ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಾವಣೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳು ವರುಣಾ ಕ್ಷೇತ್ರ ತ್ಯಜಿಸಿ ಕುರುಬರೇ ಬಹುಸಂಖ್ಯಾತರಿರುವ ಕೊಪ್ಪಳದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳಿದ್ದವು. ಈಗ ಸ್ವತಃ ಸಿದ್ದರಾಮಯ್ಯ ಅವರೇ ಮುಂದಿನ ಚುನಾವಣೆಯಲ್ಲಿ ಮೈಸೂರಿನಲ್ಲಿ ತಮ್ಮ ಈಗಿನ ಕ್ಷೇತ್ರ ವರುಣಾ ಬದಲು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಮೈಸೂರು (ಮೇ.20): ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಾವಣೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳು ವರುಣಾ ಕ್ಷೇತ್ರ ತ್ಯಜಿಸಿ ಕುರುಬರೇ ಬಹುಸಂಖ್ಯಾತರಿರುವ ಕೊಪ್ಪಳದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳಿದ್ದವು. ಈಗ ಸ್ವತಃ ಸಿದ್ದರಾಮಯ್ಯ ಅವರೇ ಮುಂದಿನ ಚುನಾವಣೆಯಲ್ಲಿ ಮೈಸೂರಿನಲ್ಲಿ ತಮ್ಮ ಈಗಿನ ಕ್ಷೇತ್ರ ವರುಣಾ ಬದಲು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
‘‘ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೇನೆ, ಎಲ್ಲ ಸಿದ್ಧರಾಗಿ’’ ಎಂದು ಅವರು ಶನಿವಾರ ಮೈಸೂರಿನಲ್ಲಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ನಗರದ ಸರ್ಕಾರಿ ಅತಿಥಿಗೃಹದಲ್ಲಿ ಶನಿವಾರ ನಡೆದ ಸಾರ್ವಜನಿಕರ ಆಹವಾಲು ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುವಾಗ ಅವರು ಈ ವಿಚಾರ ತಿಳಿಸಿದ್ದಾರೆ.
ಇಲವಾಲ ಹೋಬಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಸೇತುವೆ ಕಾಮಗಾರಿಗೆ ಅಗತ್ಯ ಅನುದಾನ ನೀಡಬೇಕೆಂದು ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಕೋರಿದಾಗ, ‘‘ಚಾಮುಂಡೇಶ್ವರಿಗೆ ನಾನೇ ಬರುತ್ತೇನೆ, ಸಿದ್ಧವಾಗಿರಿ. ನಾನು ಮತ್ತೆ ಬರುತ್ತೇನೆ ಅಂತ ಜೋರು ಮಾಡಬೇಡಿ’’ ಎಂದು ಸಿಎಂ ಹೇಳಿದರು.
ಸಕ್ರಿಯ ರಾಜಕಾರಣ ಸಾಕಾಗಿದೆ: ಇದಕ್ಕೂ ಮೊದಲು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಕಾಲಕ್ಕೆ ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದೆ. ಸಕ್ರಿಯ ರಾಜಕಾರಣ ಸಾಕಾಗಿದೆ. ಆದರೂ ಇನ್ನೊಂದು ಬಾರಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸಿಎಂ ತಿಳಿಸಿದರು.
1991 ರಲ್ಲಿ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧಿಸಿ, ಸುಮಾರು 10,000 ಮತಗಳ ಅಂತರದಲ್ಲಿ ಸೋತೆ. ಅತ್ಯಂತ ಕಡಿಮೆ ಅಂತರದಿಂದ ಸೋತವನು ನಾನೇ. ರಾಮಕೃಷ್ಣ ಹೆಗಡೆ ಅವರ ಸೋಲಿನ ಅಂತರ 30,000 ಕ್ಕಿಂತ ಹೆಚ್ಚಿತ್ತು. ಆದರೆ ಮತ್ತೆ ಕೊಪ್ಪಳದಿಂದ ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ. ಲೋಕಸಭೆಗೆ ಹೋಗಬೇಕು ಎಂಬ ಬಯಕೆಯೂ ಇಲ್ಲ ಎಂದರು.
ಇದೇ ವೇಳೆ ಇತ್ತೀಚೆಗೆ ನಿಮ್ಮಲ್ಲಿ ಆತ್ಮವಿಶ್ವಾಸ ಬಹಳಷ್ಟು ಹೆಚ್ಚಿದೆ? ಮತ್ತೊಮ್ಮೆ ಸಿಎಂ ಆಗಬೇಕು ಎಂಬ ಆಕಾಂಕ್ಷೆ ಇದೆಯೇ? ಎಂದು ಪ್ರಶ್ನಿಸಿದಾಗ, ನನ್ನಲ್ಲಿ ಯಾವಾಗಲೂ ಆತ್ಮವಿಶ್ವಾಸವಿದೆ. ನಾನು ಆಶಾವಾದಿ. ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಆದರೆ ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
 ---------------------------