Asianet Suvarna News Asianet Suvarna News

NSS ಸೇವಾ ಬಂಧುಗಳೇ ಬನ್ನಿ ರಾಜ್ಯ ಕಟ್ಟೋಣ : ಸಿಎಂ BSY

 ದಶಕ ಹಿಂದೆ ಆರಂಭವಾದ ರಾಷ್ಟ್ರೀಯ ಸೇವಾ ಯೋಜನೆಯಡಿ ಗ್ರಾಮೀಣ ನೈರ್ಮಲ್ಯ, ಅರಣ್ಯೀಕರಣ, ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ, ಆರೋಗ್ಯ ಶಿಬಿರಗಳ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸಿದೆ.. ಜತೆಗೆ, ಬರ, ನೆರೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಾಮಾಜಿಕ ಸೌಹಾರ್ದತೆ, ಪರಿಸರ ಸಂರಕ್ಷಣೆ ಅಭಿಯಾನಗಳನ್ನು ಕೈಗೊಂಡು ಮಹತ್ವದ ಕೆಲಸ ಮಾಡಿದೆ. ಇಂಥ ಅನೇಕ ಸೇವಾ ಪರಿಕಲ್ಪನೆಗಳೊಂದಿಗೆ ಎನ್‌ಎಸ್‌ಎಸ್‌, ಶಾಲಾ-ಕಾಲೇಜುಗಳ ಪಠ್ಯಕ್ರಮದ ಅವಿಭಾಜ್ಯ ಅಂಗ ಆಗಿಹೋಗಿದೆ. ಪ್ರಸಕ್ತ ಹಿನ್ನೆಲೆಯಲ್ಲಿ ಕರ್ನಾಟಕದ ಮಟ್ಟಿಗೆ ಎನ್‌ಎಸ್‌ಎಸ್‌ನ ತುರ್ತು ಸಹಕಾರದ ಅತ್ಯಗತ್ಯವಿದೆ. ಹೀಗೆಂದು ಸಿಎಂ ಪತ್ರ ಬರೆದಿದ್ದಾರೆ. 

CM BS Yediyurappa Letter To NSS cadres For Floods helps
Author
Bengaluru, First Published Sep 11, 2019, 7:22 AM IST

ಬೆಂಗಳೂರು [ಸೆ.11]:  ರಾಷ್ಟ್ರೀಯ ಸೇವಾ ಯೋಜನೆ, NSS ಎನ್ನುವ ಹೆಸರಿನಿಂದ ಭಾರತದ ಉದ್ದಗಲಕ್ಕೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಕೇಂದ್ರ ಯುವಜನ ಇಲಾಖೆಯ ಆಶ್ರಯದಲ್ಲಿ ಕಾರ್ಯ ನಿರ್ವಹಿಸುವ ಈ ರಾಷ್ಟ್ರೀಯ ಸೇವಾ ಸಂಘಟನೆಗೆ ಪ್ರಧಾನವಾಗಿರುವುದು ಎರಡು ಗುರಿಗಳು. ‘ವಿದ್ಯಾರ್ಥಿ ವ್ಯಕ್ತಿತ್ವ ವಿಕಸನ’ ಮತ್ತು ‘ಸಮುದಾಯ ಸೇವೆ’. ಈ ಎರಡೂ ಆದ್ಯತೆಯ ವಿಷಯಗಳನ್ನು ಹೊತ್ತ ಎನ್‌ಎಸ್‌ಎಸ್‌ ರಥ ಐದು ದಶಕಗಳ ಹಾದಿಯನ್ನು ಯಶಸ್ವಿಯಾಗಿ ಸವೆಸಿದೆ.

