Asianet Suvarna News Asianet Suvarna News

ಹೊಸ ಸೇವೆಗೆ ಸಿಎಂ ಚಾಲನೆ : ದೇಶದಲ್ಲೇ ಮೊದಲು ಜಾರಿ

ಕಟ್ಟಡ ನಕ್ಷೆ ಮಂಜೂರಾತಿ, ಭೂ ಬಳಕೆ ಪರಿವರ್ತನೆ (ಎನ್‌ಎ) ಹಾಗೂ ಬಡಾವಣೆ ನಕ್ಷೆ ಮಂಜೂರಾತಿಗಾಗಿ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವ ಸೇವೆಗೆ ಸಿಎಂ ಅನುಮೋದನೆ ನೀಡಿದ್ದಾರೆ. 

CM Kumaraswamy Launch Online Service For property in Urban Areas
Author
Bengaluru, First Published Jun 14, 2019, 7:54 AM IST

ಬೆಂಗಳೂರು : ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಮಂಜೂರಾತಿ, ಭೂ ಬಳಕೆ ಪರಿವರ್ತನೆ (ಎನ್‌ಎ) ಹಾಗೂ ಬಡಾವಣೆ ನಕ್ಷೆ ಮಂಜೂರಾತಿಗಾಗಿ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯಲು ಅನುವಾಗುವಂತೆ ದೇಶದಲ್ಲೇ ಮೊತ್ತಮೊದಲ ಬಾರಿಗೆ ಜಾರಿಗೆ ತಂದಿರುವ ಆನ್‌ಲೈನ್‌ ವ್ಯವಸ್ಥೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಚಾಲನೆ ನೀಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಾವಣೆ ನಕ್ಷೆ ಮತ್ತು ಕಟ್ಟಡ ನಕ್ಷೆ ಅನುಮೋದನೆ ತಂತ್ರಾಂಶ ಹಾಗೂ ವೆಬ್‌ಸೈಟ್‌ಗಳಿಗೆ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ನಕ್ಷೆ ಮಂಜೂರಾತಿ, ಬಡಾವಣೆ ನಕ್ಷೆ, ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸುವ ವೇಳೆ ಉಂಟಾಗುತ್ತಿದ್ದ ಭ್ರಷ್ಟಾಚಾರ ನಿವಾರಿಸಲು ಆನ್‌ಲೈನ್‌ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಈ ಜನಸ್ನೇಹಿ ಕ್ರಮದಿಂದ ಸಾರ್ವಜನಿಕರ ಸಮಯವೂ ಉಳಿತಾಯವಾಗಲಿದ್ದು, ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ. ಜತೆಗೆ ಅರ್ಜಿ ಸಲ್ಲಿಕೆ ಹಾಗೂ ಪ್ರಮಾಣಪತ್ರಗಳ ಪಡೆಯುವಿಕೆಯೂ ಸರಳೀಕರಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರ-ಜನಪರ ಸರ್ಕಾರ:

ಸಮ್ಮಿಶ್ರ ಸರ್ಕಾರ ಜನಸ್ನೇಹಿ ಹಾಗೂ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಸಾಲ ಮನ್ನಾ ನಿರ್ಧಾರವನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಿ ಮದ್ಯವರ್ತಿಗಳು ದುರುಪಯೋಗ ಪಡಿಸಿಕೊಳ್ಳದಂತೆ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಿದ್ದೇವೆ. ಆದರೂ, ರಾಷ್ಟ್ರೀಕೃತ ಬ್ಯಾಂಕ್‌ಗಳ ವರ್ಗೀಕರಣ ದೋಷಗಳನ್ನು ಸರ್ಕಾರದ ದೋಷಗಳು ಎಂದು ಬಿಂಬಿಸಲಾಗುತ್ತಿದೆ. ನಮ್ಮ ಸರ್ಕಾರ ಜನಪರ ಸರ್ಕಾರ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಜನರಿಗೆ ಕರೆ ನೀಡಿದರು.

