Asianet Suvarna News Asianet Suvarna News

ಸಂಪುಟ ವಿಸ್ತರಣೆ; ಆ.16 ಕ್ಕೆ ಸಿಎಂ ದೆಹಲಿಗೆ

ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸಚಿವ ಸ್ಥಾನ ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ದೆಹಲಿಗೆ ತೆರಳುವುದು ಖಚಿತವಾಗಿದ್ದು, ಆ.16 ರಂದು ಸಂಜೆ ರಾಹುಲ್‌ಗಾಂಧಿ ಅವರೊಂದಿಗೆ ದೆಹಲಿಗೆ ಪ್ರಯಾಣ ಮಾಡಿ ಹೈಕಮಾಂಡ್ ಒಪ್ಪಿಗೆ ಪಡೆಯಲಿದ್ದಾರೆ.

CM Going to Delhi on 16 th
ಬೆಂಗಳೂರು (ಆ.14): ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸಚಿವ ಸ್ಥಾನ ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ದೆಹಲಿಗೆ ತೆರಳುವುದು ಖಚಿತವಾಗಿದ್ದು, ಆ.16 ರಂದು ಸಂಜೆ ರಾಹುಲ್‌ಗಾಂಧಿ ಅವರೊಂದಿಗೆ ದೆಹಲಿಗೆ ಪ್ರಯಾಣ ಮಾಡಿ ಹೈಕಮಾಂಡ್ ಒಪ್ಪಿಗೆ ಪಡೆಯಲಿದ್ದಾರೆ.
ಡಾ.ಜಿ. ಪರಮೇಶ್ವರ್, ಎಚ್.ವೈ. ಮೇಟಿಯಿಂದ ತೆರವಾದ ಹಾಗೂ ಎಚ್. ಮಹದೇವಪ್ರಸಾದ್ ನಿಧನದಿಂದ ಖಾಲಿಯಾಗಿರುವ ಮೂರು ಸಚಿವ ಸ್ಥಾನಗಳಿಗೆ ಹೊಸಬರನ್ನು ತುಂಬಿಕೊಳ್ಳುವ ಬಗ್ಗೆ ಆಕಾಂಕ್ಷಿಗಳ ಪಟ್ಟಿ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಹೋಗಲಿದ್ದಾರೆ. ಆ.16 ರಂದು ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಲು ಹಾಗೂ ಕ್ವಿಟ್ ಬಿಜೆಪಿ ಅಭಿಯಾನಕ್ಕೆ ಚಾಲನೆ ನೀಡುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ ರಾಹುಲ್‌ಗಾಂಧಿ ಅವರು ವಾಪಸ್ಸು ದೆಹಲಿಗೆ ತೆರಳಲಿದ್ದು, ಈ ವೇಳೆ ರಾಹುಲ್‌ಗಾಂಧಿ ಅವರ ಜತೆಯೇ ಮುಖ್ಯಮಂತ್ರಿಗಳು ದೆಹಲಿಗೆ ಹೋಗುವುದು ಖಚಿತವಾಗಿದೆ. 
ಹೈಕಮಾಂಡ್ ಭೇಟಿ ವೇಳೆ ವಿಧಾನಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
 