ಸ್ವಾತಂತ್ರ್ಯಾನಂತರ ಡಾ.ಎಸ್‌.ರಾಧಾಕೃಷ್ಣನ್‌ ಅವರು ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎನ್‌ಎಸ್‌ಎಸ್‌ ಚಿಂತನೆ ಚಿಗುರೊಡೆದಿತ್ತು. ಸ್ವಯಂಪ್ರೇರಣೆಯ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಪುನರ್‌ನಿರ್ಮಾಣ ಚಟುವಟಿಕೆಯಲ್ಲಿ ಭಾಗಿ ಆಗಬೇಕು. ಈ ಮೂಲಕ ಸಮುದಾಯದ ಅಭಿವೃದ್ಧಿಯಾಗುತ್ತದೆ. ಅದರ ಜೊತೆಗೆ ಶ್ರಮದ ದುಡಿಮೆಯ ಮಹತ್ವದ ಅರಿವನ್ನು ಗಳಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನವೂ ಆಗುತ್ತಿದೆ ಎಂದು ಡಾ.ರಾಧಾಕೃಷ್ಣನ್‌ ಅವರ ನೇತೃತ್ವದ ಸಮಿತಿ ಅಭಿಪ್ರಾಯಿಸಿತ್ತು.

1950ರ ಜನವರಿ ತಿಂಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಕೇಂದ್ರ ಸಲಹಾ ಮಂಡಳಿ ಡಾ.ರಾಧಾಕೃಷ್ಣನ್‌ ನೇತೃತ್ವದ ಸಲಹಾ ಸಮಿತಿಯ ಶಿಫಾರಸುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿತ್ತು. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಕೆಲ ಸಮಯವನ್ನು ಶ್ರಮದ ದುಡಿಮೆಗೆ ಮೀಸಲಿಡಬೇಕು. ಶ್ರಮದ ದುಡಿಮೆಯ ಮೂಲಕ ಸಮಾಜ ಪುನರ್‌ ನಿರ್ಮಾಣ ಮಾಡುವ ಈ ಪ್ರಕ್ರಿಯೆಯಲ್ಲಿ ಶಿಕ್ಷಕರೂ ಸಕ್ರಿಯರಾಗಿ ಭಾಗಿಗಳಾಗಬೇಕು ಎನ್ನುವುದು ಆಗ ಶಿಕ್ಷಣ ಕುರಿತ ಕೇಂದ್ರ ಸಲಹಾ ಮಂಡಳಿಯ ಅಭಿಮತವಾಗಿತ್ತು.

ಸಂವಿಧಾನ ರಚನೆಯ ನಂತರ 1952ರಲ್ಲಿ ಅಧಿಕಾರ ಸೂತ್ರ ಹಿಡಿದ ಕೇಂದ್ರ ಸರ್ಕಾರ ರಾಷ್ಟ್ರೀಯ ಸೇವಾ ಯೋಜನೆಯ ಚಿಂತನೆಯನ್ನು ತನ್ನ ಮಹತ್ವಾಕಾಂಕ್ಷೆಯ ಪಂಚವಾರ್ಷಿಕ ಯೋಜನೆಗಳಲ್ಲಿ ಅಳವಡಿಸಿಕೊಂಡಿತ್ತು. ಅಂದಿನ ಪ್ರಧಾನಿ ಪಂಡಿತ್‌ ಜವಾಹರಲಾಲ… ನೆಹರು ಅವರು ಭಾರತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ‘ಬೆವರು ಹರಿಸಿದ ಶ್ರಮದ ದುಡಿಮೆಯಿಂದ ಸಮಾಜ ಪುನರ್‌ ನಿರ್ಮಾಣ ಮಾಡುವ ಸೇವಾ ಚಟುವಟಿಕೆಯ ಅನುಭವ ಪ್ರತಿಯೊಬ್ಬ ಪದವೀಧರನಿಗೆ ಆಗಲೇಬೇಕು. ಈ ದಿಸೆಯಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಸಮುದಾಯವನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕು. ಇಂತಹ ಗುರುತರ ಜವಾಬ್ದಾರಿಯನ್ನು ಪ್ರತಿಯೊಂದು ರಾಜ್ಯಗಳು ಕಾಯಾ-ವಾಚಾ-ಮನಸಾ ಸಾಕಾರಗೊಳಿಸಬೇಕು’ ಎಂದು ಸೂಚಿಸಿದ್ದರು.

