ಹೊನ್ನಾಳಿ :  ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್‌ ಅವರ ಸತತ 4ನೇ ಬಾರಿಯ ಅತಿ ಹೆಚ್ಚು ಮತಗಳ ಅಂತರದ ಗೆಲವಿಗೆ ಕಾರಣರಾದ ಕ್ಷೇತ್ರದ ಮತದಾರರು, ಮುಖಂಡರು, ಕಾರ್ಯಕರ್ತರು, ಪಕ್ಷದ ಜನಪ್ರತಿನಿಧಿಗಳು, ಜನತೆಗೆ ಶಾಸಕ ಎಂ. ಪಿ. ರೇಣುಕಾಚಾರ್ಯ ಧನ್ಯವಾದಗಳನ್ನು ತಿಳಿದ್ದಾರೆ.

ಪಟ್ಟಣದ ಹಿರೇಮಠ ಸ್ವಗೃಹದಲ್ಲಿ ಏರ್ಪಡಿಸಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜಿ.ಎಂ. ಸಿದ್ದೇಶ್ವರ್‌ ಸಂಸದರಾಗಿ ಆಯ್ಕೆಯಾಗಲು ಶ್ರಮಿಸಿದ ಕಾರ್ಯಕರ್ತರು ಮುಖಂಡರಿಗೆ ಕೃತಜ್ಞತೆ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿದ್ದಾ ಜಿದ್ದಿನ ಕ್ಷೇತ್ರವಾಗಿದ್ದು ಕಳೆದ 3 ಅವಧಿಗೆ ಜಿಲ್ಲೆಯ ಮತದಾರರು ಬಿಜೆಪಿಗೆ ಆಶೀರ್ವದಿಸಿದಂತೆ ಈ ಬಾರಿಯೂ ಸಹ ಸಿದ್ದೇಶ್ವರ್‌ ಅವರ 4 ನೇ ಬಾರಿಯ ಗೆಲುವಿಗೆ ಕಾರಣಕರ್ತರಾದ ಸರ್ವಜನಾಂಗದ ಮತದಾರರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ. ಸಾಮಾನ್ಯ ಕಾರ್ಯಕರ್ತನೂ ಕೂಡ ಅಸಾಮಾನ್ಯನಾಗಬಲ್ಲನೆಂಬುದನ್ನು ಎರಡನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ತೋರಿಸಿ ಕೊಟ್ಟಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹಾ ಚುನಾವಣೆಯಲ್ಲಿ 350 ಜನ ಸಂಸದರು ಆಯ್ಕೆಯಾಗಿದ್ದು, ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದರು. ಮಹಾಗಠಬಂಧನ್‌ ಮುಖ್ಯಸ್ಥರಾದ ಚಂದ್ರಬಾಬುನಾಯ್ಡು, ದೇವೇಗೌಡ ಮುಂತಾದವರನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದರು.

ಮೈತ್ರಿ ಸರ್ಕಾರದ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಹಣ ಬಲ, ತೊಳ್ಬಲದಿಂದ ಅಧಿಕಾರಗಳಿಸಬಹುದೆಂಬ ಕನಸಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ದೇವೇಗೌಡರ

ಕುಟುಂಬ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಈ ಹಿಂದೆ ವಿಧಾನಸೌಧದಲ್ಲಿ ಚುನಾವಣೆಯಲ್ಲಿ ಎರಡೂ ಪಕ್ಷಗಳನ್ನು ಮನೆಗೆ ಕಳುಸುತ್ತೇವೆ ಎಂಬ ಭವಿಷ್ಯ ನಿಜವಾಗಿದೆ. ರಾಜ್ಯದ 28 ಲೋಕಸಭಾಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರು ಹಗಲಿರುಳೆನ್ನದೇ ನಡೆಸಿದ ವ್ಯವಸ್ಥಿತ ಪ್ರಚಾರ ಮತ್ತು ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ ಎಂದರು.

ಮಂಡ್ಯದಲ್ಲಿ ಸ್ವಾಭಿಮಾನದ ಪ್ರತೀಕವಾಗಿ ಮೈತ್ರಿ ಪಕ್ಷದ ಮುಖಂಡರಿಗೆ ಸವಾಲೆಸೆದು ಲಕ್ಷಾಂತರ ಮತಗಳ ಅಂತರದಲ್ಲಿ ಜಯಗಳಿಸಿದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಮುಂಬರುವ ದಿನಗಳಲ್ಲಿ ದೇಶದ ಚಿತ್ರಣವನ್ನೇ ಬದಲಾಯಿಸಲಿರುವ ಮತ್ತು ಎರಡನೇ ಬಾರಿಗೆ 130 ಕೋಟಿ ಜನರ ಆಶಾಕಿರಣವಾಗಿ ಪ್ರಧಾನಿ ಗದ್ದುಗೆ ಏರಲಿರುವ ನರೇಂದ್ರ ಮೋದಿ ಅವರು ಜಾರಿಗೆ ತರಲಿರುವ ಅನೇಕ ಮಹತ್ತರ ಯೋಜನೆಗಳು ಜನತೆಯ ಕಲ್ಯಾಣಕ್ಕೆ ನಾಂದಿಯಾಗಲಿವೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಹರಳಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ಸೇರಿದಂತೆ ತಾಲೂಕಿನ ಬಿಜೆಪಿ ಕಾರ್ಯಕರ್ತರು, ಅನೇಕ ಮುಖಂಡರು ಇದ್ದರು.