ರಾಜ್ಯದಲ್ಲಿ ಬಿಜೆಪಿಯ ಸ್ಥಿತಿ ಅಧೋಗತಿ ಕಂಡಿರುವುದನ್ನು ಅರಿತಿರುವ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸ್ಥಿತಿ ಉತ್ತಮಪಡಿಸಿಕೊಳ್ಳಲು ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿಯೇ ಬಿಜೆಪಿ ನಾಡಿನ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರ (ಸೆ.18): ರಾಜ್ಯದಲ್ಲಿ ಬಿಜೆಪಿಯ ಸ್ಥಿತಿ ಅಧೋಗತಿ ಕಂಡಿರುವುದನ್ನು ಅರಿತಿರುವ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸ್ಥಿತಿ ಉತ್ತಮಪಡಿಸಿಕೊಳ್ಳಲು ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿಯೇ ಬಿಜೆಪಿ ನಾಡಿನ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯ ಅಧೋಗತಿ ನೋಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಅವರು ‘ನೋಡ್ರಪ್ಪಾ ಬಿಜೆಪಿ ಈಗಿನ ಪರಿಸ್ಥಿತಿಯಲ್ಲಿ 60 ರಿಂದ 65 ಸ್ಥಾನ ಗೆಲ್ಲಬಹುದು ಅಷ್ಟೇ. ಹೀಗಾಗಿ ರಾಜ್ಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೋಮು ಗಲಭೆ ಮಾಡಿಸಿ’ ಎಂದಿದ್ದಾರೆ ಎಂದು ಆರೋಪಿಸಿದರು. ಹೆಬ್ಬಾಳ-ನಾಗವಾರ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮೈಸೂರು ಸಂಸದ ಪ್ರತಾಪ್ ಸಿಂಹಗೆ ಅಮಿತ್‌ಶಾ ತೀವ್ರ ತರಾಟೆಗೆ ತೆಗೆದುಕೊಂಡು, ಬೈಕ್ ತೆಗೆದುಕೊಂಡು ಮಂಗಳೂರಿಗೆ ಹೋಗು ಎಂದು ಬೈದು ಕಳುಹಿಸಿದರು. ಹೀಗಾಗಿ ಮಂಗಳೂರಿನಲ್ಲಿ ಕೋಮು ಸಾಮರಸ್ಯ ಕದಡಲು ಬೈಕ್ ರ‌್ಯಾಲಿ ಹೊರಟಿದ್ದರು.
"ನಾನು ಮಂಗಳೂರು ಚಲೋ ಮಾಡಬೇಡಿ. ಅಲ್ಲಿ ಹಿಂದೂ ಮುಸ್ಲಿಂ ನಡುವೆ ಗಲಾಟೆಗಳು ಆಗುತ್ತವೆ. ಸಾಮರಸ್ಯ ಹಾಳಾಗಿ ಹೋಗುತ್ತದೆ. ಮಂಗಳೂರು ಚಲೋ ಮಾಡುವ ಬದಲು ದೆಹಲಿ ಚಲೋ ಮಾಡಿ ರಾಜ್ಯದ ರೈತರ ಸಾಲ ಮನ್ನಾ ಮಾಡಿಸಿ ಎಂದು ಹೇಳಿದ್ದೆ. ಆದರೆ ಬೆಂಕಿ ಹಚ್ಚುವುದೇ ಕೆಲಸ ಮಾಡಿಕೊಂಡವರು ತುಟಿ ಪಿಟಿಕ್ ಅನ್ನಲ್ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಜನತೆಗೆ ಬಿಜೆಪಿ ಆಡಳಿತಾವಧಿಯಲ್ಲಿ ಏನೂ ಮಾಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದರೇ ಹೊರತು ರಾಜ್ಯದ ಜನರಿಗೆ ನಯಾಪೈಸೆ ಕೆಲಸ ಮಾಡಲಿಲ್ಲ. ಆದರೂ ಜೇಬಿನಲ್ಲಿ ಶಾಸಕ ಸ್ಥಾನಗಳನ್ನು ಇಟ್ಟುಕೊಂಡಂತೆ ‘ಮಿಷನ್-150’, ‘ಮಿಷನ್-150 ಪ್ಲಸ್’ ಎಂದು ಓಡಾಡುತ್ತಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಅಮಿತ್ ಶಾಗೂ ಆಗಿದೆ ಎಂದರು.