ಭಾರತ ಸರ್ಕಾರದ ಇಂತಹ ಮಹತ್ವಾಕಾಂಕ್ಷಿ ಯೋಜನೆ ಹತ್ತು ಹಲವು ಚಿಂತನ-ಮಂಥನಗಳ ನಂತರ ಸಾಕಾರಗೊಂಡದ್ದು 1969ರ ಸೆಪ್ಟೆಂಬರ್‌ 24ರಂದು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ NOT Me, But You ಎನ್ನುವ ಘೋಷವಾಕ್ಯದೊಡನೆ ಎನ್‌ಎಸ್‌ಎಸ್‌ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ವಿಶ್ವವಿದ್ಯಾಲಯ, ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ಸಹಭಾಗಿಗಳಾಗಲು ಸೂಚಿಸಲಾಯಿತು. ಅಂದು ಶಿಕ್ಷಣ ಸಚಿವರಾಗಿದ್ದ ಡಾ.ವಿ.ಕೆ.ಆರ್‌.ವರದರಾಜ್‌ ರಾವ್‌ ಅವರು ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಂವಾದ ನಡೆಸಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಅರಿವನ್ನು ಮಾಡಿಕೊಟ್ಟಿದ್ದರು.

"

ಈ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಭಾರತದ ಭವ್ಯ ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳ ಜನರ ನೋವು ನಲಿವುಗಳ ಅರ್ಥವಾಗುತ್ತದೆ. ನಿಜವಾಗಿಯೂ ಗ್ರಾಮೀಣ ಭಾರತ ಎಂಥ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದರ ಅರಿವು ವಿದ್ಯಾರ್ಥಿ ಸಮುದಾಯಗಳಿಗೆ ಆಗುತ್ತದೆ. ಇದರಿಂದ ವಿದ್ಯಾರ್ಥಿ ಸಮುದಾಯ ಬದುಕಿನ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ಭವಿಷ್ಯದಲ್ಲಿ ಸತ್ಪ್ರಜೆಗಳಾಗುತ್ತಾರೆ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟಿದ್ದರು.

ಹೀಗೆ 1969ರಲ್ಲಿ ಸೆ.24ಕ್ಕೆ ಸರಿಯಾಗಿ ಐದು ದಶಕಗಳಿಗೆ ಮೊದಲು ಆರಂಭಗೊಂಡ ರಾಷ್ಟ್ರೀಯ ಸೇವಾ ಯೋಜನೆ ನಿಜಕ್ಕೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಗ್ರಾಮೀಣ ನೈರ್ಮಲ್ಯ, ಅರಣ್ಯೀಕರಣ, ಸಾಮಾಜಿಕ ಅನಿಷ್ಟಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸುವುದು, ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು, ರಾಷ್ಟ್ರೀಯ ಸೇವಾ ಯೋಜನೆಯ ಪ್ರಧಾನ ಪರಿಕಲ್ಪನೆಗಳಾಗಿದ್ದವು. ಇದರ ಜೊತೆಗೆ  'Youth Against Famine', 'Youth Against Natural
Disaster', 'Youth for National Integration and
Social harmony', 'Youth for Eco Development', '
Healthy Youth for Healthy India'  
ಈ ತೆರನಾದ ಅನೇಕ ಸೇವಾ ಪರಿಕಲ್ಪನೆಗಳ ಜೊತೆ ಎನ್‌ಎಸ್‌ಎಸ್‌ ಭಾರತದ ಎಲ್ಲಾ ಶಾಲಾ ಕಾಲೇಜುಗಳ ಪಠ್ಯಕ್ರಮದ ಅವಿಭಾಜ್ಯ ಅಂಗ ಆಗಿಹೋಗಿದೆ. ಪ್ರಸಕ್ತ ಹಿನ್ನೆಲೆಯಲ್ಲಿ ಕರ್ನಾಟಕದ ಮಟ್ಟಿಗೆ ಎನ್‌ಎಸ್‌ಎಸ್‌ನ ತುರ್ತು ಸಹಕಾರದ ಅತ್ಯಗತ್ಯವಿದೆ.

