ಬೆಂಗಳೂರು [ಆ.15]:  ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿ ಸಭಾಧ್ಯಕ್ಷ ಕೆ.ಆರ್‌. ರಮೇಶಕುಮಾರ್‌ ಅವರ ಆದೇಶ ಪ್ರಶ್ನಿಸಿ 17 ಮಂದಿ ಶಾಸಕರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿರುವ ಪ್ರಕರಣದ ಸಂಬಂಧ ಸಭಾಧ್ಯಕ್ಷರ ಪರ ವಕೀಲರಾಗಿರುವ ಕಾಂಗ್ರೆಸ್‌ ಪಕ್ಷದ ಕಾನೂನು ತಜ್ಞ ಅಭಿಷೇಕ್‌ ಮನು ಸಿಂಘ್ವಿ ಅವರನ್ನು ಬದಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ನ 13 ಮಂದಿ ಶಾಸಕರು, ಜೆಡಿಎಸ್‌ನ ಮೂರು ಮಂದಿ ಹಾಗೂ ಪಕ್ಷೇತರ ಶಾಸಕ ಆರ್‌. ಶಂಕರ್‌ ಸೇರಿದಂತೆ ಹದಿನೇಳು ಮಂದಿ ಶಾಸಕರನ್ನು ಪಕ್ಷಾಂತರ ಕಾಯ್ದೆ ಉಲ್ಲಂಘನೆ ದೂರಿನಡಿ 15ನೇ ವಿಧಾನಸಭೆಯ ಸಂಪೂರ್ಣ ಅವಧಿಗೆ ಅನರ್ಹಗೊಳಿಸಿ ಹಿಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಆದೇಶ ಹೊರಡಿಸಿದ್ದರು.

ಈ ಬಗ್ಗೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಿರುವ ಅನರ್ಹ ಶಾಸಕರು, ವಿಧಾನಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೂ ರಾಜೀನಾಮೆಯನ್ನು ಪರಿಗಣಿಸದೆ ನಿಯಮ ಬಾಹಿರವಾಗಿ ಅನರ್ಹತೆಗೊಳಿಸಿದ್ದಾರೆ ಎಂದು ದೂರಿದ್ದರು. ಈ ಪ್ರಕರಣದಲ್ಲಿ ಸ್ಪೀಕರ್‌ ಕಚೇರಿ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡನೆ ಮಾಡುತ್ತಿದ್ದರು.

ಅಭಿಷೇಕ್‌ ಸಿಂಘ್ವಿ ಅವರು ಕಾಂಗ್ರೆಸ್‌ನ ಕಾನೂನು ತಜ್ಞರು, ರಾಜ್ಯಸಭಾ ಸದಸ್ಯರೂ ಆಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಕಾಂಗ್ರೆಸ್‌ ಮುಖಂಡರೂ ಆಗಿರುವ ಅಭಿಷೇಕ್‌ ಮನು ಸಿಂಘ್ವಿ ಅವರನ್ನು ಬದಲಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸಿಂಘ್ವಿ ಅವರನ್ನು ಬದಲಿಸಿದರೆ ಯಾವ ವಕೀಲರನ್ನು ನೇಮಿಸುತ್ತಾರೆ ಹಾಗೂ ಸುಪ್ರೀಂಕೋರ್ಟ್‌ನ ವಿಚಾರಣೆ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಕಾಂಪ್ರಮೈಸ್ ಪಾಲಿಟಿಕ್ಸ್: BSY-GTD ಮಾತುಕತೆ ಸಕ್ಸಸ್

ಜುಲೈ 25 ಹಾಗೂ ಜುಲೈ 28ರಂದು ಎರಡು ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರು, ಹದಿನೇಳು ಮಂದಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ಮಾಡಿದ್ದರು. ಅನರ್ಹತೆ ಆದೇಶವು ಪ್ರಸಕ್ತ 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೆ ಅನ್ವಯವಾಗಲಿದೆ. ಹೀಗಾಗಿ ಈ ಶಾಸಕರು 2023ರವರೆಗೆ ಯಾವುದೇ ರೀತಿಯಲ್ಲೂ ವಿಧಾನಸಭೆಗೆ ಪ್ರವೇಶಿಸುವಂತಿಲ್ಲ ಎಂದು ಆದೇಶಿಸಿದ್ದರು. ಆದರೆ ನಿಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಅನರ್ಹಗೊಂಡರೂ ಉಪ ಚುನಾವಣೆಯಲ್ಲಿ ಗೆದ್ದು ಅದೇ ವಿಧಾನಸಭೆಗೆ ಮರು ಆಯ್ಕೆಯಾಗಲು ಅವಕಾಶವಿದೆ. ಜತೆಗೆ ರಾಜೀನಾಮೆ ಸಲ್ಲಿಸಿರುವುದನ್ನು ಪುರಸ್ಕರಿಸದೆ ನಿಯಮಬಾಹಿರವಾಗಿ ಒತ್ತಡಕ್ಕೆ ಮಣಿದು ಸ್ಪೀಕರ್‌ ಈ ತೀರ್ಪು ನೀಡಿದ್ದಾರೆ ಎಂದು ಅನರ್ಹ ಶಾಸಕರು ಸುಪ್ರೀಂಕೋರ್ಟ್‌ಗೆ ಹೋಗಿದ್ದರು.