ಚಿಕ್ಕಮಗಳೂರು[ಆ.28]: ಅತಿವೃಷ್ಟಿಯಿಂದಾಗಿ ಭಾರಿ ಹಾನಿಗೆ ತುತ್ತಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಮಲೆಮನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಹತ್ತೇ ನಿಮಿಷದಲ್ಲಿ ಹಾನಿ ಪರಿಶೀಲನೆ ನಡೆಸಿ ವಾಪಸ್‌ ಆದ ಪ್ರಸಂಗ ನಡೆಯಿತು. ಮುಖ್ಯಮಂತ್ರಿಗಳ ಈ ನಡೆಗೆ ಸಂತ್ರಸ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ .732.28 ಕೋಟಿ ನಷ್ಟಸಂಭವಿಸಿದೆ. ನೂರಾರು ಮನೆಗಳೂ ನಾಶವಾಗಿವೆ. ಇಂಥ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್‌ ನೀಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಮುಖ್ಯಮಂತ್ರಿಗಳು ದಿಢೀರ್‌ ಬೆಂಗಳೂರಿಗೆ ವಾಪಸಾಗಿದ್ದು, ಸಂತ್ರಸ್ತರಲ್ಲಿ ನಿರಾಶೆ ಮೂಡಿಸಿತು.

ಪೂರ್ವ ನಿಗದಿಯಂತೆ ಯಡಿಯೂರಪ್ಪ ಅವರು ಬೆಳಗ್ಗೆ ಮೂಡಿಗೆರೆಗೆ ಆಗಮಿಸಬೇಕಾಗಿತ್ತು. ಆದರೆ, ತುರ್ತು ಕಾರಣಗಳ ಹಿನ್ನೆಲೆಯಲ್ಲಿ ಅವರು ಹೊರಡುವುದು ವಿಳಂಬವಾಯಿತು. ಅಲ್ಲದೆ, ಮಳೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ ಇಳಿಸುವುದು ಕಷ್ಟವಾಗಿದ್ದರಿಂದ ಕಾಪ್ಟರ್‌ ಅನ್ನು ಚಿಕ್ಕಮಗಳೂರಲ್ಲಿ ಇಳಿಸಿ, ಅಲ್ಲಿಂದ ಸುಮಾರು 65 ಕಿ.ಮೀ. ದೂರದಲ್ಲಿರುವ ನೆರೆಪೀಡಿತ ಪ್ರದೇಶಕ್ಕೆ ಕಾರಿನಲ್ಲೇ ಆಗಮಿಸಿದರು.

ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಲೆಮನೆ ಗ್ರಾಮದಲ್ಲಿ ಧರೆ ಕುಸಿದು 6 ಮನೆಗಳು, ಕಾಫಿ ಮತ್ತು ಅಡಕೆ ತೋಟಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಮುಖ್ಯಮಂತ್ರಿಗಳು ಗ್ರಾಮ ತಲುಪಿದಾಗ ಅಪರಾಹ್ನ 3.15 ಸಮೀಪಿಸಿತ್ತು. ದೂರದಿಂದಲೇ ಕುಸಿದಿರುವ ಗುಡ್ಡ, ಮನೆಗಳಿದ್ದ ಪ್ರದೇಶ ವೀಕ್ಷಿಸಿದ ಯಡಿಯೂರಪ್ಪ ಅವರಿಗೆ ಸ್ಥಳದಲ್ಲೇ ಇದ್ದ ಸಚಿವ ಸಿ.ಟಿ.ರವಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅಲ್ಲಿನ ಗ್ರಾಮಸ್ಥರ ಪರಿಸ್ಥಿತಿ ವಿವರಿಸಿದರು.

ಕೇವಲ 3-4 ನಿಮಿಷ ಪರಿಶೀಲನೆ ನಡೆಸಿದ ಅವರು ನಂತರ ಧರೆ ಕುಸಿತದಲ್ಲಿ ಮನೆ ಮತ್ತು ತೋಟಗಳನ್ನು ಕಳೆದುಕೊಂಡವರ ಸಮಸ್ಯೆ ಆಲಿಸಿದರು. ಜಿಲ್ಲೆಯಲ್ಲಿ ಆಗಿರುವ ನಷ್ಟ, ಜನರಿಗೆ ಬೇರೆ ಕಡೆ ಮನೆ ಕಟ್ಟಿಕೊಳ್ಳಲು ನಿವೇಶನ ಹಾಗೂ ಜಮೀನು ಗುರುತು ಮಾಡಿ, ಜಿಲ್ಲೆಯ ಶಾಸಕರ ಹಾಗೂ ಸಚಿವರ ಗಮನಕ್ಕೆ ತಂದು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರಿಗೆ ಸೂಚಿಸಿ 3.25ಕ್ಕೆ ಮುಖ್ಯಮಂತ್ರಿ ಬೆಂಗಳೂರಿಗೆ ವಾಪಸಾದರು. ಈ ವೇಳೆ ಮುಖ್ಯಮಂತ್ರಿಗಾಗಿ ಬೆಳಗ್ಗಿನಿಂದ ಎದುರು ನೋಡುತ್ತಿದ್ದ ಸಂತ್ರಸ್ತರಿಗೆ ನಿರಾಸೆಯಾಗಿದ್ದಲ್ಲದೆ, ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದರು.