Asianet Suvarna News Asianet Suvarna News

ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿ ಹೊಸ ಅಸ್ತ್ರ

ಎಐಸಿಸಿ ಅಧ್ಯಕ್ಷ ರಾಹುಲ್‌ರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸುಮಾರು ಅರ್ಧ ಗಂಟೆ ಮಾತನಾಡಿದರು. ಅದರಲ್ಲಿ 20  ನಿಮಿಷ ಸಿದ್ದರಾಮಯ್ಯ ಬಗ್ಗೆಯೇ ಹೇಳಿದರು ಎನ್ನಲಾಗಿದೆ. 

Cm Kumaraswamy Meet AICC President Rahul Gandhi

ಪ್ರಶಾಂತ್ ನಾತು

[ಕನ್ನಡ ಪ್ರಭದ ಇಂಡಿಯಾ ಗೇಟ್ ಅಂಕಣದಿಂದ ಆಯ್ದ ಭಾಗ]

ಬೆಂಗಳೂರು :  ದೆಹಲಿಗೆ ಬಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಉದ್ದೇಶ ಇರಲಿಲ್ಲ. ಆದರೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಕಾರ್ಯಕ್ರಮ ಫಿಕ್ಸ್ ಆದಾಗ ಬೆಳಿಗ್ಗೆ ರಾಹುಲ್‌ರನ್ನು ಭೇಟಿ ಆಗಲು ಸಮಯ ಕೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸುಮಾರು ಅರ್ಧ ಗಂಟೆ ಮಾತನಾಡಿದರು. ಅದರಲ್ಲಿ 20  ನಿಮಿಷ ಸಿದ್ದರಾಮಯ್ಯ ಬಗ್ಗೆಯೇ ಹೇಳಿದರು ಎನ್ನಲಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷ ಎಂದರೆ ತಾವೇ ನಡೆಸುತ್ತಿರುವವರು ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಹೊರಗಡೆ ಮಾತನಾಡುತ್ತಿದ್ದಾರೆ. ಬಜೆಟ್ ಬಗ್ಗೆ ಇಲ್ಲದ ಗೊಂದಲ ಸೃಷ್ಟಿಸುವ ಅಗತ್ಯ ಇರಲಿಲ್ಲ. ಹೊಸ ಸರ್ಕಾರ ಬಂದಾಗ ಹೊಸ ಬಜೆಟ್ ಮಂಡಿಸುವುದು ವಾಡಿಕೆ. ಆದರೆ ಸಿದ್ದರಾಮಯ್ಯನವರೇ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಅವರನ್ನು ಸುಮ್ಮನಿರಿಸಿ ಎಂದು ರಾಹುಲ್ ಗಾಂಧಿ ಅವರನ್ನು ಕೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಕರೆದು ನಾನು ಮಾತನಾಡಿಸುತ್ತೇನೆ. ನೀವು
ಜುಲೈ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ತಯಾರಿ ಮಾಡಿಕೊಳ್ಳಿ ಎಂದು ರಾಹುಲ್ ಹೇಳಿ ಕಳುಹಿಸಿದ್ದಾರೆ.

ಕುಮಾರ ಸಿಂಪಲ್ ಲಿವಿಂಗ್

ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ತನ್ನ ತಂದೆಯಂತೆ ಪೂರ್ತಿ ಸಸ್ಯಾಹಾರಿ ಆಗಿ ಬದಲಾಗಿದ್ದಾರೆ. ಹೃದಯ ಚಿಕಿತ್ಸೆ ನಂತರ ವೈದ್ಯರು ಸಿಹಿ ಮತ್ತು ಎಣ್ಣೆ ಪದಾರ್ಥಗಳನ್ನು ಬಿಟ್ಟು ಬಿಡುವಂತೆ ಹೇಳಿದ್ದರಿಂದ ಬೆಳಿಗ್ಗೆ ತಿಂಡಿಗೆ ರಾಗಿ ದೋಸೆ ತಿನ್ನುವ ಕುಮಾರಸ್ವಾಮಿ, ಮಧ್ಯಾಹ್ನ ರಾಗಿ ಮುದ್ದೆ, ಉಪ್ಪು ಸಾರು ಊಟ ಮಾಡುತ್ತಾರಂತೆ. ರವಿವಾರ ನೀತಿ ಆಯೋಗದ ಸಭೆ ಮುಗಿಸಿ ಬಂದು 2 ಗಂಟೆ ಕರ್ನಾಟಕ ಭವನದ ಸಿಎಂ ಸೂಟ್‌ನಲ್ಲಿ ನಿದ್ದೆ ಹೊಡೆದ ಮುಖ್ಯಮಂತ್ರಿಗಳು, ಸಚಿವ ಪುಟ್ಟರಾಜುಗೆ ಹೇಳಿ ಅವರ ಮನೆಯಲ್ಲಿ ಮುದ್ದೆ ಅಂಬಲಿ ಊಟ ಮಾಡಿ ಬಂದರು. ಬೆಂಗಳೂರು-ದಿಲ್ಲಿ ನಡುವಿನ ಪ್ರಯಾಣದಲ್ಲಿ ಕೂಡ ಸರ್ಕಾರಿ ಏರ್ ಇಂಡಿಯಾ ವಿಮಾನದಲ್ಲೇ ಟಿಕೆಟ್ ಬುಕ್ ಮಾಡುವಂತೆ ಕುಮಾರಸ್ವಾಮಿ ಅಧಿಕಾರಿಗಳಿಗೆ ಹೇಳಿದ್ದು, ವಿಶೇಷ ವಿಮಾನ ಬೇಡ ಎಂದಿದ್ದಾರೆ.


