ಉದ್ಯೋಗ ಕೊಡಿಸಲು ಮುಖ್ಯಮಂತ್ರಿಗಳ ಪ್ರತ್ಯೇಕ ಟೀಂ

First Published 8, Jul 2018, 7:20 AM IST
CM Kumaraswamy Separate Team For Giving Job
Highlights

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಪ್ರತ್ಯೇಕವಾದ ವಿಭಾಗವನ್ನು ಆರಂಭಿಸಲಾಗಿದೆ. 

ಬೆಂಗಳೂರು :  ರಾಜ್ಯದ 30 ಜಿಲ್ಲೆಯ ಜಿಲ್ಲಾಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಒಂದು ದಿನ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಜನತಾದರ್ಶನ ನಡೆಸಿ ಮಾತನಾಡಿದ ಅವರು, ನೂರಾರು ಕಿ.ಮೀ. ದೂರದಿಂದ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸುತ್ತಾರೆ. ಸಾಲ ಮಾಡಿ ಸಾವಿರಾರು ರು. ಖರ್ಚು ಮಾಡಿಕೊಂಡು ಬೆಂಗಳೂರಿಗೆ ಆಗಮಿಸುತ್ತಾರೆ. ಇದನ್ನು ತಪ್ಪಿಸಲು ರಾಜ್ಯದ 30 ಜಿಲ್ಲೆಯ ಜಿಲ್ಲಾಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸುವಂತೆ ಸೂಚನೆ ನೀಡಲಾಗುವುದು. ಸಮಸ್ಯೆ ಆಲಿಸಿ ಅಲ್ಲಿಯೇ ಬಗೆಹರಿಸಬೇಕು. ಇದಕ್ಕಾಗಿ ಒಂದು ದಿನ ಮೀಸಲಿಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ನಡೆಸುವ ಜನತಾದರ್ಶನದ ಕುರಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾಹಿತಿ ಪಡೆದುಕೊಳ್ಳಲಾಗುವುದು. ಒಂದು ವೇಳೆ ಜಿಲ್ಲಾಧಿಕಾರಿಗಳಿಂದ ಬಗೆಹರಿಯದ ಸಮಸ್ಯೆಗಳಿದ್ದಲ್ಲಿ ಮಾತ್ರ ಬೆಂಗಳೂರಿಗೆ ಕಳುಹಿಸಿಕೊಡಬೇಕು. ಇದರ ಜತೆಗೆ ಸರ್ಕಾರ ಹಿರಿಯ ಅಧಿಕಾರಿಗಳಿಗೆ ಒಂದೊಂದು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಅವರು ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಸ್ಥಳದಲ್ಲಿಯೇ ಇದ್ದು, ಜನರ ಸಮಸ್ಯೆಗಳ ಕುರಿತು ಪಟ್ಟಿಮಾಡಬೇಕು. ಅದನ್ನು ಮುಖ್ಯಕಾರ್ಯದರ್ಶಿ ಮೂಲಕ ತಮಗೆ ತಲುಪಿಸಬೇಕು. ಆಡಳಿತದಲ್ಲಿ ಅಧಿಕಾರಿಗಳು ಜನರಿಗೆ ಲಭಿಸಬೇಕು ಎಂದರು.

250 ಮಂದಿಗೆ ಉದ್ಯೋಗ:  ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಪ್ರತ್ಯೇಕವಾದ ವಿಭಾಗವನ್ನು ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 250 ಯುವಜನಾಂಗದ ಮಾಹಿತಿ ಪಡೆದುಕೊಂಡಿದ್ದು, ಹಲವು ಖಾಸಗಿ ಕಂಪನಿಯಲ್ಲಿ ಉದ್ಯೋಗ ಕಲ್ಪಿಸಲಾಗಿದೆ. ಈ ಸಂಬಂಧ ಖಾಸಗಿ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಬಂಧ ಪ್ರತ್ಯೇಕ ತಂಡವೊಂದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

loader