100 ವರ್ಷಗಳ ಐತಿಹಾಸಿಕ ನಷ್ಟ

ಕರ್ನಾಟಕ ಕಳೆದ ನೂರು ವರ್ಷಗಳಲ್ಲಿ ಕಂಡು ಕೇಳರಿಯದ ಭೀಕರ ನೆರೆ ಹಾವಳಿಯಿಂದ ತತ್ತರಿಸಿ ಹೋಗಿದೆ. ಈಗ ಅಖಂಡ ಕರ್ನಾಟಕದ ಪುನರ್‌ ನಿರ್ಮಾಣ ಆಗಬೇಕಿದೆ. 2019ರ ಆ.3ರಿಂದ 10ರವರೆಗೆ ಸುರಿದ ಮಳೆಯ ಸರಾಸರಿ ಪ್ರಮಾಣ 224 ಮಿ.ಮೀ. ಇದು ಹಿಂದಿನ ಮಳೆಯ ಪ್ರಮಾಣಕ್ಕೆ ಹೋಲಿಸಿಕೊಂಡರೆ ಶೇ.279ರಷ್ಟುಹೆಚ್ಚು. ಕೆಲವು ಜಿಲ್ಲೆಗಳಲ್ಲಿ ಹಿಂದೆ ಸುರಿದ ಮಳೆಯ ಪ್ರಮಾಣಕ್ಕಿಂತ ಶೇ.700ರಷ್ಟುಅಧಿಕ ಮಳೆ ಸುರಿದಿದೆ. ಇಷ್ಟೊಂದು ಘನಘೋರ ಮಳೆಯ ರುದ್ರತಾಂಡವ ಉತ್ತರ ಕರ್ನಾಟಕ, ಉತ್ತರ ಒಳ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ನಡೆದಿದೆ. ಇದರ ಜೊತೆಗೆ ಮಹಾರಾಷ್ಟ್ರದ ಭೀಮಾ ಜಲಾನಯನ ಪ್ರದೇಶ, ಕರ್ನಾಟಕದ ಕೃಷ್ಣಾ ಮೇಲ್ದಂಡೆ ಪ್ರದೇಶಗಳಲ್ಲಿರುವ ಜಲಾಶಯಗಳಿಂದ ಒಂಬತ್ತು ಲಕ್ಷ ಕೂಸೆP್ಸ… ನೀರನ್ನು ಹರಿಬಿಡಲಾಗಿದೆ. ಒಂದು ಕಡೆ ಭಾರಿ ಪ್ರಮಾಣದಲ್ಲಿ ಸುರಿದ ಮಳೆ, ಇನ್ನೊಂದು ಕಡೆ ಜಲಾಶಯಗಳಿಂದ ಸಾಗರದೋಪಾದಿಯಲ್ಲಿ ಹರಿದ ನೀರಿನ ಕಾರಣದಿಂದ 22 ಜಿಲ್ಲೆಗಳ 103 ತಾಲೂಕುಗಳ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನಿಸರ್ಗದ ರುದ್ರ ತಾಂಡವಕ್ಕೆ ಗುರಿಯಾಗಿ ತತ್ತರಿಸಿ ಹೋದ 1.93 ಲಕ್ಷ ಕುಟುಂಬಗಳಿಗೆ ತುರ್ತು ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರು.ಗಳನ್ನು ನೀಡಲಾಗಿದೆ. ಹತ್ತುಸಾವಿರ ರು.ಗಳಲ್ಲಿ 6200 ರು.ಗಳನ್ನು ರಾಜ್ಯದ ನಿಧಿಯಿಂದ ಬಳಸಲಾಗಿದೆ. ಮನೆ ಕಳೆದುಕೊಂಡ ಪ್ರತಿ ಕುಟುಂಬಕ್ಕೆ ಐದು ಲಕ್ಷ ರು., ಭಾಗಶಃ ಹಾನಿಗೊಳಗಾದ ಮನೆಗಳಿಗೆ 25 ಸಾವಿರ ರು.ಗಳ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರ 103 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿದೆ. ಈವರೆಗೆ 354 ಕೋಟಿ ರು.ಗಳನ್ನು ಪರಿಹಾರ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಭೀಕರ ಪ್ರವಾಹದ ಕಾರಣದಿಂದ ಕೋಟ್ಯಂತರ ರು. ಮೌಲ್ಯದ ಬೆಳೆ ನಾಶ ಆಗಿದೆ. ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿವೆ, ಇದರಿಂದಾಗಿ ಮೂಲಭೂತ ಸೌಕರ್ಯಗಳು ಸಂಪೂರ್ಣ ನಾಶ ಆಗಿವೆ. ಭೀಕರ ಪ್ರವಾಹ ಹಾಗೂ ಭೂಕುಸಿತದ ಪರಿಣಾಮವಾಗಿ 85 ಜನರು ಜೀವ ಕಳೆದುಕೊಂಡಿದ್ದಾರೆ. ಸುಮಾರು 2.45 ಲಕ್ಷ ಮನೆಗಳು ಗಂಭೀರ ಹಾನಿಗೊಳಗಾಗಿವೆ. ಅವುಗಳಲ್ಲಿ 1.59 ಲಕ್ಷದಷ್ಟುಮನೆಗಳು ಹೇಳ ಹೆಸರಿಲ್ಲದಂತಾಗಿವೆ. ಪ್ರವಾಹದ ಭೀಕರತೆಗೆ 8.88 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ, ಕಬ್ಬು ಮತ್ತಿತರ ಪ್ಲಾಂಟೇಷನ್‌ ಬೆಳೆಗಳು ಸಂಪೂರ್ಣ ನಾಶ ಆಗಿವೆ. ಕೆಲವು ಭೂ ಪ್ರದೇಶಗಳಲ್ಲಿ ಹಳ್ಳ-ಕೊಳ್ಳಗಳು ಹೊಳೆಗಳು, ನದಿ ಪಾತ್ರಗಳೇ ಬದಲಾಗಿವೆ. ರೈತರ ಜಮೀನಿನಲ್ಲಿ ಹೂಳು ತುಂಬಿದೆ. ಯಾವುದು ರೈತನ ಜಮೀನು, ಯಾವುದು ಅಲ್ಲ ಎಂದು ಗುರುತಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಇದರ ಪರಿಣಾಮವಾಗಿ 10,615 ಹೆಕ್ಟೇರ್‌ ಕೃಷಿ ಮತ್ತು ತೋಟಗಾರಿಕೆ ಬೆಳೆ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಅದರಿಂದಾಗಿ 15,119 ಕೋಟಿ ರು. ನಷ್ಟಆಗಿದೆ.

