ಬೆಂಗಳೂರು : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾನೂನುಬದ್ಧವಾಗಿ ಇದ್ದರೆ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಯ ನೀಡಿದ್ದಾರೆ.

ಪದ್ಮನಾಭನಗರದಲ್ಲಿ ಬುಧವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ತನಿಖಾ ಸಂಸ್ಥೆಗಳು ಯಾವುದೇ ಒತ್ತಡಕ್ಕೆ ಮಣಿ ಯದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನ್ಯಾಯಸಮ್ಮತವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಅಲ್ಲದೇ, ಪ್ರತಿಪಕ್ಷದವರು ಸಹ ಘಟನೆಯನ್ನು ರಾಜಕೀಯವಾಗಿ ಬಳಕೆ ಮಾಡಿ ಕೊಳ್ಳುವ ಪ್ರಯತ್ನ ಮಾಡಬಾರದು ಎಂದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿರುವ ದೂರಿನ ವಿಷಯಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರು ಕಾನೂನು ಬದ್ಧವಾಗಿದ್ದರೆ ಅವರ ಬೆನ್ನಿಗೆ ನಿಲ್ಲುತ್ತೇವೆ. ಯಾವುದೇ ಆತಂಕವಾಗಲೀ, ಅಪನಂಬಿಕೆಯಾಗಲೀ ಅಗತ್ಯ ಇಲ್ಲ. ಕಾನೂ ನಾತ್ಮಕವಾಗಿ ಹೋರಾಟ ನಡೆಸಲಾಗುತ್ತಿದ್ದು, ನಾವು ಅವರ ಜತೆಗಿದ್ದೇವೆ. ಇದನ್ನೇ ದೊಡ್ಡ ಸುದ್ದಿ ಮಾಡಬೇಕಾದ ಅಗತ್ಯ ಇಲ್ಲ ಎಂದು ತಿಳಿಸಿದರು. 

ನ್ಯಾಯಾಲಯದಲ್ಲಿ ದೂರು ದಾಖಲಾದ ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಬಿಜೆಪಿಯವರು ಆಗ್ರಹಿಸಿದ್ದಾರೆ. ಆದರೆ,  ಶಿವಕುಮಾರ್ ಅವರು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಬೇಕು? ದೂರು ದಾಖಲಿಸಿದ ತಕ್ಷಣ ಬಿಜೆಪಿಯವರು ಎಷ್ಟು ಬಾರಿ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.