ಸೇಡಂ/ದೊಡ್ಡಬಳ್ಳಾಪುರ:  ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿದ್ದ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆ ಕೊನೆಗೂ ಜಾರಿಗೆ ಬಂದಿದೆ.
ಸಾಲ ಮನ್ನಾ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರುವ ಮೊದಲು ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯ ಸೇಡಂ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಅನುಷ್ಠಾನಕ್ಕೆ ತಂದಿದ್ದು, ಶನಿವಾರ ಎರಡೂ ತಾಲೂಕುಗಳಲ್ಲಿ ಸಾಲಗಾರ ರೈತರಿಗೆ ಅಧಿಕೃತವಾಗಿ ಋಣಮುಕ್ತ ಪ್ರಮಾಣ ಪತ್ರ ವಿತರಿಸಲಾಗಿದೆ. 

ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದರೆ, ಸೇಡಂನಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಕಾರ್ಮಿಕ ಸಚಿವ ಪ್ರಿಯಾಂಕ್ ಖರ್ಗೆ ಜಂಟಿಯಾಗಿ ಪ್ರಮಾಣ ಪತ್ರ ನೀಡಿದರು. ದೊಡ್ಡಬಳ್ಳಾಪುರಕ್ಕಿಂತ ಮೊದಲು ಸೇಡಂನಲ್ಲೇ ಪ್ರಮಾಣಪತ್ರ  ವಿತರಿಸಿದರು.  
 
ಸೇಡಂನ ಕುರಕುಂಟಾ ನಿವಾಸಿ ತಿಪ್ಪಣ್ಣ ಅವರು ಸಮ್ಮಿಶ್ರ ಸರ್ಕಾರದಿಂದ ಋಣಮುಕ್ತ ಪ್ರಮಾಣಪತ್ರ ಪಡೆದ ಮೊದಲ ರೈತರಾದರು. 

ಎಷ್ಟು ಮಂದಿಗೆ?: ಸೇಡಂನಲ್ಲಿ ವಾಣಿಜ್ಯ ಬ್ಯಾಂಕಿನಿಂದ ಸಾಲ ಪಡೆದಿದ್ದ 353 ರೈತರು ಹಾಗೂ ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದಿದ್ದ 24 ರೈತರಿಗೆ ಋಣಮುಕ್ತ ಪ್ರಮಾಣ ಪತ್ರವನ್ನು ವಿತರಿಸಲಾಯಿತು.  ಇನ್ನು ದೊಡ್ಡಬಳ್ಳಾಪುರದಲ್ಲಿ 25 ಮಂದಿಗೆ ಮುಖ್ಯಮಂತ್ರಿ ಎ.ಡಿ. ಕುಮಾರಸ್ವಾಮಿ ಅವರೇ ಋಣಮುಕ್ತ ಪ್ರಮಾಣ ಪತ್ರಗಳನ್ನು ವಿತರಿಸಿದರು.