ಮೂಲಭೂತ ಸೌಕರ್ಯಗಳಿಗೆ ಊಹಿಸಲೂ ಸಾಧ್ಯವಾಗದಂತಹ ಹಾನಿಯಾಗಿದೆ. ರಸ್ತೆಗಳು, ಸೇತುವೆಗಳು, ಕಲ್ವರ್ಟ್‌ಗಳು, ಶಾಲಾ ಕಾಲೇಜು, ಅಂಗನವಾಡಿ ಆಸ್ಪತ್ರೆ ಕಟ್ಟಡಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಇವುಗಳ ಸಂಖ್ಯೆ 10988. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲೆಗಳ ಪ್ರಮುಖ ರಸ್ತೆಗಳು, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜೀವನಾಡಿ ಆಗಿದ್ದ ರಸ್ತೆಗಳ ಸಂಕುಲವೇ ಧೂಳೀಪಟ ಆಗಿದೆ. ಇನ್ನು 2913 ಸೇತುವೆಗಳು ದೊಡ್ಡ ಪ್ರಮಾಣದಲ್ಲಿ ಅಪಾಯಕ್ಕೆ ಗುರಿಯಾಗಿವೆ. ಇಂಥ ಭೀಕರ ಅನಾಹುತದ ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಪೂರೈಸುವ ವಿದ್ಯುತ್‌ ಜಾಲದ ಮಾರಣಹೋಮ ಆಗಿದೆ. 59,598 ವಿದ್ಯುತ್‌ ಕಂಬಗಳು, 14098 ಟ್ರಾನ್ಸ್‌ಫಾರ್ಮರ್‌ಗಳು, 3619 ವಿದ್ಯುತ್‌ ಪೂರೈಕೆ ಲೈನ್‌ಗಳು ಸಂಪೂರ್ಣ ಹಾಳಾಗಿವೆ.

