ಇದೇ ಭಾನುವಾರದಿಂದ ಒಂದು ವಾರ ನೀರು ಬಿಡುಗಡೆ. ಕೆರೆ ತುಂಬಿಸಲು ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಬಿಡಲಾಗುತ್ತಿದೆ.

ಬೆಂಗಳೂರು(ಆ.04): ಮಾಜಿ ಪ್ರಧಾನಿ ದೇವೇಗೌಡರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಮಾವತಿ ಜಲಾಶಯದಿಂದ ಒಂದು ಟಿಎಂಸಿ ನೀರು ಬಿಡಲು ಸಮ್ಮತಿ ಸೂಚಿಸಿದ್ದಾರೆಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾವೇರಿ ಕಣಿವೆ ಜಿಲ್ಲೆಗಳ ಉಸ್ತುವಾರಿ ಸಚಿವರ ಸಭೆಯ ಬಳಿಕ ಮಾತನಾಡಿ, ಕಾವೇರಿ ಜಲಾನಯನದ ನಾಲ್ಕು ಜಲಾಶಯಗಳಲ್ಲಿ ಒಟ್ಟು 43 ಟಿಎಂಸಿ ನೀರು ಸಂಗ್ರಹವಿದೆ. ತಮಿಳುನಾಡಿಗೆ ಇಲ್ಲಿವರೆಗೆ 9 ಟಿಎಂಸಿ ನೀರು ಬಿಡಲಾಗಿದೆ. ಬೆಂಗಳೂರು, ಮೈಸೂರು ಜನರಿಗೆ ಕುಡಿಯಲು 34 ಟಿಎಂಸಿ ನೀರಿನ ಅಗತ್ಯತೆ ಇದೆ. ಇದೇ ವೇಳೆ, ಇದೇ 14 ರಂದು ಸರ್ವಪಕ್ಷಗಳ ಸಭೆ ಕರೆದಿದ್ದು, ಸಭೆಯಲ್ಲಿ ಕಾವೇರಿ ಕಣಿವೆ ಸಧ್ಯದ ಸ್ಥಿತಿ-ಗತಿಗಳ ಬಗ್ಗೆ ಮತ್ತು ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ದೇವೇಗೌಡರ ಮನವಿ ಮೇರೆಗೆ ಹೇಮಾವತಿ ಜಲಾಶಯದಿಂದ ಒಂದು ಟಿಎಂಸಿ ಕುಡಿಯಲು ಬಿಡಲಾಗುತ್ತಿದೆ. ಹತ್ತು ದಿನಗಳ ಕಾಲ ನೀರು ಬಿಡುತ್ತಿದ್ದೇವೆ. ಇದೇ ಭಾನುವಾರದಿಂದ ಒಂದು ವಾರ ನೀರು ಬಿಡುಗಡೆ. ಕೆರೆ ತುಂಬಿಸಲು ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಬಿಡುತ್ತಿದ್ದೇವೆ. ಯಾವುದೇ ಬೆಳೆಗಳಿಗೆ ನೀರು ಬಿಡುತ್ತಿಲ್ಲ. ಈ ಬಗ್ಗೆ ದೇವೇಗೌಡ ಕೂಡ ಒತ್ತಾಯ ಮಾಡಿದ್ದರು ಎಂದು ಹೇಳಿದರು.

ಸಂಕಷ್ಟ ಸೂತ್ರ ಅನ್ವಯ ತಮಿಳುನಾಡಿಗೆ ನೀರು ಬಿಡುತ್ತಿದ್ದೇವೆ. ಪ್ರತಿ ನಿತ್ಯ 8 ಸಾವಿರ ಕ್ಯೂಸೆಕ್ಸ್ ನೀರು ಹರಿಸುತ್ತಿದ್ದೇವೆ.11 ಟಿಎಂಸಿ ನೀರು ಸಂಕಷ್ಟ ಸೂತ್ರ ಅನ್ವಯ ತಮಿಳುನಾಡಿಗೆ ಬಿಡಬೇಕಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಸಭೆಯಲ್ಲಿ ಟಿ.ಬಿ. ಜಯಚಂದ್ರ, ಹೆಚ್.ಸಿ. ಮಹದೇವಪ್ಪ, ಯು ಟಿ ಖಾದರ್, ಎ.ಮಂಜು, ಎಂ.ಆರ್. ಸೀತಾರಾಂ, ಎಂ. ಕೃಷ್ಣಪ್ಪ, ಆಂಜನೇಯ, ಕೃಷ್ಣ ಭೈರೇಗೌಡ, ಮಾಜಿ ಸಚಿವ ಅಂಬರೀಷ್, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಡ್ವೋಕೇಟ್ ಜನರಲ್ ಸೇರಿ ಇತರೆ ಮುಖಂಡರು ಭಾಗಿಯಾಗಿದ್ದರು.

(ಸಾಂದರ್ಭಿ )