ಸಾಲಮನ್ನಾಗೆ ಎಂ.ಎಲ್.ಎ ಫಂಡ್ ವಾಪಸ್!

CM Kumarswamy decides to send MLA's fund back to Finance
Highlights

ಸಾಲ ಮನ್ನಾ ಹಣ ಹೊಂದಿಸಲು ಹರಸಾಹಸ

ಎಂ.ಎಲ್.ಎ ಫಂಡ್ ಮೇಲೆ ಸಿಎಂ ಕಣ್ಣು

ಸಾವಿರಕ್ಕೂ ಹೆಚ್ಚು ಕೋಟಿ ಬಾಕಿ ಆರ್ಥಿಕ ಇಲಾಖೆಗೆ ವಾಪಾಸ್

ಬೆಂಗಳೂರು(ಜು.3): ರೈತರ ಸಾಲಮನ್ನಾ ಮಾಡಿಯೇ ಸಿದ್ದ ಎಂದು ಹಠ ಹಿಡಿದಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಾಲಮನ್ನಾಗೆ ಹಣ ಹೊಂದಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ರೈತರ ಸಂಪೂರ್ಣ ಸಾಲಮನ್ನಾಗೆ ಬೇಕಾಗುವ ಹಣವನ್ನು ಸಾಧ್ಯವಾದಷ್ಟೂ ಮೂಲಗಳಿಂದ ಹೊಂದಿಸಲು ಸಿಎಂ ಮುಂದಾಗಿದ್ದಾರೆ. ಹೀಗಾಗಿ ಸರ್ಕಾರದ ವಿವಿಧ ಇಲಾಖೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದೇ ಕಾರಣಕ್ಕೆ ಖರ್ಚಾಗದೇ  ಉಳಿದಿರುವ ಸಾವಿರಾರು ಕೋಟಿ ಎಂ.ಎಲ್.ಎ ಫಂಡ್ ನ್ನು ಆರ್ಥಿಕ ಇಲಾಖೆಗೆ ವಾಪಸ್ಸು ಕಳುಹಿಸುವ ನಿರ್ಧಾರ ಕೈಗೊಳ್ಳಲಾಗಿದೆ.

2002  ರಿಂದ 2014 ರ ವರೆಗೆ ಸಾವಿರ ಕೋಟಿ ರೂ. ಶಾಸಕರ ನಿಧಿ ಬಳಕೆ ಆಗದೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಉಳಿದಿತ್ತು. ರಾಜ್ಯದ ಎಲ್ಲ ಶಾಸಕರಿಗೆ ಹಾಗು ವಿಧಾನ ಪರಿಷತ್ ಸದಸ್ಯರಿಗೆ ಕಳೆದ ಬಜೆಟ್ ನಲ್ಲಿ ಮೂರು ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿತ್ತು. ಅದಕ್ಕೂ ಮುಂಚೆ ಎರಡು ಕೋಟಿ ರೂ.ಹಣ ಒದಗಿಸಲಾಗುತ್ತಿತ್ತು.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಹಣವನ್ನು ಸರಕಾರಿ ಶಾಲೆಗಳು, ಆಸ್ಪತ್ರೆ ಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿತ್ತು. ಆದರೆ ಇದೀಗ ಈ ಹಣವನ್ನು ರೈತರ ಸಾಲ ಮನ್ನಾಕ್ಕೆ ಬಳಸಿಕೊಳ್ಳಲು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಳಕೆಯಾಗದೇ ಉಳಿದಿರುವ ಒಂದು ಸಾವಿರಕ್ಕೂಅಧಿಕ ಕೋಟಿ ರೂ. ಅನುದಾನದ ಹಣವನ್ನು ಆರ್ಥಿಕ ಇಲಾಖೆ ವಾಪಸ್ಸು ಪಡೆದಿದೆ.  ಅಲ್ಲದೇ ಎಂ.ಎಲ್ ಎ ಫಂಡ್ ಜೊತೆಗೆ ಶಾಲಾಭಿವೃದ್ಧಿ ಸಮಿತಿಯಲ್ಲಿ ಉಪಯೋಗಿಸದೇ ಖಾತೆಯಲ್ಲಿ ಎಸ್.ಡಿ.ಎಂ.ಸಿ ಹಣವನ್ನೂ ವಾಪಾಸ್ಸು ಪಡೆಯಲಾಗಿದೆ.

ಇದೇ ವೇಳೆ ಗ್ರಾಮೀಣಾಭಿವೃದ್ಧಿ, ಆರೋಗ್ಯ, ಲೋಕೋಪಯೋಗಿ, ಶಿಕ್ಷಣ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಬಳಸದೇ ಬ್ಯಾಂಕ್ ಖಾತೆಯಲ್ಲಿ ನಿರುಪಯುಕ್ತವಾಗಿರುವ ಹಣದ ಮಾಹಿತಿ ಸಂಗ್ರಹಿಸಿ ಹಣಕಾಸು ಇಲಾಖೆಗೆ ವಾಪಾಸ್ಸು  ತರಿಸಿಕೊಳ್ಳುಲು ಸಿಎಂ ಮುಂದಾಗಿದ್ದಾರೆ. ಇನ್ನು ಶಾಸಕರ ಪ್ರದೇಶಾಭಿವೃದ್ಧಿಯ ಅನುದಾನದ ಬಾಕಿ ಹಣವನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದಕ್ಕೆ ಬಿಜೆಪಿ ಶಾಸಕರು ಅಸಮಾಧಾನ ಹೊರಕಹಾಕಿದ್ದಾರೆ ಎನ್ನಲಾಗಿದೆ.

loader