ಬೆಂಗಳೂರು :  ಸಹೋದ್ಯೋಗಿಗಳಿಗೆ ಯಾವುದೇ ಮುನ್ಸೂಚನೆ ಹಾಗೂ ಪೂರ್ವ ಮಾಹಿತಿ ನೀಡದೆ ಕೊನೇ ಕ್ಷಣದವರೆಗೂ ಮಹತ್ವದ ‘ಋುಣಭಾರ ಮುಕ್ತ ಸುಗ್ರೀವಾಜ್ಞೆ’ (ಖಾಸಗಿ ಲೇವಾದೇವಿ ಸಾಲ ಮನ್ನಾ ಅಧ್ಯಾದೇಶ) ವಿಚಾರದ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗೌಪ್ಯತೆ ಕಾಯ್ದುಕೊಂಡಿದ್ದರು. ಹಠಾತ್ತಾಗಿ ಸಚಿವ ಸಂಪುಟದಲ್ಲಿ ಇದನ್ನು ಮಂಡಿಸಿದಾಗ ಸಚಿವರು ಅವಾಕ್ಕಾದರು. ಎಚ್‌ಡಿಕೆ ನಡವಳಿಕೆಗೆ ಖುದ್ದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಆದಿಯಾಗಿ ಸಭೆಯಲ್ಲಿದ್ದ ಎಲ್ಲಾ ಕಾಂಗ್ರೆಸ್‌ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಇದೀಗ ಬೆಳಕಿಗೆ ಬಂದಿದೆ.

ಶುಕ್ರವಾರ ಸುಗ್ರೀವಾಜ್ಞೆ ವಿಚಾರವನ್ನು ಮುಖ್ಯಮಂತ್ರಿಯವರು ಸಭೆಯಲ್ಲಿ ಮಂಡಿಸಿದಾಗ, ‘ಹಠಾತ್‌ ಎಂದು ಇಂತಹ ಮಹತ್ವದ ವಿಚಾರವನ್ನು ಮಂಡಿಸಿದರೆ ನಾವು ಹೇಗೆ ಪ್ರತಿಕ್ರಿಯಿಸಬೇಕು. ಸಚಿವ ಸಂಪುಟ ಕಾರ್ಯಸೂಚಿಯಲ್ಲೂ ಈ ವಿಚಾರ ಪ್ರಸ್ತಾಪವಾಗಿಲ್ಲ. ಇಂತಹ ವಿಚಾರವನ್ನು ಮಂಡಿಸುವ ಕುರಿತು ನೀವು ನಮಗೆ ಮಾಹಿತಿ ನೀಡಿಲ್ಲ. ಹೀಗಿರುವಾಗ ಇದರ ಬಗ್ಗೆ ಹೇಗೆ ಚರ್ಚೆ ನಡೆಸಬೇಕು’ ಎಂದು ಪರಮೇಶ್ವರ್‌ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.

ಇದಕ್ಕೆ ಇತರೆ ಕಾಂಗ್ರೆಸ್‌ ಸಚಿವರು ಧ್ವನಿಗೂಡಿಸಿದ್ದು, ‘ಈ ಸುಗ್ರೀವಾಜ್ಞೆ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ನಾವು ಚರ್ಚೆ ನಡೆಸಲು ಸಾಧ್ಯವಿಲ್ಲ. ಇಂತಹ ನಿರ್ಧಾರ ಕೈಗೊಂಡರೆ ಇದರಿಂದ ಉಂಟಾಗಬಹುದಾದ ಕಾನೂನಾತ್ಮಕ ಪರಿಣಾಮಗಳೇನು ಎಂಬ ಬಗ್ಗೆ ಸಮಜಾಯಿಷಿ ದೊರೆಯದೇ ಒಪ್ಪಲು ಸಾಧ್ಯವಿಲ್ಲ’ ಎಂದು ಪಟ್ಟು ಹಿಡಿದರು ಎನ್ನಲಾಗಿದೆ.

ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ!

