಧಿಗೆ 50 ಕೋಟಿ ರೂ. ಹೀಗೆ ಸಾಲುಸಾಲು ಅಭಿವೃದ್ಧಿ ಯೋಜನೆಗಳು ಈ ಭಾಗಕ್ಕೆ ದಕ್ಕಿವೆ.

ಇಷ್ಟೇ ಅಲ್ಲದೇ ರಾಮನಗರದಲ್ಲಿ ಆರ್ಟ್ & ಕ್ರಾಫ್ಟ್​ ವಿಲೇಜ್​ ಸ್ಥಾಪನೆ, ಕಣ್ವಾ ಜಲಾಶಯ ಬಳಿ ಚಿರ್ಲ್ಡ್ರನ್​ ವರ್ಲ್ಡ್​ ಸ್ಥಾಪನೆ, ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ನಿರ್ಮಾಣಕ್ಕೆ 30 ಕೋಟಿ ರೂ, ರಾಮನಗರ ಫಿಲ್ಮ್​ ಸಿಟಿ, ಸಿನಿಮಾ ಸಂಬಂಧಿತ ಉದ್ಯಮಗಳಿಗೆ 40 ಕೋಟಿ ರೂ, ರಾಮನಗರ ಪರಭಾಷಾ ನಿರ್ಮಾಪಕರಿಗೆ ವಸತಿ, ಮೂಲಸೌಲಭ್ಯಕ್ಕೆ 20 ಕೋಟಿ ರೂ ಮೀಸಲಿರಿಸಲಾಗಿದೆ. 

ಇನ್ನು ಹಾಸನ ಜಿಲ್ಲೆಯತ್ತ ಗಮನ ಹರಿಸುವುದಾದರೆ, ಹಾಸನದಲ್ಲಿ 15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ, ಬೇಲೂರಿನಲ್ಲಿ ಗೈಡ್​ಗಳಿಗೆ ತರಬೇತಿಗೆ 60 ಲಕ್ಷ ರೂ, ಹಾಸನಕ್ಕೆ ಸ್ನಾನಗೃಹ, ನೆಲಹಾಸು, ಸ್ಯಾನಿಟರಿ ಉತ್ಪಾದಕ ಜಿಲ್ಲೆ ಯೋಜನೆ, ಕೆಐಎಂಸಿಒ ಪುನಶ್ಚೇತನಕ್ಕೆ 10 ಕೋಟಿ ರೂ, ಜಿಲ್ಲೆಯ ಕೆರೆಗಳನ್ನು ತುಂಬಿಸಲು 70 ಕೋಟಿ ರೂ, 70 ಕೋಟಿ ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಘೊಷಿಸಲಾಗಿದೆ.

ಇನ್ನು ಮಂಡ್ಯ ಜಿಲ್ಲೆ ಕೂಡ ಈ ಬಾರಿಯ ಬಜೆಟ್ ನಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು 30 ಕೋಟಿ ರೂ, ಲೋಕಪಾವನಿ ನದಿಯಿಂದ ದುದ್ದ, ಇತರೆ ಕೆರೆಗಳಿಗೆ ನೀರು ತುಂಬಿಸಲು ಕ್ರಮ, ಶ್ರೀರಂಗಪಟ್ಟಣ ಸುತ್ತಲಿನ 21 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ 53 ಕೋಟಿ ರೂ. ಸೇರಿದಂತೆ ಹಲವು ಯೋಜಜನೆಗಳು ಜಿಲ್ಲೆಯ ಪಾಲಾಗಿವೆ.

ಆದರೆ ಕರಾವಳಿ ಮತ್ತು ಮಲೆನಾಡು ಪ್ರಾಂತ್ಯಕ್ಕೆ ಇಂತಹ ಯಾವುದೇ ಜನಪ್ರಿಯ ಯೋಜನೆಗಳು ಘೋಷಣೆಯಾಗದಿರುವುದು ಕುಮಾರಸ್ವಾಮಿ ತಾರತಮ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಕರಾವಳಿ ಮತ್ತು ಮಲೆನಾಡು ಭಾಗದ ನಿರ್ಲಕ್ಷ್ಯ ಕಾರಣಕ್ಕೆ ವಿರೋಶ ಪಕ್ಷ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.

Follow Us:
Download App:
  • android
  • ios