ರೈಲ್ವೆ ಸಚಿವರೊಂದಿಗೆ ಸಭೆ:

ರಾಜ್ಯದಲ್ಲಿ ಎಲ್ಲಾ ನಗರ ಪಾಲಿಕೆಗಳಿಗೆ ಪ್ರತಿ ಪಾಲಿಕೆಗೆ 150 ಕೋಟಿ ರು. ಹಣವನ್ನು ಮೂಲಭೂತ ಸೌಕರ್ಯಕ್ಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಹಲವು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಹೊರ ವರ್ತುಲ ರಸ್ತೆ, ಎಲಿವೇಟೆಡ್‌ ಕಾರಿಡಾರ್‌ನಂತಹ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಉಳಿದಂತೆ ಉಪನಗರ ರೈಲು ಯೋಜನೆಗೆ ಸದ್ಯದಲ್ಲೇ ಚಾಲನೆ ನೀಡಲಿದ್ದೇವೆ. ಈ ಬಗ್ಗೆ ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದೇನೆ. ಸಬ್‌ ಅರ್ಬನ್‌ ರೈಲು ಸೇವೆ ಒದಗಿಸಲು ಇರುವ ಎಲ್ಲಾ ಅಡ್ಡಿಗಳನ್ನು ಬಗೆಹರಿಸಿ ಸದ್ಯದಲ್ಲೇ ಚಾಲನೆ ನೀಡಲು ಕ್ರಮ ಕೈಗೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌, ಪೌರಾಡಳಿತ ನಿರ್ದೇಶಕ ಶೇಖರಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಸ್ವಯಂ ದೃಢೀಕರಣ

ಇದೇ ವೇಳೆ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕಟ್ಟಡ ನಕ್ಷೆ ಮಂಜೂರಾತಿ ಪಡೆಯಲು ಅನುವಾಗುವಂತೆ ಸ್ವಯಂ ದೃಢೀಕರಣಕ್ಕೆ ಅನುಮತಿ ಕಲ್ಪಿಸಲಾಗುವುದು. 1,200 ಚದರಡಿಗಿಂತ ಕಡಿಮೆ ನಿವೇಶನದಲ್ಲಿ ನಿರ್ಮಿಸುವ ಮನೆಯ ಪ್ಲಾನನ್ನು ಅಪ್‌ಲೋಡ್‌ ಮಾಡಬೇಕು. ಈ ವೇಳೆ ಪ್ಲಾನ್‌ನಲ್ಲಿ ಸೆಟ್‌ಬ್ಯಾಕ್‌ ಸೇರಿದಂತೆ ಎಲ್ಲಾ ನಿಯಮಗಳನ್ನು ಪಾಲಿಸಿದ್ದರೆ ಅರ್ಜಿಯನ್ನು ವೆಬ್‌ಸೈಟ್‌ ಸ್ವೀಕರಿಸುತ್ತದೆ. ಸ್ವೀಕರಿಸಿದ ಬಳಿಕ ಮಾಲಿಕರು ಅದನ್ನು ಪ್ರಿಂಟ್‌ಔಟ್‌ ಪಡೆದು ಮನೆಗೆ ಅಂಟಿಸಿಕೊಂಡರೆ ಸಾಕು. ಒಂದು ವೇಳೆ ಈ ನೀಲನಕ್ಷೆಗೆ ಅನುಸಾರವಾಗಿ ಮನೆ ನಿರ್ಮಾಣ ಮಾಡದಿದ್ದರೆ ಸಂಬಂಧಪಟ್ಟಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು. ಇದೇ ನಿಯಮ ಭೂ ಪರಿವರ್ತನೆ, ಬಡಾವಣೆ ನಕ್ಷೆ ಮಂಜೂರಾತಿಗೂ ಅನ್ವಯವಾಗುತ್ತದೆ.

ಮಾಧ್ಯಮಗಳ ಬಗ್ಗೆ ಮತ್ತೆ ಸಿಎಂ ಕಿಡಿ

ಸಮ್ಮಿಶ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಗುರುತಿಸುವ ವೈಶಾಲ್ಯತೆ ಮಾಧ್ಯಮಗಳಿಗೆ ಇಲ್ಲ ಎಂದು ಮತ್ತೊಮ್ಮೆ ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಸಾಲ ಮನ್ನಾ ನಿರ್ಧಾರವನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಿ ಮದ್ಯವರ್ತಿಗಳು ದುರುಪಯೋಗ ಪಡಿಸಿಕೊಳ್ಳದಂತೆ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ವರ್ಗೀಕರಣ ದೋಷಗಳನ್ನು ಸರ್ಕಾರದ ದೋಷಗಳು ಎಂದು ಬಿಂಬಿಸಲಾಗುತ್ತಿದೆ. ಸಮ್ಮಿಶ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಗುರುತಿಸುವ ವೈಶಾಲ್ಯತೆ ಮಾಧ್ಯಮಗಳಿಗೆ ಇಲ್ಲ ಎಂದರು.