ಹಿಂದೆ ಸಂಸದರಾಗಿದ್ದ ಕುಮಾರಸ್ವಾಮಿ ದೆಹಲಿಯಲ್ಲಿದ್ದಾಗ ಸಂಜೆ 6 ಗಂಟೆ ಆಯಿತೆಂದರೆ ನಿವೃತ್ತರಾಗುತ್ತಿದ್ದರು. ಮಾಂಸಾಹಾರ ಇರಲೇಬೇಕಿತ್ತು. ಆದರೆ ಈಗ ತಂದೆ ದೇವೇಗೌಡರ ಹಾದಿಗೆ ಮರಳುತ್ತಿದ್ದಾರೆ. ಅಣ್ತಮ್ಮ ಆಪರೇಷನ್
ಸೋಮವಾರ ಬೆಳಿಗ್ಗೆ ಕುಮಾರಸ್ವಾಮಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಬೆಳಿಗ್ಗೆ 9.30ಕ್ಕೆ ತಯಾರಾಗಿ ಹೋಗುತ್ತಿದ್ದಾಗ ಜೊತೆಗೆ ಬಂದ ಸಚಿವ ಎಚ್ ಡಿ ರೇವಣ್ಣ, ಹಳೆಯ ಕರ್ನಾಟಕ ಭವನದ ಕಟ್ಟಡ ಒಡೆಯೋ ಸಭೆ ಇದೆ. ನೀನು ಹತ್ತು ನಿಮಿಷ ಇದ್ದು ಹೋಗು ಎಂದು ದುಂಬಾಲು ಬಿದ್ದರು. ಆದರೆ ಇದಕ್ಕೆ ಒಪ್ಪದ ಕುಮಾರಸ್ವಾಮಿ, ಅಯ್ಯೋ ಶಿವನೆ, ರಾಹುಲ್ ಗಾಂಧಿ ಟೈಮ್ ಕೊಟ್ಟು ಕಾಯುವಾಗ ಇಲ್ಲಿ ಮೀಟಿಂಗ್ ನಡೆಸಿದರೆ ಚೆನ್ನಾಗಿರುತ್ತದೆ ಯೇ? ಮುಖ್ಯ ಕಾರ್ಯದರ್ಶಿ ಇರುತ್ತಾರೆ, ನೀವೇ ನಿರ್ಧರಿಸಿ ಎಂದರೂ ರೇವಣ್ಣ ಕೇಳಲಿಲ್ಲ. ಆಗ ಮಧ್ಯ ಪ್ರವೇಶಿಸಿದ ಡ್ಯಾನಿಶ್ ಅಲಿ, ರಾಹುಲ್‌ಜೀ ಅವರ ನ್ನು ಕಾಯಿಸುವುದು ಚೆನ್ನಾಗಿರೋದಿಲ್ಲ. ಕಳೆದ ಬಾರಿಯೂ ಹಾಗೇ ಆಗಿತ್ತು ಎಂದು ಹೇಳಿದಾಗ ಸುಮ್ಮನಾದ ರೇವಣ್ಣ ಮುಖ್ಯಮಂತ್ರಿಗಳಿಗೆ, ಹಾಗಾದರೆ ನೀನು ಹೋಗಿ ಬಂದ ಮೇಲೆ ಇನ್ನೊಮ್ಮೆ ಸಭೆ ನಡೆಸೋಣ ಎಂದು ಹೇಳಿದರು. 

