ಕಳೆದ ವಾರ ಬಹುಮತ ಸಾಬೀತುಪಡಿಸುವ ಅಗ್ನಿ ಪರೀಕ್ಷೆಯಲ್ಲಿ ವಿಫಲವಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿಧಾನಸಭೆಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ವಿರುದ್ಧ ಮಾಡಿದ ಟೀಕೆಗಳಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇಂದು ತಿರುಗೇಟು ನೀಡಲು ಸಜ್ಜಾಗಿದ್ದಾರೆ. 

ಬೆಂಗಳೂರು : ಕಳೆದ ವಾರ ಬಹುಮತ ಸಾಬೀತುಪಡಿಸುವ ಅಗ್ನಿ ಪರೀಕ್ಷೆಯಲ್ಲಿ ವಿಫಲವಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿಧಾನಸಭೆಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ವಿರುದ್ಧ ಮಾಡಿದ ಟೀಕೆಗಳಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇಂದು ತಿರುಗೇಟು ನೀಡಲು ಸಜ್ಜಾಗಿದ್ದಾರೆ.

ಕಾಂಗ್ರೆಸ್‌ ಬೆಂಬಲದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿರುವ ಜೆಡಿಎಸ್‌ ಶುಕ್ರವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲಿದೆ. ಕಾಂಗ್ರೆಸ್‌, ಬಿಎಸ್‌ಪಿ, ಜೆಡಿಎಸ್‌ ಮೈತ್ರಿಕೂಟದ ಬಲಾಬಲ 118 ಆಗುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಹುಮತ ಸಾಬೀತುಪಡಿಸುವುದು ಕಷ್ಟವಾಗಲಿಕ್ಕಿಲ್ಲ. ಸದನದಲ್ಲಿ ತಲೆ ಎಣಿಕೆಯ ಮೂಲಕ ಮತಗಳ ಎಣಿಕೆ ನಡೆಯಲಿದೆ ಎಂದು ಹೇಳಲಾಗಿದೆ. ಮಧ್ಯಾಹ್ನದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯ ಪ್ರಸ್ತಾವನೆ ಮಂಡಿಸಲಿದ್ದಾರೆ. ಸದನವನ್ನು ಉದ್ದೇಶಿಸಿ ಸುದೀರ್ಘವಾಗಿ ಭಾಷಣ ಮಾಡಲಿರುವ ಕುಮಾರಸ್ವಾಮಿ ಅವರು ಪ್ರಸಕ್ತ ಸಮ್ಮಿಶ್ರ ಸರ್ಕಾರ ರಚನೆಯನ್ನು ಸಮರ್ಥಿಸಿಕೊಳ್ಳಲಿದ್ದಾರೆ.

ಅಲ್ಲದೇ, ಕಳೆದ ಶುಕ್ರವಾರ ಬಹುಮತ ಸಾಬೀತುಪಡಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದ ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದರು. ಸಮ್ಮಿಶ್ರ ಸರ್ಕಾರ ಸಮರ್ಥಿಸಿಕೊಳ್ಳುವುದರ ಜತೆಗೆ ಯಡಿಯೂರಪ್ಪ ಟೀಕೆಗಳಿಗೆಲ್ಲಾ ಕುಮಾರಸ್ವಾಮಿ ತಿರುಗೇಟು ನೀಡಲಿದ್ದಾರೆ. 2006ರಲ್ಲಿ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಆಡಳಿತದ ಅವಧಿಯಲ್ಲಿ ಬಿಜೆಪಿ ನಡೆ ಸೇರಿದಂತೆ ಆಗಿನಿಂದ ಈಗಿನವರೆಗಿನ ವಿವರಗಳನ್ನು ತಮ್ಮ ಭಾಷಣದಲ್ಲಿ ಹೇಳುವ ಮೂಲಕ ಬಿಜೆಪಿಗೆ ಟಾಂಗ್‌ ಕೊಡಲು ಸಜ್ಜಾಗಿದ್ದಾರೆ. ವಚನ ಭ್ರಷ್ಟತೆ ಎಂಬ ಆರೋಪಕ್ಕೆ ಪ್ರತ್ಯುತ್ತರ ನೀಡಲಿದ್ದಾರೆ. ಅಲ್ಲದೇ, ಚುನಾವಣೆ ವೇಳೆ ಬಿಜೆಪಿ ಮಾಡಿದ್ದ ಟೀಕೆಗಳಿಗೆ ಉತ್ತರ ನೀಡಲಿದ್ದಾರೆ. ಒಟ್ಟಾರೆ ಶುಕ್ರವಾರದ ಅಧಿವೇಶನವು ಬಿಜೆಪಿಯ ಟೀಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ವೇದಿಕೆಯಾಗಲಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ನಾಯಕರಾಗಿ ಮುಖ್ಯಮಂತ್ರಿ ಗದ್ದುಗೆ ಏರಿರುವ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ, ಅಷ್ಟೊಂದು ದಿನ ಅವಶ್ಯಕತೆ ಇಲ್ಲವೆಂದು ಅಭಿಪ್ರಾಯಪಟ್ಟಕುಮಾರಸ್ವಾಮಿ ಅವರು ಶುಕ್ರವಾರ ನಡೆಯುವ ವಿಧಾನಸಭೆಯ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಲು ತೀರ್ಮಾನಿಸಿದ್ದಾರೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ಬಹುಮತ ಸಾಬೀತುಪಡಿಸಲು 111 ಸದಸ್ಯರ ಬಲಾಬಲ ಅಗತ್ಯ ಇದೆ. ಜೆಡಿಎಸ್‌ನ ಮೈತ್ರಿ ಸರ್ಕಾರಕ್ಕೆ ಬಹುಮತ ಇರುವ ಕಾರಣ ಕುಮಾರಸ್ವಾಮಿ ಅವರು ಬಹುಮತ ಸಾಬೀತು ಪಡಿಸುವ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಫಲಿತಾಂಶ ಹೊರಬೀಳುವ ಮುನ್ನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಬಗ್ಗೆ ರಾಜ್ಯಪಾಲರಿಗೆ ಹಕ್ಕುಪಡಿಸಿದವು.

ಆದರೂ, ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನಿಸಿ ಬಹುಮತ ಸಾಬೀತು ಪಡಿಸುವಂತೆ 15 ದಿನಗಳ ಕಾಲಾವಕಾಶ ನೀಡಿದ್ದರು. ಈ ನಡುವೆ, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂಕೋರ್ಟ್‌ ಬಾಗಿಲು ತಟ್ಟಿತು. ಕಾನೂನು ಸಮರದಲ್ಲಿ ಯಡಿಯೂರಪ್ಪ ಅವರಿಗೆ ನ್ಯಾಯಾಲಯವು ಬಹುಮತ ಸಾಬೀತಿಗೆ ಕೇವಲ ಒಂದು ದಿನದ ಕಾಲಾವಕಾಶ ನೀಡಿತು. ನ್ಯಾಯಾಲಯದ ಆದೇಶದ ಮೇರೆಗೆ ಮೇ19ರಂದು ನಡೆದ ಅಧಿವೇಶನದಲ್ಲಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸದೆ ರಾಜೀನಾಮೆ ನೀಡಿ ನಿರ್ಗಮಿಸಿದ್ದರು.

ಬಳಿಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಿದರು. ಈ ಆಹ್ವಾನದ ಮೇರೆಗೆ ಕುಮಾರಸ್ವಾಮಿ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶುಕ್ರವಾರ ಬಹುಮತ ಸಾಬೀತುಪಡಿಸಲಿದ್ದಾರೆ.