ಏನಿದು ಆನ್‌ಲೈನ್‌ ಸೇವೆ?

ಕಟ್ಟಡ ನಕ್ಷೆ, ಭೂ ಪರಿವರ್ತನೆ, ಬಡಾವಣೆ ನಕ್ಷೆ ಮಂಜೂರಾತಿ ಅಗತ್ಯವಿದ್ದರೆ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ‘ಎಲ್‌ಬಿಪಿಎಸ್‌’ ವೆಬ್‌ಸೈಟ್‌ನಲ್ಲಿ ಲಾಗಿನ್‌ ಹಾಕಿ ಅರ್ಜಿ ಸಲ್ಲಿಸಿದರೆ ಸಾಕು ಪ್ರಮಾಣಪತ್ರವು ಆನ್‌ಲೈನ್‌ ಮೂಲಕವೇ ಕೈ ಸೇರುತ್ತದೆ. ನಿವೇಶನದ ದಾಖಲೆ, ಮನೆ ನಿರ್ಮಾಣದ ನೀಲನಕ್ಷೆಯನ್ನು ಕ್ಯಾಡ್‌ (ಸಿಎಡಿ) ದಾಖಲೆ ಸ್ವರೂಪದಲ್ಲಿ ಅಪ್‌ಲೋಡ್‌ ಮಾಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಾರೆ. ಬೇರೆ ಇಲಾಖೆಗಳ ನಿರಾಕ್ಷೇಪಣಾ ಪತ್ರ ಅಗತ್ಯವಿದ್ದರೆ ಆನ್‌ಲೈನ್‌ನಲ್ಲೇ ಸಂಬಂಧಪಟ್ಟಇಲಾಖೆಗಳು ಪರಿಶೀಲನೆ ನಡೆಸಿ ಎನ್‌ಒಸಿ ನೀಡುತ್ತವೆ. ದಾಖಲೆಗಳು ಸೂಕ್ತವಾಗಿದ್ದರೆ ಮಾತ್ರ ಅರ್ಜಿಯನ್ನು ವೆಬ್‌ಸೈಟ್‌ ಸ್ವೀಕರಿಸುತ್ತದೆ. ಒಂದು ವೇಳೆ ಅರ್ಜಿ ಸ್ವೀಕರಿಸಿದ ಒಂದು ತಿಂಗಳ ಬಳಿಕವೂ ಅನುಮೋದನೆ ನೀಡದಿದ್ದರೆ ‘ಡೀಮ್ಡ್ ಅಪ್ರೂವ್‌’ ಎಂದು ಪರಿಗಣಿಸಬಹುದು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಕಟ್ಟಡ ನಕ್ಷೆ ಮಂಜೂರಾತಿಗೆ ಪೌರಾಡಳಿತ ನಿರ್ದೇಶನಾಲಯದ municipaladmn.gov.in Ê ವೆಬ್‌ಸೈಟ್‌ನಲ್ಲಿ ಅಥವಾ ಕರ್ನಾಟಕ ಮುನ್ಸಿಪಲ್‌ ಡಾಟಾ ಸೊಸೈಟಿಯ á mrc.gov.in ಗೆ ಭೇಟಿ ನೀಡಿ ‘ನಿರ್ಮಾಣ್‌’ ಎಂಬ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು. ಭೂ ಉಪಯೋಗ ಬದಲಾವಣೆ, ಕಟ್ಟಡ ನಕ್ಷೆ ಮಂಜೂರಾತಿ, ಬಡಾವಣೆ ನಕ್ಷೆ ಅನುಮೋದನೆಗೆ ಅರ್ಜಿ ಸಲ್ಲಿಸುವ ಕುರಿತು  online.bpas.in/KA/program.html ® ನಲ್ಲಿ ಮಾಹಿತಿ ಪಡೆಯಬಹುದು.

Follow Us:
Download App:
  • android
  • ios