ಬೆಂಗಳೂರು :  ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ಪರಿಣಾಮಕಾರಿಯಾಗಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಕಳೆದ ಬಾರಿಯಂತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರಾತ್ರಿ ಹೊತ್ತು ಮಾಡುವುದಿಲ್ಲ. ಬದಲಾಗಿ, ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಗ್ರಾಮ ವಾಸ್ತವ್ಯ ಮಾಡುವ ಸ್ಥಳದಲ್ಲಿ ಕುಳಿತು ಸರ್ಕಾರಿ ಕೆಲಸಗಳನ್ನು ಮಾಡಿಸಲಾಗುವುದು. ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡುತ್ತೇನೆ ಎಂದು ಹೇಳಿದರು.

ನಾನು ಯಾರನ್ನೋ ಮೆಚ್ಚಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡುತ್ತಿಲ್ಲ. ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಸುವರ್ಣ ಗ್ರಾಮೋದಯ ಯೋಜನೆ, ರೈತರ ಸಾಲ ಮನ್ನಾದಂತಹ ಯೋಜನೆಗಳು ಜಾರಿಗೆ ಬರಲು ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಈ ತಿಂಗಳ 21ರಿಂದ ಆರಂಭವಾಗಲಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಬಂಡೆಪ್ಪ ಕಾಶೆಂಪೂರ್‌, ಪ್ರಿಯಾಂಕ್‌ ಖರ್ಗೆ, ವೆಂಕಟರಾವ್‌ ನಾಡಗೌಡ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್‌.ಸುಬ್ರಹ್ಮಣ್ಯ, ಹಿರಿಯ ಅಧಿಕಾರಿಗಳಾದ ಡಾ.ಇ.ವಿ.ರಮಣರೆಡ್ಡಿ, ಡಾ.ರಜನೀಶ್‌ ಗೋಯಲ್, ಎಲ್ ಕೆ.ಅತೀಕ್‌, ರಾಕೇಶ್‌ ಸಿಂಗ್‌, ಕುಮಾರ ನಾಯಕ್‌ ಮೊದಲಾದವರು ಪಾಲ್ಗೊಂಡಿದ್ದರು.

ಈ ವೇಳೆ ತಮ್ಮ ಹಿಂದಿನ ಗ್ರಾಮ ವಾಸ್ತವ್ಯದ ನೆನಪುಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆ ಸಂದರ್ಭದಲ್ಲಿ ಅನುಷ್ಠಾನಗೊಂಡ ಹಲವು ಯೋಜನೆಗಳನ್ನು ಸಭೆಯ ಗಮನಕ್ಕೆ ತಂದರು. ಸುವರ್ಣ ಗ್ರಾಮ ಯೋಜನೆ ಬಹುನಿರೀಕ್ಷಿತ ಯೋಜನೆಯಾಗಿ ರೂಪುಗೊಂಡಿತ್ತು. ಆದರೆ ನನ್ನ ಅವಧಿಯ ನಂತರ ನನ್ನ ಆಶಯಕ್ಕೆ ಅನುಗುಣವಾಗಿ ಸುವರ್ಣ ಗ್ರಾಮ ಯೋಜನೆ ರೂಪುಗೊಳ್ಳಲಿಲ್ಲ. ಅದಕ್ಕೆ ಮತ್ತೆ ಆ ಯೋಜನೆಗೆ ಜೀವ ಕೊಡಲು ಅಧಿಕಾರಿಗಳು ಸಜ್ಜಾಗಬೇಕು ಎಂದು ಸಲಹೆ ಮಾಡಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯದ ಮೂಲಕ ಈಗಾಗಲೇ ಜನಪ್ರಿಯರಾಗಿದ್ದಾರೆ. ಹೈದರಾಬಾದ್‌ ಕರ್ನಾಟಕ ಮೂಲಕ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಿರುವುದು ಸ್ವಾಗತಾರ್ಹ. ಈ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಏರ್ಪಡಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ವಾಸ್ತವ್ಯ ಮಾಡುವ ಗ್ರಾಮದ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೂ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಅಧಿಕಾರಿಗಳು ಮಾತನಾಡಿ, ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ಪೂರ್ವಭಾವಿಯಾಗಿ ಸ್ಥಳ ಭೇಟಿ ಮಾಡಿ, ಜನ ಸಾಮಾನ್ಯರ ಸಮಸ್ಯೆಗಳನನ್ನು ಅರಿತು ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.