ರಾಜ್ಯ ಸರ್ಕಾರದ ಅಂದಾಜಿನಂತೆ ಈವರೆಗಿನ ನಿಸರ್ಗದ ರುದ್ರ ತಾಂಡವದ ಪರಿಣಾಮ 38 ಸಾವಿರ ಕೋಟಿ ರು. ನಷ್ಟಆಗಿದೆ. ಕೇಂದ್ರ ಸರ್ಕಾರದ ಅಂತರ್‌ ಸಚಿವಾಲಯ ತಂಡ, ಪ್ರವಾಹ ಪೀಡಿತ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ, ಮತ್ತು ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಿ ನೆರೆಯ ಹಾವಳಿಯಿಂದ ಘಟಿಸಿರುವ ಭಾರೀ ಪ್ರಮಾಣದ ನಷ್ಟವನ್ನು ಅಂದಾಜು ಮಾಡಿದೆ. ಕೇಂದ್ರ ಸರ್ಕಾರದಿಂದ ದೊಡ್ಡ ಪ್ರಮಾಣದ ನೆರವು ದೊರೆಯಲಿದೆ ಎನ್ನುವ ಭರವಸೆ ನನಗಿದೆ.

ಈಗ ಮುಂದಿರುವ ದೊಡ್ಡ ಸವಾಲು ‘ನ ಭೂತೋ ನ ಭವಿಷ್ಯತಿ’ ಅನ್ನುವ ರೀತಿಯಲ್ಲಿ ಗ್ರಾಮೀಣ ಕರ್ನಾಟಕ, ವಿಶೇಷವಾಗಿ ಉತ್ತರ ಕರ್ನಾಟಕ ಭಾರೀ ಪ್ರಮಾಣದ ಸಂಕಟದಲ್ಲಿ ಸಿಲುಕಿದೆ. ಒಲೆ ಹೊತ್ತಿ ಉರಿದೊಡೆ ನಿಲಬಹುದಲ್ಲದೆ ಧರೆ ಹೊತ್ತಿ ಉರಿದೊಡೆ ನಿಲಬಹುದೇ ಎನ್ನುವ ಬಸವಣ್ಣನವರ ವಚನದ ಸಾಲುಗಳಂತೆ ಇಡೀ 22 ಜಿಲ್ಲೆಗಳ, 103 ತಾಲೂಕುಗಳ ಹಳ್ಳಿಗಳ ಪುನರ್‌ ನಿರ್ಮಾಣ ಆಗಬೇಕಾಗಿದೆ. ಇದು ಸರ್ಕಾರವೊಂದರಿಂದಲೇ ಸಾಧ್ಯವಾಗುವ ಕೆಲಸ ಅಲ್ಲ. ಈಗಾಗಲೇ ನೆರೆ ಸಂತ್ರಸ್ತರಿಗೆ ಸಾರ್ವಜನಿಕರು ಮುಕ್ತ ಮನಸ್ಸಿನಿಂದ ತನು-ಮನ-ಧನದ ಮೂಲಕ ಬೆಂಬಲದ ಮಹಾಪೂರ ಹರಿಸಿದ್ದಾರೆ. ರಾಜ್ಯ ಸರ್ಕಾರದ ಪರಿಹಾರ ಕಾಮಗಾರಿಗಳ ಜೊತೆಗೆ ಕೇಂದ್ರ ಸರ್ಕಾರದ ದೊಡ್ಡ ಪ್ರಮಾಣದ ನೆರವು ನೆರೆ ಸಂತ್ರಸ್ತರಿಗೆ ದೊರೆಯಲಿದೆ ಎನ್ನುವ ಭರವಸೆ ನನಗಿದೆ.

