ಮೂರು ದಿನ ಗಡುವು ಕೊಟ್ಟು ಮುಖ್ಯಮಂತ್ರಿ BSY ವಾರ್ನಿಂಗ್
ರಾಜ್ಯ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಮೂರು ದಿನಗಳ ಕಾಲ ಗಡುವು ನೀಡಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಹಾಗಾದರೆ ಯಾರಿಗೆ ಈ ಎಚ್ಚರಿಕೆ?
ಬೆಂಗಳೂರು [ಜು.29]: ರಾಜಧಾನಿಯಲ್ಲಿ ಉದ್ಭವಿಸಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಬಿಎಂಪಿ ಆಯುಕ್ತರನ್ನು ಕರೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಭಾನುವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಕರೆಸಿಕೊಂಡ ಮುಖ್ಯಮಂತ್ರಿ ಅವರು, ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಉದ್ಭವಿಸಿದ್ದು ಮೂರು ದಿನಗಳಲ್ಲಿ ಎಲ್ಲ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕಳೆದ ಕೆಲ ದಿನಗಳಿಂದ ನಗರದಲ್ಲಿ ಕಸದ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಹಾಗಾಗಿ ಬಿಬಿಎಂಪಿ ಆಯುಕ್ತರನ್ನು ಕರೆಸಿ ಮೂರು ದಿನಗಳೊಳಗೆ ಕಸ ವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದೇನೆ. ನಗರದ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ಕೊಟ್ಟಿದ್ದೇನೆ. ನಗರದಲ್ಲಿ ನಾನೇ ಎಲ್ಲವನ್ನೂ ಪರಿಶೀಲನೆ ನಡೆಸುತ್ತೇನೆ. ಬಿಡಿಎ ಮತ್ತು ಬಿಬಿಎಂಪಿ ಪ್ರಗತಿ ಪರಿಶೀಲನೆಯನ್ನೂ ನಡೆಸುತ್ತೇನೆ ಎಂದು ಹೇಳಿದರು.
ಭಾನುವಾರವೂ ವಿಲೇವಾರಿಯಾಗದ ಕಸ:
ನಗರದ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡುವ ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನಗರದ ಹಲವು ರಸ್ತೆ, ಮಾರುಕಟ್ಟೆಗಳಲ್ಲಿ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದೆ ಹಾಗೇ ಉಳಿಸಿದೆ. ಆಟೋ ಟಿಪ್ಪರ್‌ಗಳು ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ಕೆಲವೆಡೆ ಕಸ ವಾಸನೆ ಬಿಡಿಯುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾನವಾಗಿದೆ. ಭಾನುವಾರ ಕೂಡ ಸಮರ್ಪಕವಾಗಿ ಕಸ ವಿಲೇವಾರಿ ನಡೆದಿಲ್ಲ. ನಗರದ ವಿವಿಧೆಡೆ ಯತಾಸ್ಥಿತಿ ಕಂಡುಬಂತು.
ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಉದ್ಭವಿಸಿದ್ದು, ಈ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ. ನಗರದ ಯಾವುದೇ ರಸ್ತೆಯಲ್ಲಿ ಕಸ ಇರಬಾರದು ಎಂದು ಸೂಚಿಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ನಗರದಲ್ಲಿ ತಾವೇ ಖದ್ದು ತಪಾಸಣೆ ನಡೆಸುವುದಾಗಿ ಹೇಳಿದ್ದಾರೆ. ಬಿಬಿಎಂಪಿಯ ಎಲ್ಲಾ ವಲಯ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಬಾಕಿ ಇರುವ ತ್ಯಾಜ್ಯ ವಿಲೇವಾರಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು.
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ.