ಸಚಿವ ಸಂಪುಟದ ವಿಸ್ತರಣೆಯೇ ಆಗಿಲ್ಲ. ಆದಾಗ್ಯೂ ಗೃಹ ಖಾತೆಯನ್ನು ಯಾರಿಗೆ ಕೊಡಬೇಕು? ರಮಾನಾಥ್ ರೈ ನಿಮ್ಮ ಬಳಿ ತಾವೇ ಗೃಹ ಸಚಿವರೆಂದು ಹೇಳಿದ್ದಾರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳನ್ನು ಖಾರವಾಗಿ ಪ್ರಶ್ನಿಸಿದರು.

ಬೆಂಗಳೂರು (ಜು.26): ಸಚಿವ ಸಂಪುಟದ ವಿಸ್ತರಣೆಯೇ ಆಗಿಲ್ಲ. ಆದಾಗ್ಯೂ ಗೃಹ ಖಾತೆಯನ್ನು ಯಾರಿಗೆ ಕೊಡಬೇಕು? ರಮಾನಾಥ್ ರೈ ನಿಮ್ಮ ಬಳಿ ತಾವೇ ಗೃಹ ಸಚಿವರೆಂದು ಹೇಳಿದ್ದಾರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳನ್ನು ಖಾರವಾಗಿ ಪ್ರಶ್ನಿಸಿದರು.
ಬುಧವಾರ ವಿಧಾನಸೌಧಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಮೂರು ಹುದ್ದೆ ಖಾಲಿ ಇದೆ. ಹೈಕಮಾಂಡ್ ಜತೆ ಚರ್ಚಿಸಿ ಶೀಘ್ರ ವಿಸ್ತರಣೆ ಮಾಡಲಾಗುತ್ತದೆ. ಅದಾದ ಬಳಿಕವಷ್ಟೇ ಗೃಹ ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕೆಂಬುದು ನಿರ್ಧಾರವಾಗುತ್ತದೆ. ಅರಣ್ಯ ಸಚಿವ ರಮಾನಾಥ್ ರೈ ಅವರಿಗೆ ಗೃಹ ಖಾತೆ ಕೊಡುತ್ತಾರೆ ಎಂದು ಮಾಧ್ಯಮಗಳೇ ಸ್ವಯಂಪ್ರೇರಿತ ವರದಿ ಮಾಡುತ್ತಿವೆ. ನಾನು ಆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಪಪಡಿಸಿದರು.

ಜವಾಬ್ದಾರಿ ಹೊರಲು ಸಿದ್ಧ- ರೈ.
ಆದರೆ, ಸಚಿವ ಸಂಪುಟ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ರಮಾನಾಥ್ ರೈ ಅವರು ಸಿಎಂ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಯಾವುದೇ ಜವಾಬ್ದಾರಿ ಕೊಟ್ಟರೂ ನಾನು ನಿಭಾಯಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಖಾಸಗಿ ನನ್ನ ಜತೆ ಚರ್ಚಿಸಿದ್ದಾರೆ. ಆದರೆ ಏನೇನು ಮಾತನಾಡಿದ್ದಾರೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಪುನರ್ ನೇಮಕಗೊಂಡ ಬಳಿಕ ಖಾಲಿಯಾಗಿದ್ದ ಗೃಹ ಖಾತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅರಣ್ಯ ಸಚಿವ ರೈಗೆ ಕೊಡಲು ಸಿಎಂ ಸಿದ್ದರಾಮಯ್ಯ ದ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಸಿಎಂ ಅವರ ಆಪ್ತ ಬಳಗ ಇದನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ.