ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲೇ ಹೋದರೂ ಸಮಯಕ್ಕೆ ಸರಿಯಾಗಿ ಹೋಗೋದಿಲ್ಲ. ಕಳೆದ ವಾರ ರಾಹುಲ್ ಗಾಂಧಿ ಅವರು ಕುಮಾರಸ್ವಾಮಿ ಅವರಿಗೆ ಭೇಟಿಗೆ ಸಮಯ ಕೊಟ್ಟಿದ್ದು 9:30ಕ್ಕೆ. ಆದರೆ ಕರ್ನಾಟಕ ಭವನದಲ್ಲಿ ಪತ್ರಕರ್ತರಿಗೆ ಬೈಟ್ ಕೊಡುತ್ತಾ ಉಪಾಹಾರಕ್ಕೆ ಕುಳಿತ ಮುಖ್ಯಮಂತ್ರಿಗಳು ರಾಹುಲ್ ನಿವಾಸಕ್ಕೆ ಹೋಗಿದ್ದು 10:30ಕ್ಕೆ. ಆಗ ರಾಹುಲ್ ಇನ್ನೊಂದು ಸಭೆಗೆ ಹೋಗುವ ತಯಾರಿಯಲ್ಲಿದ್ದರು. ಹೀಗಾಗಿ ಇಬ್ಬರ ನಡುವೆ ಸಭೆ ನಡೆದದ್ದು ಕೇವಲ 15 ನಿಮಿಷ. ಅಂದಹಾಗೆ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಬಂದಾಗಲೂ ಕುಮಾರಸ್ವಾಮಿ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್‌ರನ್ನು ಬರೋಬ್ಬರಿ 2 ಗಂಟೆ ಕಾಯಿಸಿದ್ದರು.

ದೇಶಪಾಂಡೆ ಬೈಟ್ ತಗೊಳ್ಳಿ: ಸಿಎಂ
ಕುಮಾರಸ್ವಾಮಿ ಆರ್.ವಿ. ದೇಶಪಾಂಡೆ ಅವರಿಗೆ ಕೂಡ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ ಎಂದು ಹೇಳಿದ್ದೇ ತಡ, ಪತ್ರಕರ್ತರು ದೇಶಪಾಂಡೆ ಅವರನ್ನು ಮುತ್ತಿಕೊಂಡರು. ‘ಅಯ್ಯೋ ನೋಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು ಶುದ್ಧ ಪ್ರಾರಬ್ಧ ಕರ್ಮಫಲ. ಅದಕ್ಕಾಗಿ ನಾನು ಏಕೆ ಬೇಸರ ಮಾಡಿಕೊಳ್ಳಲಿ? 2004ರಲ್ಲೇ ದೇವೇಗೌಡರು ನಿನ್ನನ್ನೇ ಮುಖ್ಯಮಂತ್ರಿ ಮಾಡ್ತೀನಿ ಅಂದಿದ್ದರು, ಅದು ಆಗಲಿಲ್ಲ.

ಆಮೇಲೆ ಕುಮಾರಸ್ವಾಮಿಗೆ 2 ಬಾರಿ ಲಕ್ ಹೊಡೆಯಿತು ನೋಡಿ, ನನಗೂ ಅದೃಷ್ಟ ಇದ್ದರೆ ಆಗುತ್ತೇನೆ. ಅದಕ್ಕಾಗಿ ಮತ್ತೊಬ್ಬರ ಮೇಲೆ ಈರ್ಷ್ಯೆ ಪಡೋದಿಲ್ಲ’ ಎಂದು ದೇಶಪಾಂಡೆ ಹೇಳುತ್ತಿದ್ದರು. ರಾಮಕೃಷ್ಣ ಹೆಗಡೆ ಜೊತೆಗಿದ್ದರೂ ದೇವೇಗೌಡರ ಜೊತೆ ನನಗೆ ಒಳ್ಳೆಯ ಸಂಬಂಧ ಮೊದಲಿನಿಂದಲೂ ಇದೆ. ರೇವಣ್ಣ ಕೂಡ ನಮ್ಮ ಮನೆಗೆ ಫೈಲ್ ತರುತ್ತಿದ್ದರು.

ಆದರೆ ಮೊದಲಿನಿಂದಲೂ ಕುಮಾರ ಸ್ವಾಮಿ ಜೊತೆ ಅಷ್ಟು ಆತ್ಮೀಯತೆ ಇಲ್ಲ. ಇವತ್ತಿಗೂ ಎಷ್ಟು ಕೆಲಸವೋ ಅಷ್ಟೇ ಮಾತು ಎನ್ನುತ್ತಿದ್ದರು. ಕರ್ನಾಟಕ ಭವನದಲ್ಲಿ ಹೊರಗಡೆ ಬರುವಾಗ ತಾನೇ ಪತ್ರಕರ್ತರನ್ನು ಕರೆದ ಕುಮಾರಸ್ವಾಮಿ, ‘ದೇಶ ಪಾಂಡೆ ಅವರ ಬೈಟ್ ತೆಗೆದುಕೊಳ್ಳಿ, ಸಬ್ಜೆಕ್ಟ್ ಸ್ಟೋರಿಗೆ ಸರಿಯಾ ಗಿರುತ್ತೆ’ ಎಂದು ಹೇಳಿ ದೇಶಪಾಂಡೆ ಅವರನ್ನು ನಿಲ್ಲಿಸಿ ಬೈಟ್ ತೆಗೆದುಕೊಳ್ಳಲು ಆರಂಭಿಸಿದ ಮೇಲೆ ಮುಂದೆ ಹೋಗಿ ಕಣ್ಣು ಮಿಟುಕಿಸಿದರು.

(ಪ್ರಶಾಂತ್ ನಾತು ಅವರ  ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)