ಈ ಹಂತದಲ್ಲಿ ಋುಣಭಾರ ಮುಕ್ತ ಸುಗ್ರೀವಾಜ್ಞೆ ಪ್ರಸ್ತಾಪವನ್ನು ಯಾರಿಗೂ ಮಾಹಿತಿ ನೀಡದೇ ಮಂಡಿಸಿದ್ದಕ್ಕೆ ಸಂಪುಟದ ಸದಸ್ಯರ ಮುಂದೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ‘ಋುಣಭಾರ ಮುಕ್ತ ವಿಚಾರ ಕೂಡ ಸಾಲ ಮನ್ನಾ ಯೋಜನೆಯ ಭಾಗವೇ ಆಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಯೂ ಇತ್ತು. ವಿರೋಧಿಗಳು ಕೂಡ ಆಗಾಗ ಈ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದ್ದರು. ಹೀಗಾಗಿ ಈ ವಿಚಾರವನ್ನು ಗೌಪ್ಯವಾಗಿ ಹಾಗೂ ತುರ್ತಾಗಿ ಮಂಡಿಸಬೇಕಾದ ಅನಿವಾರ್ಯವಿತ್ತು. ಆದರೆ, ಸುಗ್ರೀವಾಜ್ಞೆಯ ಕರಡು ಹಾಗೂ ಇದರ ಬಗ್ಗೆ ಎಲ್ಲಾ ಮಾಹಿತಿ ನೀಡಲು ಸಿದ್ಧನಿದ್ದೇನೆ’ ಎಂದರು ಸಮಜಾಯಿಷಿ ನೀಡಿದರು ಎನ್ನಲಾಗಿದೆ.

ಇದಕ್ಕೆ ಒಪ್ಪದ ಕಾಂಗ್ರೆಸ್‌ ಸಚಿವರು, ‘ಈ ನಿರ್ಧಾರ ಕಾನೂನಾತ್ಮಕ ಪರಿಣಾಮಗಳ ಬಗ್ಗೆ ಅಡ್ವೋಕೇಟ್‌ ಜನರಲ್‌ ಅವರಿಂದ ವಿವರಣೆ ದೊರೆಯಬೇಕು. ಅನಂತರ ಈ ಪ್ರಸ್ತಾಪ ಬಗ್ಗೆ ನಿರ್ಧರಿಸೋಣ. ಅಲ್ಲಿಯವರೆಗೂ ಈ ವಿಚಾರವನ್ನು ಮುಂದೂಡುವುದು ಒಳ್ಳೆಯದು ಎಂದು ಸಲಹೆ ನೀಡಿದರು ಎನ್ನಲಾಗಿದೆ. ಆಗ ಕುಮಾರಸ್ವಾಮಿ ಅವರು ಸಭೆಗೆ ಅಡ್ವೋಕೇಟ್‌ ಜನರಲ್‌ ಅವರನ್ನು ಕರೆಸಲು ಮುಂದಾದರು.

ಸಚಿವ ಸಂಪುಟ ಸಭೆಗೆ ಆಗಮಿಸಿದ ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ ಅವರು, ‘ಖಾಸಗಿ ಲೇವಾದೇವಿದಾರದಿಂದ ಪಡೆದ ಸಾಲದಿಂದ ಬಡಜನರನ್ನು ಋುಣಮುಕ್ತಗೊಳಿಸುವ ಸಂಬಂಧ ಇಂತಹ ಕಾಯ್ದೆಗಳು ದೇಶದ ಹಲವು ರಾಜ್ಯಗಳಲ್ಲಿ ಇವೆ. ಈ ಕಾಯ್ದೆ ವಿರುದ್ಧ ನ್ಯಾಯಾಲಯ ಸಂಘರ್ಷವೂ ನಡೆದಿದ್ದು, ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ತೀರ್ಪು ಬಂದಿದೆ. ಕೆಲ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಈ ಕಾಯ್ದೆಯನ್ನು ಎತ್ತಿಹಿಡಿದ್ದಿರೆ, ಒಂದೆರಡು ರಾಜ್ಯದಲ್ಲಿ ಕಾಯ್ದೆಯ ವಿರುದ್ಧ ತೀರ್ಪು ಬಂದಿವೆ’ ಎಂದರು.

