ಬೆಂಗಳೂರು :  ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಮೆಟ್ರೋ ರೈಲು ಯೋಜನೆ ಹಾಗೂ ರಸ್ತೆ ನಿರ್ಮಾಣ ಸಂಬಂಧ ರಕ್ಷಣಾ ಇಲಾಖೆಗೆ ಸೇರಿದ ಭೂಮಿಯನ್ನು ನೀಡುವುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮೌಖಿಕವಾಗಿ ಸೂಚಿಸಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬರುವ ಸಂಸತ್‌ ಅಧಿವೇಶನದ ವೇಳೆ ಕೇಂದ್ರ ಸರ್ಕಾರದ ಬಳಿ ಬಾಕಿ ಇರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಪ್ರಸ್ತಾವನೆ, ವಿವಿಧ ಯೋಜನೆಗಳಡಿ ಕೇಂದ್ರದಿಂದ ಬರಬೇಕಾದ ಹಣ ಬಿಡುಗಡೆ ಮಾಡಿಸುವ ಸಂಬಂಧ ಮಂಗಳವಾರ ವಿಧಾನಸೌಧದಲ್ಲಿ ಕರೆಯಲಾಗಿದ್ದ ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಸಭೆಯ ನಂತರ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ರಕ್ಷಣಾ ಸಚಿವರ ಜೊತೆ ಎರಡು ಬಾರಿ ಚರ್ಚಿಸಿದ್ದೇನೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ದೆಹಲಿಯಲ್ಲಿ ರಕ್ಷಣಾ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಆದರೂ ಭೂಮಿ ನೀಡುವ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಬಗ್ಗೆ ಅಧಿವೇಶನದ ವೇಳೆ ಸಚಿವರನ್ನು ಭೇಟಿ ಮಾಡುವಂತೆ ಸಂಸದರಿಗೆ ಮನವಿ ಮಾಡಿರುವುದಾಗಿ ಹೇಳಿದರು.
 
ಸಾವಿರಾರು ಕೋಟಿ ರು. ಬಾಕಿ:   ಸರ್ಕಾರದ ವಿವಿಧ ಯೋಜನೆಗೆ ಕೇಂದ್ರದಿಂದ ಸಾವಿರಾರು ಕೋಟಿ ರು. ಬರಬೇಕಿದೆ. ಕೆಲವು ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ವೆಚ್ಚ ಮಾಡುತ್ತಿದೆ. ನರೇಗಾ ಯೋಜನೆಯಡಿ 2016-17ನೇ ಸಾಲಿನಲ್ಲಿ ಬರಬೇಕಾದ 938 ಕೋಟಿ ರು.ಗಳು ಈವರೆಗೆ ಬಿಡುಗಡೆ ಆಗಿಲ್ಲ. ‘ಸರ್ವಶಿಕ್ಷಣ ಅಭಿಯಾನ’ ಕಾರ್ಯಕ್ರಮದಲ್ಲಿ ಶೇ. 60ರಷ್ಟುಕೇಂದ್ರ ಭರಿಸಬೇಕು, 1728 ಕೋಟಿ. ರು.ಗಳಲ್ಲಿ 560 ಕೋಟಿ ರು. ಕಡಿತ ಮಾಡಿದೆ. ಶಾಲಾ ಮಕ್ಕಳಿಗೆ ಎರಡನೇ ಸಮವಸ್ತ್ರ ನೀಡದೇ ಇರಲು ಹಣ ಕಡಿತ ಮಾಡಿರುವುದು ಸಹ ಕಾರಣವಾಗಿದೆ ಎಂದು ಅವರು ವಿವರ ನೀಡಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಕಳೆದ ನಾಲ್ಕು ವರ್ಷಗಳಿಂದ 1100 ಕೋಟಿ ರು. ಬಾಕಿ ಬರಬೇಕಾಗಿದೆ. ವಿವಿಧ ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಸಂದರ್ಭದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸಿದ ಸಂಬಂಧ ಹಣ ಬಿಡುಗಡೆಯಾಗಿಲ್ಲ. ಈ ಎಲ್ಲದರ ಬಗ್ಗೆ ಸಂಬಂಧಪಟ್ಟಸಚಿವರು, ಅಧಿಕಾರಿಗಳ ಗಮನ ಸೆಳೆಯಬೇಕು, ಒತ್ತಡ ಹೇರುವ ಕೆಲಸ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿಯಿಂದ ಸುಮಾರು 16 ಸಾವಿರ ಕೋಟಿ ರು. ನಷ್ಟವಾಗಿದ್ದು, ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಬರ ಪರಿಹಾರದ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ತಜ್ಞರ ತಂಡ ಬಂದು ಹೋಗಿದೆ. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚಿಸಬೇಕು ಎಂದು ಸಂಸದರಿಗೆ ಕೋರಿರುವುದಾಗಿ ತಿಳಿಸಿದರು.