ಆಕಾಂಕ್ಷಿಗಳ ಪಟ್ಟಿ:
ಜಿ.ಪರಮೇಶ್ವರ್ (ಎಸ್‌ಸಿ) ಅವರಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ, ವಿಧಾನಪರಿಷತ್ ಸದಸ್ಯೆ ಎಂ.ಮೋಟಮ್ಮ ಹಾಗೂ ವಿಧಾನಪರಿಷತ್ ಸದಸ್ಯರಾದ ಆರ್.ಬಿ. ತಿಮ್ಮಾಪುರ ಆಕಾಂಕ್ಷಿಗಳಾಗಿದ್ದಾರೆ. ಮಂಡ್ಯದಲ್ಲಿ ಅಂಬರೀಷ್ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಜಿಲ್ಲೆಗೆ ಹುದ್ದೆ ಲಭ್ಯವಾಗಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಸಚಿವ ಸ್ಥಾನದ ನಿರೀಕ್ಷೆಯಲ್ಲಿ ನರೇಂದ್ರ ಸ್ವಾಮಿ ಇದ್ದಾರೆ. ಮೋಟಮ್ಮ ಅವರು ಮಹಿಳೆಗೆ ಅವಕಾಶ ನೀಡಿ ಎಂದು ಹೇಳುತ್ತಿದ್ದಾರೆ. ಇನ್ನು ಎಚ್.ಎಸ್. ಮಹದೇವಪ್ರಸಾದ್ (ಲಿಂಗಾಯತ) ಅವರಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಮಹದೇವಪ್ರಸಾದ್ ಪತ್ನಿ ಗೀತಾ ಮಹದೇವಪ್ರಸಾದ್, ತಿಪಟೂರು ಶಾಸಕ ಕೆ. ಷಡಕ್ಷರಿ, ಉತ್ತರ ಕರ್ನಾಟಕದ ಭಾಗದ ಜಮಖಂಡಿ ಕ್ಷೇತ್ರದ ಸಿದ್ದು ನ್ಯಾಮಗೌಡ ಪ್ರಯತ್ನ ನಡೆಸುತ್ತಿದ್ದಾರೆ.  
ಎಚ್.ವೈ.ಮೇಟಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹಿಂದುಳಿದ ವರ್ಗದಿಂದ ವಿಧಾನಪರಿಷತ್ ಸದಸ್ಯ ಎಚ್.ಎಂ. ರೇವಣ್ಣ, ಹೊಸದುರ್ಗ ಆಂಜಿನಪ್ಪ ಅವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಮೇಟಿ ಮತ್ತೊಮ್ಮೆ ಸಚಿವರಾಗುವ ಆಕಾಂಕ್ಷಿಯಾಗಿರುವುದು ವಿಶೇಷ. ಸಮುದಾಯದ ಬೆಂಬಲ ಕಳೆದುಕೊಳ್ಳುವುದು ಬೇಡ ಎಂಬ ಚಿಂತನೆಯಲ್ಲಿರುವ ಸಿದ್ದರಾಮಯ್ಯ ಬಿ.ಜಿ.ಗೋವಿಂದಪ್ಪ ಅಥವಾ ಎಚ್.ಎಂ. ರೇವಣ್ಣ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಆ.16 ಕ್ಕೆ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಚರ್ಚಿಸಿದ ಬಳಿಕ ಆಕಾಂಕ್ಷಿಗಳ ಭವಿಷ್ಯ ನಿರ್ಧಾರವಾಗಲಿದೆ.
 
ವಿಧಾನಪರಿಷತ್ ಸ್ಥಾನಕ್ಕೆ ಪೈಪೋಟಿ
ಬಿಜೆಪಿಯ ವಿಧಾನಪರಿಷತ್ ಸದಸ್ಯೆ ವಿಮಲಾಗೌಡ ಅವರಿಂದ ನಿಧನದಿಂದ ತೆರವಾದ ಸ್ಥಾನಕ್ಕೂ ಕಾಂಗ್ರೆಸ್‌ನಿಂದ ಭಾರಿ ಪೈಪೋಟಿ ಕಂಡು ಬಂದಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆ ಮಾಡುವ ಈ ಸ್ಥಾನವನ್ನು ಬಹುಮತವಿರುವ ಕಾಂಗ್ರೆಸ್ ಗೆಲ್ಲುವುದು ಖಚಿತ. ಹೀಗಾಗಿ ಪೈಪೋಟಿ ಶುರುವಾಗಿದ್ದು, ರಾಮಚಂದ್ರಪ್ಪ, ಸಿ.ಎಂ. ಇಬ್ರಾಹಿಂ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಈ ಬಗ್ಗೆಯೂ ಹೈಕಮಾಂಡ್ ಜತೆ ಚರ್ಚಿಸಿ ಸಿಎಂ ಅವರು ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಒಬ್ಬರನ್ನು ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
Follow Us:
Download App:
  • android
  • ios