‘ರಾಜ್ಯ ಸಿದ್ಧಪಡಿಸಿರುವ ಈ ಸುಗ್ರೀವಾಜ್ಞೆಯ ಕರಡು ಬ್ಯಾಂಕೇತರ ಹಣಕಾಸಿನ ಸಂಸ್ಥೆಗಳನ್ನು ಕಾಯ್ದೆಯ ಪರಿಮಿತಿಗೆ ತರುವ ಉದ್ದೇಶ ಹೊಂದಿದೆ. ಆದರೆ, ಇಂತಹ ನಿರ್ಧಾರ ಕಾನೂನು ಸಂಘರ್ಷಕ್ಕೆ ಕಾರಣವಾಗಬಹುದು. ಏಕೆಂದರೆ, ಹಿಂದೆ ದೇವರಾಜ ಅರಸು ಅವರು ಋುಣಭಾರ ಮುಕ್ತ ಕಾಯ್ದೆ ತಂದ ಕಾಲಘಟ್ಟದಲ್ಲಿ ಬ್ಯಾಂಕೇತರ ಹಣಕಾಸಿನ ಸಂಸ್ಥೆಗಳು ಅಷ್ಟೇನೂ ಪ್ರಭಾವಶಾಲಿಯಾಗಿ ಇರಲಿಲ್ಲ. ಆದರೆ, ಇಂದಿನ ಪರಿಸ್ಥಿತಿ ಬೇರೆಯಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಇಂದು ಪ್ರಭಾವ ಶಾಲಿಯಾಗಿದ್ದು, ಅವುಗಳ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ತಿಕ್ಕಾಟ ನಡೆದಿದೆ. ಈ ಸಂಸ್ಥೆಗಳನ್ನು ಹೊರಗಿಟ್ಟು ಸುಗ್ರೀವಾಜ್ಞೆ ತಂದರೆ ಕಾನೂನಾತ್ಮಕವಾಗಿ ಅಂತಹ ಸಮಸ್ಯೆಯಾಗುವುದಿಲ್ಲ’ ಎಂದು ವಿವರಿಸಿದರು ಎನ್ನಲಾಗಿದೆ.

ಅನಂತರ ಮಾತನಾಡಿದ ಕುಮಾರಸ್ವಾಮಿ ಅವರು, ‘ಅವಸರದಲ್ಲಿ ಹಾಗೂ ಮಾಹಿತಿ ನೀಡದೇ ಈ ಸುಗ್ರೀವಾಜ್ಞೆ ತಂದಿರುವುದಕ್ಕೆ ವಿಷಾದವಿದೆ. ಆದರೆ, ಈ ಸುಗ್ರೀವಾಜ್ಞೆಯನ್ನು ಜಾರಿಗೆ ತರುವ ಅಗತ್ಯವಿದೆ. ಖಾಸಗಿ ಲೇವಾದೇವಿದಾರರಿಂದ ಬಡವರ ಶೋಷಣೆ ವ್ಯಾಪಕವಾಗಿದೆ. ಇದಕ್ಕೆ ಒಪ್ಪಿಗೆ ನೀಡಬೇಕು ಎಂದು ಕೋರಿದಾಗ ಹಾಗೂ ಆರ್‌ಬಿಐ ಅನುಮತಿ ಪಡೆದ ಫೈನಾನ್ಸ್‌ ಕಂಪನಿಗಳನ್ನು ಅಧ್ಯಾದೇಶದಿಂದ ಹೊರಗಿಡುವ ನಿರ್ಧಾರ ಕೈಗೊಂಡಾಗ ಸಭೆ ಒಪ್ಪಿಗೆ ನೀಡಿತು’ ಎಂದು ಮೂಲಗಳು ತಿಳಿಸಿವೆ.

ಕಾನೂನು ಸಚಿವರಿಗೇ ಅಂತಿಮ ಕ್ಷಣದಲ್ಲಿ ಮಾಹಿತಿ!

ಋುಣಭಾರ ಮುಕ್ತ ಸುಗ್ರೀವಾಜ್ಞೆ ಕರಡನ್ನು ಸಚಿವ ಸಂಪುಟದಲ್ಲಿ ಮಂಡಿಸುವ ವಿಚಾರವನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅತ್ಯಂತ ಗೌಪ್ಯವಾಗಿರಿಸಿಕೊಂಡಿದ್ದರು. ಎಲ್ಲಿಯವರೆಗೆ ಎಂದರೆ, ಸಚಿವ ಸಂಪುಟದ ಅಜೆಂಡಾದಲ್ಲೂ ಈ ಮಾಹಿತಿಯಿರಲಿಲ್ಲ. ಹೆಚ್ಚುವರಿ ಅಜೆಂಡಾ ಸಹ ಸಿದ್ದಪಡಿಸಿರಲಿಲ್ಲ. ಸಂಪುಟದ ಕೆಲ ಜೆಡಿಎಸ್‌ ಸಚಿವರಿಗೆ ಮತ್ತು ಆಯ್ದ ಅಧಿಕಾರಿಗಳಿಗೆ ಬಿಟ್ಟರೆ ಈ ವಿಚಾರ ಮತ್ತೆಯಾರಿಗೂ ಮಾಹಿತಿ ನೀಡಿರಲಿಲ್ಲ.