ರಾಹುಲ್ ಇಫ್ತಾರ್ ನೀರಸ
ಕಳೆದ ವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರೆದಿದ್ದ ಇಫ್ತಾರ್ ಕೂಟ ಫ್ಲಾಪ್ ಶೋ ಆಗಿದ್ದು, ಕಾಂಗ್ರೆಸ್ ನಾಯಕರು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರತಿಭಾ ಪಾಟೀಲ್ ಹೊರತುಪಡಿಸಿದರೆ ತೃತೀಯ ರಂಗದ ಒಬ್ಬೇ ಒಬ್ಬ ನಾಯಕನೂ ಭಾಗವಹಿಸಿರಲಿಲ್ಲ. ಹಿಂದೆ ಸೋನಿಯಾ ಗಾಂಧಿ ಕರೆಯುತ್ತಿದ್ದ ಇಫ್ತಾರ್ ಕೂಟಗಳಿಗೆ ದೇಶದ ಬಹುತೇಕ ಪಕ್ಷಗಳ ನಾಯಕರು ಬರುತ್ತಿದ್ದರು. ಆದರೆ ತಾಜ್ ಪ್ಯಾಲೇಸ್ ಪಂಚತಾರಾ ಹೋಟೆಲ್‌ನಲ್ಲಿ ಕರೆದಿದ್ದ ಸಭೆಗೆ ರಾಹುಲ್ ಮಿತ್ರ ಅಖಿಲೇಶ್ ಯಾದವ್ ಕೂಡ ಬಂದಿರಲಿಲ್ಲ. ಎಷ್ಟೇ ಬನ್ನಿ, ಭಾಗವಹಿಸಿ ಎಂದು ಕರೆದರೂ ವಾಜಪೇಯಿ ಭೇಟಿ ಆಗಲು ಹಿಂದಿನ ದಿನವಷ್ಟೇ ದೆಹಲಿಗೆ ಬಂದಿದ್ದ ದೇವೇಗೌಡರು ಕೂಡ ರಾಹುಲ್ ಇಫ್ತಾರ್ ಕೂಟದಲ್ಲಿ ಭಾಗವಹಿಸಲಿಲ್ಲ. ಇನ್ನು ಮಾಯಾವತಿ ದೆಹಲಿ ಯಲ್ಲಿದ್ದರೂ ಇಫ್ತಾರ್ ಕೂಟದಿಂದ ತಪ್ಪಿಸಿಕೊಂಡರೆ, ನಾಯ್ಡು, ಕೇಜ್ರಿವಾಲ್ ತಮ್ಮ ಪ್ರತಿನಿಧಿಗಳನ್ನು ಸಹ ಕಳುಹಿಸಿ ಕೊಡಲಿಲ್ಲ. 

ಯುಪಿ 45 ನಮ್ದು, 35 ನಿಮ್ದು

ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ 45 :35 ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳಲು ಎಸ್ ಪಿ-ಬಿಎಸ್‌ಪಿ ನಡುವಿನ ಮಾತುಕತೆಯಲ್ಲಿ ನಿರ್ಧಾರವಾಗಿದೆ. ಆದರೆ, ಕಾಂಗ್ರೆಸ್‌ಗೆ ಯಾರು ಸೀಟು ಬಿಟ್ಟುಕೊಡಬೇಕು ಎಂಬ ಬಗ್ಗೆ ಹಗ್ಗಜಗ್ಗಾ ಟ ಮುಂದುವರೆದಿದೆ. ಅಮೇಠಿ, ರಾಯ್‌ಬರೇಲಿ ಕ್ಷೇತ್ರಗಳನ್ನು ಎಸ್‌ಪಿ ತನ್ನ ಕೋಟಾದಲ್ಲಿ ಬೇಕಿದ್ದಲ್ಲಿ ಕಾಂಗ್ರೆಸ್‌ಗೆ ಬಿಟ್ಟುಕೊಡಲಿ ಎಂದು ಮಾಯಾವತಿ ಅಖಿಲೇಶ್ ಯಾದವ್‌ಗೆ ಹೇಳಿದ್ದು, ಉತ್ತರ
ಪ್ರದೇಶದಲ್ಲಿ ಮಹಾಘಟಬಂಧನದಲ್ಲಿ ಇರಬೇಕೋ ಬೇಡವೋ ಎಂಬ ಬಗ್ಗೆ ರಾಹುಲ್ ಗಾಂಧಿ ಚಿಂತಿಸುವ ಹಾಗಾಗಿದೆ. 