22 ಜಿಲ್ಲೆಗಳ ಪುನರ್‌ನಿರ್ಮಾಣದ ಗುರಿ

ಈಗ ಆಗಬೇಕಾಗಿರುವುದು ಸಮರೋಪಾದಿಯಲ್ಲಿ ಸಾರ್ವಜನಿಕ ಬದುಕನ್ನು ಕಟ್ಟಿಕೊಡುವ ಕೆಲಸ. ಈ ಹಿನ್ನೆಲೆಯಲ್ಲಿ ಐದು ದಶಕಗಳ ಅರ್ಪಣಾ ಮನೋಭಾವದ ಸೇವಾ ಇತಿಹಾಸ ಹೊಂದಿರುವ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್‌) ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಿದೆ. ಕರ್ನಾಟಕದ ಉದ್ದಗಲಕ್ಕೂ ಸಾವಿರಾರು ಶಿಕ್ಷಣ ಸಂಸ್ಥೆಗಳಿವೆ. ಅನೇಕಾನೇಕ ವಿಶ್ವವಿದ್ಯಾನಿಲಯಗಳಿವೆ. ಇಲ್ಲಿ ಎನ್‌ಎಸ್‌ಎಸ್‌ನಲ್ಲಿ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲಾ ಈಗ ಕರ್ನಾಟಕದ ಪ್ರವಾಹಪೀಡಿತ 22 ಜಿಲ್ಲೆಗಳಲ್ಲಿ ನಿಸರ್ಗದ ಮುನಿಸಿಗೆ ಗುರಿಯಾಗಿ ಮನೆಮಾರು ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ, ತಂದೆ-ತಾಯಿಗಳ, ಮುದ್ದು ಮಕ್ಕಳ ಬದುಕನ್ನು ಮತ್ತೆ ಕಟ್ಟಿಕೊಡುವ ಮಹಾನ್‌ ಕೈಂಕರ್ಯದಲ್ಲಿ ತೊಡಗಬೇಕು. ನೆರೆ ಹಾವಳಿಪೀಡಿತ ಪ್ರದೇಶಗಳ ಪುನರ್‌ ನಿರ್ಮಾಣ ಕಾಯಕದಲ್ಲಿ ಎನ್‌ಎಸ್‌ಎಸ್‌ ಸ್ವಪ್ರೇರಣೆಯಿಂದ ಭಾಗಿ ಆಗಬೇಕು ಅನ್ನುವುದು ನನ್ನ ಹೃದಯ ಪೂರ್ವಕ ವಿನಂತಿ.

ಎನ್ನೆಸ್ಸೆಸ್‌ ಯೋಧರಿಗೆ ಉಚಿತ ಬಸ್‌ ನೆರವು

ವಿವಿಧ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳು ಯಾವ ಜಿಲ್ಲೆಯ ಯಾವ ತಾಲೂಕನ್ನು ತಮ್ಮ ಸೇವಾ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೋ ಅಲ್ಲಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕೂಡ ಕಲ್ಪಿಸಿಕೊಡಲಾಗುವುದು. ಕಾಲೇಜುಗಳು ಆಯ್ಕೆ ಮಾಡಿಕೊಳ್ಳುವ ತಾಲೂಕುಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳುವುದಕ್ಕೆ ಪೂರಕವಾದ ಎಲ್ಲಾ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡಲು ಸಂಬಂಧಪಟ್ಟಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು. ಬನ್ನಿ, ಕರ್ನಾಟಕದ ಪುನರ್‌ ನಿರ್ಮಾಣದ ಮಹಾನ್‌ ಕೆಲಸದಲ್ಲಿ ಭಾಗಿಯಾಗಿ, ಲಕ್ಷಾಂತರ ಸಂತ್ರಸ್ತರ ಬದುಕಿಗೆ ಬೆಳಕಾಗಿ. ಭಾಗವಹಿಸಲು ಇಚ್ಛಿಸುವ ಕಾಲೇಜುಗಳ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ತಾವು ತೆರಳುವ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ವಿವರ ಪಡೆದುಕೊಳ್ಳಬಹುದು.

Follow Us:
Download App:
  • android
  • ios