ಇಂಧೋರ್(ಜ.13): ಶಾಲಾ ಸಮಾರಂಭವೊಂದರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಅವರನ್ನು ಡಾಕು(ಡಕಾಯಿತ)ಎಂದು ಕರೆದಿದ್ದ ಮುಖ್ಯೋಪಾಧ್ಯಾಯರ ಅಮಾನತು ಆದೇಶವನ್ನು ಸ್ವತಃ ಕಮಲ್‌ನಾಥ್ ರದ್ದುಗೊಳಿಸಿದ್ದಾರೆ.

ಇಲ್ಲಿನ ಕನಿಷ್ಟ ಬುನಿಯಾದಿ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಮುಖೇಶ್ ತಿವಾರಿ, ಸಮಾರಂಭವೊಂದರಲ್ಲಿ ಸಿಎಂ ಕಮಲ್‌ನಾಥ್ ಅವರನ್ನು ಡಕಾಯಿತ ಎಂದು ಕರೆದಿದ್ದರು. ಮುಖ್ಯೋಪಾಧ್ಯಯರ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೇ ಜಿಲ್ಲಾಧಿಕಾರಿ ಛವ್ವಿ ಭಾರಧ್ವಾಜ್ ಪ್ರಿನ್ಸಿಪಾಲ್ ಮುಖೇಶ್ ತಿವಾರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

ಈ ಕುರಿತು ಮಾಹಿತಿ ಪಡೆದ ಸಿಎಂ ಕಮಲ್‌ನಾಥ್, ಮುಖೇಶ್ ತಿವಾರಿ ಅಮಾನತು ಆದೇಶವನ್ನು ರದ್ದುಗೊಳಿಸಿದರು. ಅಲ್ಲದೇ ಆ ಶಿಕ್ಷಕನನ್ನು ತಾವು ಕ್ಷಮಿಸಿರುವುದಾಗಿ ಕಮಲ್‌ನಾಥ್ ಸ್ಪಷ್ಟಪಡಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಸಾಂವಿಧಾನಿಕವಾಗಿ ಚುನಾಯಿತರಾದ ಮುಖ್ಯಮಂತ್ರಿಯ ಕುರಿತು ಹೇಳಿಕೆ ನೀಡುವುದಕ್ಕೂ ಮುಂಚೆ ಆ ಶಿಕ್ಷಕ ಒಮ್ಮೆ ಯೋಚಿಸಬೇಕಿತ್ತು. ಅದ್ಯಾಗ್ಯೂ ತಾವು ಅವರನ್ನು ಕ್ಷಮಿಸಿರುವುದಾಗಿ ಕಮಲ್‌ನಾಥ್ ಹೇಳಿದ್ದಾರೆ.