ಯಾದಗಿರಿ [ಜೂ.20] : ಲೋಕಸಭಾ ಚುನಾವಣೆಯಲ್ಲಿನ ಕಳಪೆ ಸಾಧನೆ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದ ವರ್ಚಸ್ಸು ಹೆಚ್ಚಿಸುವ ಉದ್ದೇಶದಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುನಾರಂಭಿಸಲು ಉದ್ದೇಶಿಸಿರುವ ಗ್ರಾಮ ವಾಸ್ತವ್ಯದ ಮೊದಲ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ಸಿಗಲಿದೆ.

2006 - 07 ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಆರಂಭಿಸಿದ್ದರು. 

ಇದೀಗ ಎರಡನೇ  ಬಾರಿ ಮುಖ್ಯಮಂತ್ರಿಯಾದ ಬಳಿಕ ಮತ್ತೆ ಗ್ರಾಮ ವಾಸ್ತವ್ಯ ನಡೆಸಲು ತೀರ್ಮಾನಿಸಿದ್ದಾರೆ. ಅದರಂತೆ ಮೊದಲ ಗ್ರಾಮ ವಾಸ್ತವ್ಯ ಹಿಂದುಳಿದ ಪ್ರದೇಶ ಎಂದೇ ಹಣೆಪಟ್ಟಿ ಅಂಟಿಕೊಂಡಿರುವ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಇದೇ ತಿಂಗಳಲ್ಲಿ ಒಟ್ಟು ನಾಲ್ಕು ಜಿಲ್ಲೆಗಳ ನಾಲ್ಕು ಗ್ರಾಮಗಳಲ್ಲಿ ಕುಮಾರಸ್ವಾಮಿ ವಾಸ್ತವ್ಯ ಮಾಡಲಿದ್ದಾರೆ.