ನೆನೆಗುದಿಗೆ ಬಿದ್ದ ಯೋಜನೆ:

ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ರೈಲ್ವೆ ಯೋಜನೆಗಳ ವೆಚ್ಚದ ಶೇ.50ರಷ್ಟುಹಾಗೂ ಭೂಮಿ ನೀಡಲು ಆಗುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲು ಮುಂದಾಗಿದ್ದರೂ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಇದೇ ವೇಳೆ ಕುಮಾರಸ್ವಾಮಿ ಮಾಹಿತಿ ನೀಡಿದರು.

ಕಲಬುರಗಿಯಲ್ಲಿ 176 ಕೋಟಿ ರು. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದರೂ, ವಿಮಾನ ಹಾರಾಟಕ್ಕೆ ಅನುಮತಿ ನೀಡಿಲ್ಲ. ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ರಾಜ್ಯಕ್ಕೆ ಬರಬೇಕಾದ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಕಲ್ಲಿದ್ದಲು ಗಣಿ ರಾಜ್ಯಕ್ಕೆ ಮಂಜೂರು ಆಗಿಲ್ಲ. ಇದರಿಂದಾಗಿ ವಿದ್ಯುತ್‌ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಈ ಸಮಸ್ಯೆ ಬಗೆಹರಿಸಲು ಕೇಂದ್ರದ ಮೇಲೆ ಒತ್ತಡ ಹಾಕಬೇಕೆಂದು ಮುಖ್ಯಮಂತ್ರಿಗಳು ಸಂಸದರಲ್ಲಿ ಮನವಿ ಮಾಡಿಕೊಂಡಿರುವುದಾಗಿ ಹೇಳಿದರು.

ಮೇಕೆದಾಟು ಯೋಜನೆ:

ಕುಡಿಯುವ ನೀರು ಹಾಗೂ ವಿದ್ಯುತ್‌ ಉತ್ಪಾದಿಸುವ ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಸಂಸದರು ಅಧಿವೇಶನದ ವೇಳೆ ಪ್ರಸ್ತಾಪಿಸುವ ಸಾಧ್ಯತೆ ಇರುವುದರಿಂದ ರಾಜ್ಯದ ಎಲ್ಲ ಸಂಸದರು ಈ ಬಗ್ಗೆ ಒಗ್ಗಟ್ಟಾಗಿ ರಾಜ್ಯದ ನಿಲುವು, ಯೋಜನೆಯನ್ನು ಸಮರ್ಥಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಈ ಸಂಬಂಧ ಎಲ್ಲ ಮಾಹಿತಿಗಳನ್ನು ಸಂಸದರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಲೋಕಸಭೆಯ ಕಾಂಗ್ರೆಸ್‌ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಹೊರತುಪಡಿಸಿದರೆ ಬಹುತೇಕ ಕಾಂಗ್ರೆಸ್‌ ಸಂಸದರು ಹಾಗೂ ಬಿಜೆಪಿಯ ಪಿ.ಸಿ. ಮೋಹನ್‌, ಜಿ.ಎಂ. ಸಿದ್ದೇಶ್ವರ್‌, ಪ್ರಹ್ಲಾದ್‌ ಜೋಶಿ, ಕರಡಿ ಸಂಗಣ್ಣ ಮುಂತಾದವರು ಪಾಲ್ಗೊಂಡಿದ್ದರು. ಅನೇಕ ಸಚಿವರು ಉಪಸ್ಥಿತರಿದ್ದರು.

ಮಾಹಿತಿ ಜೊತೆ ಸಚಿವರನ್ನೂ ಕಳಿಸಿ 

ಸಂಸತ್‌ ಅಧಿವೇಶನದ ವೇಳೆ ಕೇಂದ್ರದಿಂದ ಬಾಕಿ ಉಳಿದಿರುವ ಪ್ರಸ್ತಾವನೆಗಳ ಕುರಿತು ಅಗತ್ಯ ಮಾಹಿತಿಯೊಂದಿಗೆ ಸಂಬಂಧಪಟ್ಟಸಚಿವರು ಆಗಮಿಸುವುದು ಸೂಕ್ತ ಎಂದು ಸಭೆಯಲ್ಲಿ ಹಲವು ಸಂಸದರು ಸಲಹೆ ನೀಡಿದ್ದಾರೆ.

ಸಂಸದರ ನಿಯೋಗದಲ್ಲಿ ಸಂಬಂಧಪಟ್ಟಸಚಿವರನ್ನೂ ಒಳಗೊಂಡು ಭೇಟಿ ಮಾಡಿದರೆ ಪರಿಹಾರ ಸಿಗುತ್ತದೆ. ಅಲ್ಲದೆ, ರಾಜ್ಯಕ್ಕೆ ಸಂಬಂಧಪಟ್ಟವಿಷಯಗಳ ಬಗ್ಗೆ ಪ್ರಶ್ನೆ ಕೇಳಲು ಅಗತ್ಯ ಮಾಹಿತಿ ನೀಡುವಂತೆ ಕೋರಿದರು. 

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅಗತ್ಯ ಮಾಹಿತಿ ನೀಡುವಂತೆ ದೆಹಲಿಯ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದರು ಎನ್ನಲಾಗಿದೆ.