ರಾಮ​ನ​ಗರ (ಜು. 21): ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ನಡುವೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಅಲ್ಪಮತಕ್ಕೆ ಕುಸಿಯುವ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಗೊಂದಲಕ್ಕೊಳಗಾಗಿರುವ ರಾಮನಗರದ ಜೆಡಿಎಸ್‌ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮವೊಂದರ ಫ್ಲೆಕ್ಸ್‌, ಕಟೌಟ್‌ಗಳಲ್ಲಿ ಕುಮಾರಸ್ವಾಮಿಯವರ ಹೆಸರಿನೊಂದಿಗೆ ‘ಮುಖ್ಯಮಂತ್ರಿ’ ಪದವನ್ನು ಮುದ್ರಿಸದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ರಾಮನಗರದಲ್ಲಿ ಜುಲೈ 23ರಂದು ಆಚರಿಸಲಾಗುತ್ತಿರುವ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋ​ತ್ಸ​ವದ ಪ್ರಯುಕ್ತ ನಡೆ​ಯುವ ಸಂಗೀತ ನೃತ್ಯ ಸಂಭ್ರ​ಮಕ್ಕೆ ಸ್ವಾಗತ ಕೋರುವ ಕು​ಮಾ​ರ​ಸ್ವಾಮಿ ಭಾವ ಚಿ​ತ್ರ​ವಿರುವ ದೊಡ್ಡ ದೊಡ್ಡ ಫ್ಲೆಕ್ಸ್‌ ಮತ್ತು ಕಟೌಟ್‌ಗಳನ್ನು ನಗ​ರದ ಪ್ರಮುಖ ವೃತ್ತ ಹಾಗೂ ರಸ್ತೆ ಬದಿ​ಯಲ್ಲಿ ಅಳ​ವ​ಡಿ​ಸ​ಲಾ​ಗು​ತ್ತಿ​ದೆ.

ಅವುಗಳಲ್ಲಿ ‘ಎಚ್‌.ಡಿ.​ಕು​ಮಾ​ರ​ಸ್ವಾಮಿ ಮತ್ತು ಅಭಿ​ಮಾ​ನಿ​ಗಳು’ ಎಂದು ಉಲ್ಲೇಖಿ​ಸ​ಲಾ​ಗಿ​ದೆಯೇ ಹೊರತು ಎಲ್ಲಿಯೂ ‘ಮುಖ್ಯ​ಮಂತ್ರಿ​ಗಳು’ ಎಂಬ ಪದ​ ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ.

ಸೋಮ​ವಾ​ರದ ವಿಶ್ವಾ​ಸ​ ಮತಯಾಚನೆ ನಂತರ ಕುಮಾ​ರ​ಸ್ವಾಮಿ ಮುಖ್ಯ​ಮಂತ್ರಿ​ಗ​ಳಾಗಿ ಉಳಿ​ಯು​ತ್ತಾರೊ ಇಲ್ಲವೊ ಎಂಬ ಅನು​ಮಾನ ಬಹು​ಶಃ ಜೆಡಿ​ಎಸ್‌ ನಾಯ​ಕರು ಮತ್ತು ಕಾರ್ಯ​ಕ​ರ್ತ​ರಿಗೂ ಕಾಡತೊಡಗಿದೆ ಎನ್ನಲಾಗಿದೆ.