ಸರ್ಕಾರಕ್ಕೆ ಮುಜುಗರ ತಂದ ಐದು ಪ್ರಸಂಗಗಳು
ಪ್ರಕರಣ-1
ನವೆಂಬರ್ 22, 2013- ಗಣಿ ಹಗರಣದಲ್ಲಿ ವಾರ್ತಾ ಇಲಾಖೆ ಸಚಿವರಾಗಿದ್ದ ಸಂತೋಷ್ ಲಾಡ್ ರಾಜಿನಾಮೆ. ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ನೀಡಿದ್ದ ವರದಿಯಲ್ಲಿ ಲಾಡ್ ಮನೆತನದ ಗಣಿಗಾರಿಕೆ ಕಂಪನಿ ಭಾಗಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರತಿಪಕ್ಷಗಳ ಪಟ್ಟಿಗೆ ಮಣಿದು ರಾಜಿನಾಮೆ ನೀಡಿದ್ದ ಅವರು, 2016ರ ಜೂನ್ 19ರಂದು ಸಚಿವ ಸಂಪುಟ ಪುನಾರಚನೆಯಲ್ಲಿ ಮತ್ತೆ ಸಂಪುಟ ಸೇರಿದರು.
ಪ್ರಕರಣ-2
ಜೂನ್ 19, 2016- ಕಾರ್ಮಿಕ ಖಾತೆ ಸಚಿವರಾಗಿದ್ದ ಪಿ.ಟಿ.ಪರಮೇಶ್ವರ್ ನಾಯಕ್ ರಾಜಿನಾಮೆ. ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶೆಣೈಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದರು. ಸಂಪುಟ ಪುನಾರಚನೆ ವೇಳೆ 14 ಜನರನ್ನು ಸಂಪುಟದಿಂದ ಕೈ ಬಿಟ್ಟ ಪರಿಣಾಮ ಡಿವೈಎಸ್‌ಪಿ ಶೆಣೈ ಪ್ರಕರಣದ ಕಾರಣವನ್ನೇನೂ ಸರ್ಕಾರ ಒಪ್ಪಿಕೊಂಡಿರಲಿಲ್ಲ.
ಪ್ರಕರಣ-3
ಜುಲೈ 19, 2016- ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದರು. ಮಡಿಕೇರಿ ಠಾಣೆಯಲ್ಲಿ ಜಾರ್ಜ್ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಜಿನಾಮೆಗೆ ಪಟ್ಟು ಹಿಡಿದಿದ್ದವು. ವಿಧಾನಮಂಡಲ ಅವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಅಂತಿಮವಾಗಿ ಜಾರ್ಜ್ ರಾಜಿನಾಮೆ ನೀಡಿದ್ದರು. ಸಿಐಡಿ ತನಿಖೆಯಲ್ಲಿ ಜಾರ್ಜ್‌ಗೆ ಕ್ಲೀನ್ ಚಿಟ್ ನೀಡಿದ್ದರಿಂದ ಕಳೆದ ಸೆಪ್ಟೆಂಬರ್ 26ರಂದು ಮತ್ತೆ ಸಚಿವ ಸಂಪುಟ ಸೇರ್ಪಡೆಗೊಂಡು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾರೆ.
ಪ್ರಕರಣ-4
ನವೆಂಬರ್ 10, 2016- ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ರಾಯಚೂರಿನಲ್ಲಿ ನಡೆದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪ್ರತಿಪಕ್ಷಗಳು ಬೆಳಗಾವಿ ಅವೇಶನದ ವೇಳೆ ರಾಜಿನಾಮೆಗೆ ಪಟ್ಟು ಹಿಡಿದರೂ ಪ್ರಕರಣದಲ್ಲಿ ಮೇಲ್ನೋಟಕ್ಕೆ ಯಾವುದೇ ತಪ್ಪು ಕಾಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜಿನಾಮೆ ತಳ್ಳಿ ಹಾಕಿದ್ದರು.
ಪ್ರಕರಣ-5
ಡಿಸೆಂಬರ್ 14- ಅಬಕಾರಿ ಸಚಿವ ಎಚ್.ವೈ. ಮೇಟಿ ರಾಜಿನಾಮೆ. ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ದೆಹಲಿಯಲ್ಲಿ ಮಾಧ್ಯಮಗಳಿಗೆ ಮಹಿಳೆಯೊಬ್ಬರೊಂದಿಗೆ ಸಚಿವ ಮೇಟಿ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಸಿ.ಡಿ. ಬಿಡುಗಡೆ ಮಾಡುತ್ತಿದ್ದಂತೆಯೇ ಸಚಿವ ಮೇಟಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಿನಾಮೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ರಾಜಿನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳಿಸಿದ್ದು, ಅಂಗೀಕೃತಗೊಂಡಿದೆ.