ಎಸ್‌ಪಿಜಿಗೆ ರಾಹುಲ್ ಸಂಕಟ
1991 ರಲ್ಲಿ ರಾಜೀವ್ ಗಾಂಧಿ ಹತ್ಯೆ ನಂತರ ಪ್ರಧಾನಿ ಮತ್ತು ಮಾಜಿ ಪ್ರಧಾನಿಗಳ ಭದ್ರತೆಗೆ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್‌ಪಿಜಿ) ರಚಿತವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಝಡ್ ಪ್ಲಸ್‌ಗಿಂತ ಹೆಚ್ಚಿನ ಎಸ್‌ಪಿಜಿ ಭದ್ರತೆ ದೊರಕುತ್ತಿದೆ. ಆದರೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ಸೋನಿಯಾ ಮತ್ತು ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವಾಗ ಎಸ್ ಪಿಜಿಗೆ ಮಾಹಿತಿ ಕೂಡ ಕೊಡದೇ ಹೋಗುತ್ತಾರಂತೆ. ಕಳೆದ ತಿಂಗಳು
ಕೂಡ ದಿಲ್ಲಿ ವಿಮಾನ ನಿಲ್ದಾಣದವರೆಗೆ ಎಸ್‌ಪಿಜಿ ಸೆಕ್ಯುರಿಟಿ ತೆಗೆದುಕೊಂಡ ಅಮ್ಮ ಮತ್ತು ಮಗ ನಂತರ ಎಲ್ಲಿ ಹೋಗುತ್ತಿದ್ದೇವೆ, ಏನು ಎತ್ತ ಎಂದು ಮಾಹಿತಿಯೇ ನೀಡಿಲ್ಲವಂತೆ. ಹೀಗಾಗಿ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿರುವ ಎಸ್‌ಪಿಜಿ ಮುಖ್ಯಸ್ಥರು, ವಿದೇಶದಲ್ಲಿ ಏನಾದರೂ ಆದರೆ ಜವಾಬ್ದಾರಿ ನಮ್ಮದು ಎಂದು ಅಂಡ ರ್‌ಟೇಕಿಂಗ್ ಕೊಡುವಂತೆ ಸೂಚಿಸಿ ಎಂದು ಕೇಳಿಕೊಂಡಿದ್ದಾರಂತೆ.

ರಜನಿ ಮತ್ತು ಜಗನ್‌ರತ್ತ ಕಣ್ಣು
ಕರ್ನಾಟಕದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ದೇವೇಗೌಡರ ಜೊತೆಗೆ ಮೈತ್ರಿ ಕುದುರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗಲೇ ಎಚ್ಚೆತ್ತು ಕೊಂಡಿರುವ ಮೋದಿ ಮತ್ತು ಅಮಿತ್ ಶಾ ತಮಿಳುನಾಡಿನಲ್ಲಿ ರಜನಿ ಕಾಂತ್ ಜೊತೆ ಮೈತ್ರಿಗೆ ಯತ್ನಿಸುತ್ತಿದ್ದಾರೆ. ಆದರೆ ರಜನಿ ಮನಸ್ಸು ಮಾಡುತ್ತಿಲ್ಲವಂತೆ. ಇನ್ನು ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ದೂರ ಹೋದ ಮೇಲೆ ಜಗನ್ ರೆಡ್ಡಿ ಅವರನ್ನು ಜೊತೆಗೆ ಸೆಳೆದುಕೊಳ್ಳಲು ಅಮಿತ್ ಶಾ ಪ್ರಯತ್ನ ನಡೆಸಿದ್ದಾರೆ.

ಹಾಸನ ಹಾಸನ ಹಾಸನ
ದೇವೇಗೌಡರ ಪುತ್ರ ರೇವಣ್ಣ ಸಾಹೇಬರಿಗೆ ಇಂಡಿಯಾ ಎಂದರೆ ಹಾಸ ನ! ಹಾಸನ ಎಂದರೆ ಇಂಡಿಯಾ. ನಿನ್ನೆ ನಿತಿನ್ ಗಡ್ಕರಿ ಅವರನ್ನು ಭೇಟಿ ಆಗಲು ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ಹೋಗಿದ್ದ ರೇವಣ್ಣ  ಕೊಟ್ಟ ಮೂರು ಪುಟಗಳ ಮನವಿ ಪತ್ರದಲ್ಲಿ ಎರಡು ಪುಟದ ತುಂಬಾ ಹಾಸನದ ರಸ್ತೆಗಳ ಬಗ್ಗೆಯೇ ಇದ್ದರೆ, ಒಂದು ಪುಟ ಮಾತ್ರ ರಾಜ್ಯದ ಇತರ ರಸ್ತೆಗಳ ಬಗ್ಗೆ ಇತ್ತಂತೆ. ಹೊರಗಡೆ ಬಂದ ಕುಮಾರಸ್ವಾಮಿ, ಈ ಮನವಿ ಪತ್ರ ಮೀಡಿಯಾಗೆ ಕೊಡಬೇಡಿ. ಬರೀ ಹಾಸನದ್ದೇ ತುಂಬಿಕೊಂಡಿವೆ ಎಂದು ಟೀಕಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಟರಂತೆ. 

Follow Us:
Download App:
  • android
  • ios