ಬೆಂಗಳೂರು: ‘ಧಾರವಾಡದ ಬಿಜೆಪಿ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಗೌಡರ ಅವರ ಕೊಲೆ ಪ್ರಕರಣಕ್ಕೂ ಸಚಿವ ವಿನಯ್ ಕುಲಕರ್ಣಿ ಅವರಿಗೂ ಯಾವುದೇ ಸಂಬಂಧವಿಲ್ಲ. ಪ್ರಕರಣ ಕುರಿತ ಆಡಿಯೋ ಕೇಳಿದ್ದೇನೆ. ವಿಡಿಯೋ ನೋಡಿದ್ದೇನೆ. ಅದರಲ್ಲಿ ಅಂಥದ್ದೇನೂ ಇಲ್ಲ. ಆರೋಪ ಬಂದಾಕ್ಷಣ ರಾಜೀನಾಮೆ ನೀಡಬೇಕು ಎನ್ನುವುದು ಸರಿಯಲ್ಲ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಜಿಗಜಿಣಗಿ ಅಂತವರ ಮೇಲೂ ಆರೋಪಗಳಿವೆ ಅವರೇನೂ ರಾಜೀನಾಮೆ ನೀಡಿದ್ದಾರೆಯೇ?’ ಹೀಗಂತ ಸಂಪುಟ ಸಹದ್ಯೋಗಿ ವಿನಯ್ ಕುಲಕರ್ಣಿ ಅವರನ್ನು ಬಲವಾಗಿ ಸಮರ್ಥಿಸಿ ಕೊಂಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿನಯ್ ಕುಲಕರ್ಣಿ ಅವರ ವರ್ಚಸ್ಸಿಗೆ ಮಸಿ ಬಳಿಯಲು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿನಯ್ ಕುಲಕರ್ಣಿ ಅವರ ಹೆಸರು ಎಫ್‌ಐಆರ್‌ನಲ್ಲೂ ಇಲ್ಲ. ಹೀಗಿದ್ದ ಮೇಲೆ ಅವರ ಹೆಸರಿಗೆ ಈ ಪ್ರಕರಣವನ್ನು ತಳಕುಹಾಕುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

ಅಲ್ಲದೆ, ‘ಪ್ರಕರಣ ಹಿಂತೆಗೆದು ಕೊಳ್ಳುವಂತೆ ವಿನಯ್ ಕುಲಕರ್ಣಿ ಅವರು ಹತ್ಯೆಗೀಡಾದ ಬಿಜೆಪಿ ಮುಖಂಡನ ಕುಟುಂಬದವರ ಮೇಲೆ ಒತ್ತಡ ಹಾಕಿದ್ದಾರೆ ಎಂಬುದು ಸಹಸುಳ್ಳು. ಈ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾದ ಆಡಿಯೋ ಹಾಗೂ ವಿಡಿಯೋ ಅನ್ನು ತರಿಸಿ ನಾನು ಸಹ ನೋಡಿದ್ದೇನೆ. ಅದರಲ್ಲಿ ಅಂತಹದ್ದು ಏನೂ ಇಲ್ಲ’ ಎಂದು ಅವರು ಸಮರ್ಥಿಸಿಕೊಂಡರು.