ಈ ಗೌಪ್ಯತೆ ಕಾಯ್ದುಕೊಳ್ಳುವ ವಿಚಾರ ಎಷ್ಟುಗಂಭೀರವಾಗಿ ಪಾಲನೆಯಾಗಿತ್ತು ಎಂದರೆ, ಯಾವುದೇ ಸುಗ್ರೀವಾಜ್ಞೆ ಕರಡು ಸಚಿವ ಸಂಪುಟದ ಮುಂದೆ ಮಂಡನೆಯಾಗುವಾಗ ಕಾನೂನು ಮತ್ತು ಸಂಸದೀಯ ಸಚಿವರ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿಯ ಮುಂದೆ ಬಂದು ಅದರ ಒಪ್ಪಿಗೆ ಪಡೆಯಬೇಕಾಗುತ್ತದೆ. ಹೀಗಾಗಿ ಗುರುವಾರದ ವೇಳೆಗೆ ಕಾನೂನು ಸಚಿವ ಕೃಷ್ಣ ಬೈರೇಗೌಡ ಅವರಿಗೆ ಈ ಸಂಬಂಧಿ ಕಡತವನ್ನು ಕಳುಹಿಸಿಕೊಟ್ಟಕುಮಾರಸ್ವಾಮಿ ಅವರು ಉಪ ಸಮಿತಿ ಮುಂದೆ ಮಂಡಿಸಿ ಒಪ್ಪಿಗೆ ಕೊಡಿಸುವಂತೆ ಕೋರಿದರು ಎನ್ನಲಾಗಿದೆ.

ಅಲ್ಲಿಯವರೆಗೂ ಕಾಂಗ್ರೆಸ್‌ನ ಯಾವೊಬ್ಬ ಸಚಿವರಿಗೂ ಈ ಸುಗ್ರೀವಾಜ್ಞೆ ವಿಚಾರದ ಬಗ್ಗೆ ಅಧಿಕೃತ (ಮತ್ತೊಂದು ಮೂಲಗಳ ಪ್ರಕಾರ ಕುಮಾರಸ್ವಾಮಿ ಅವರು ಈ ವಿಚಾರದ ಬಗ್ಗೆ ಅನೌಪಚಾರಿಕವಾಗಿ ಉಪ ಮುಖ್ಯಮಂತ್ರಿಯವರೊಂದಿಗೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ) ಮಾಹಿತಿ ನೀಡಲಾಗಿರಲಿಲ್ಲ ಎಂದು ಮೂಲಗಳು ಹೇಳುತ್ತವೆ.

ಅರಸು ಋಣಭಾರ ಮುಕ್ತ ನೀತಿಗೆ ಗೌಡರ ವಿರೋಧ

‘ಋಣಭಾರ ಮುಕ್ತ ಸುಗ್ರೀವಾಜ್ಞೆ’ ನಿರ್ಧಾರ ಪ್ರಕಟಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡೆಯಿಂದ ಅಚ್ಚರಿಗೊಳಗಾದರೂ ಕಾಂಗ್ರೆಸ್ ಸಾವರಿಸಿಕೊಂಡಿದೆ. ಏಕೆಂದರೆ ವಾಸ್ತವವಾಗಿ ಕಡು ಬಡವರನ್ನು ಋಣಭಾರ ಮುಕ್ತಗೊಳಿಸು  ವುದು ಕಾಂಗ್ರೆಸ್‌ನ ಮೂಲ ಸಿದ್ಧಾಂತ. ಆದರೆ, ಒಂದು ಕಾಲದಲ್ಲಿ ಈ ಸಿದ್ಧಾಂತದ ವಿರುದ್ಧ ನಿಂತಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಈಗ ಸುಗ್ರೀವಾಜ್ಞೆ ಪರ ನಿಲ್ಲುವರೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಲು ಸಜ್ಜಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮದ ಒಂದು ಭಾಗ ಕಡು ಬಡವರನ್ನು ಋಣಭಾರ ಮುಕ್ತಗೊಳಿಸುವುದು. ಇದಲ್ಲದೆ, ಭೂ ಸುಧಾರಣೆ, ಹಾವನೂರ ವರದಿ ಸೇರಿದಂತೆ ಇಂದಿರಾ ಅವರ ೨೦ ಅಂಶಗಳ ಕಾರ್ಯಕ್ರಮ ಆಧರಿಸಿ ದೇವರಾಜ ಅರಸು ಅವರು ಜಾರಿಗೆ ತರಲು ಮುಂದಾದ ಸುಧಾರಣಾ ನೀತಿ ಹಾಗೂ ಋಣಮುಕ್ತ ನೀತಿಯನ್ನು ಆಗ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದ ದೇವೇಗೌಡರು ಬಲವಾಗಿ ವಿರೋಧಿಸಿದ್ದರು.