Asianet Suvarna News Asianet Suvarna News

ವಿಮಾನ ಹಾರುವರಷ್ಟರಲ್ಲಿ ಮೋಡಗಳೇ ಮಾಯ!

ಮೋಡಬಿತ್ತನೆ ಪ್ರಕ್ರಿಯೆಗೆ ಎದುರಾಯಿತು ಹೊಸ ಸಮಸ್ಯೆ | ಕಾರ್ಯಾಚರಣೆ ಶೈಲಿ ಬದಲಾಯಿಸಿದ ತಾಂತ್ರಿಕ ಸಮಿತಿ | ಮೋಡ ಬಿತ್ತನೆ ಯೋಜನೆಯ ವಿಮಾನಗಳ ಹಾರಾಟ ಕಾರ್ಯಾಚರಣೆಯಲ್ಲಿ ಕೊಂಚ ಬದಲಾವಣೆ

Cloud seeding operation facing problem in karnataka
Author
Bengaluru, First Published Aug 5, 2019, 8:30 AM IST

 ಬೆಂಗಳೂರು (ಆ. 5): ಉತ್ತಮ ತೇವಾಂಶದ ಮೋಡಗಳ ಕೊರತೆ ಹಾಗೂ ಮೋಡಗಳು ಸೃಷ್ಟಿಯಾದ ಸ್ಥಳಕ್ಕೆ ವಿಮಾನಗಳು ಹೋಗುವಷ್ಟರಲ್ಲಿ ಅವು ಕರಗಿ ಹೋಗುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಯೋಜನೆಯ ವಿಮಾನಗಳ ಹಾರಾಟ ಕಾರ್ಯಾಚರಣೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಹನ್ನೊಂದು ದಿನಗಳ ಮೋಡ ಬಿತ್ತನೆ ಕಾರ್ಯಾಚರಣೆಯಲ್ಲಿ ಮೊದಲು ರಾಡಾರ್‌ಗಳಿಂದ ಮೋಡ ಸೃಷ್ಟಿಮಾಹಿತಿ ಪಡೆದು ಬಳಿಕ ವಿಮಾನಗಳು ಆಗಸಕ್ಕೆ ಹಾರಿ, ಮೋಡ ಸೃಷ್ಟಿಯಾದ ಸ್ಥಳಕ್ಕೆ ತೆರಳಿ ಬಿತ್ತನೆ ಮಾಡುತ್ತಿದ್ದವು. ಆದರೆ, ಸಾಕಷ್ಟುಸಲ ಮೋಡಗಳು ವಿಮಾನ ಸ್ಥಳಕ್ಕೆ ತಲುಪುವ ವೇಳೆಗೆ ಕರಗಿಹೋಗುತ್ತಿರುವುದು ಕಂಡುಬಂದಿದೆ.

ಇದರಿಂದ ವಿಮಾನ ಮೋಡದ ಸ್ಥಳಕ್ಕೆ ಹೋದರೂ ಪ್ರಯೋಜನವಾಗದೆ ವಾಪಸ್‌ ಬರುವಂತಾಗುತ್ತಿದೆ. ಹಾಗಾಗಿ ಮೋಡ ಸೃಷ್ಟಿಬಗ್ಗೆ ರಾಡಾರ್‌ನಿಂದ ಮಾಹಿತಿಗೆ ಕಾಯದೆ, ಮೊದಲೇ ವಿಮಾನಗಳನ್ನು ಹಾರಾಟಕ್ಕೆ ತಯಾರಾಗಿರಿಸಿ, ರಾಡಾರ್‌ ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ತೆರಳಿ ಮೋಡ ಬಿತ್ತನೆ ನಡೆಸುವಂತೆ ಯೋಜನೆಯ ತಾಂತ್ರಿಕ ಸಮಿತಿ ತೀರ್ಮಾನ ಕೈಗೊಂಡಿದೆ ಎಂದು ಮೋಡ ಬಿತ್ತನೆ ಯೋಜನೆಯ ಉಸ್ತುವಾರಿ ಹೊತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮುಖ್ಯ ಇಂಜಿನಿಯರ್‌ ಡಾ.ಪ್ರಕಾಶ್‌ ಕುಮಾರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮೂರ್ನಾಲ್ಕು ದಿನ ಝೀರೋ ಡೇ:

ರಾಜ್ಯದಲ್ಲಿ ಜು.25ರಿಂದ ಎರಡು ವಿಶೇಷ ವಿಮಾನಗಳ ಮೂಲಕ ಮೋಡ ಬಿತ್ತನೆ ನಡೆಸಲಾಗುತ್ತಿದೆ. ಆ.4ರ ವರೆಗೆ ನಡೆದ 11 ದಿನಗಳ ಕಾರ್ಯಾಚರಣೆಯಲ್ಲಿ ಸುಮಾರು ಮೂರ್ನಾಲ್ಕು ದಿನಗಳÜಲ್ಲಿ ಉತ್ತಮ ತೇವಾಂಶದ ಮೋಡಗಳೇ ಸಿಕ್ಕಿಲ್ಲ. ಇದರಿಂದ ಮೋಡ ಬಿತ್ತನೆಯೇ ನಡೆದಿಲ್ಲ. ಹಾಗಾಗಿ ಆ ದಿನಗಳನ್ನು ಸಂಪೂರ್ಣ ‘ಝೀರೋ’ ಡೇ ಎಂದು ಪರಿಗಣಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾನುವಾರ ಒಂದು ವಿಮಾನ ಹುಬ್ಬಳ್ಳಿ ಭಾಗದಲ್ಲಿ ಬಸವಕಲ್ಯಾಣ, ಯಾದಗಿರಿ ಭಾಗದ ಕೆಲವೆಡೆ ಮೋಡ ಬಿತ್ತನೆ ಮಾಡಿದರೆ, ಮತ್ತೊಂದು ವಿಮಾನ ದಕ್ಷಿಣ ಒಳನಾಡಿನ ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ನಡೆಸಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಆ.2ರಂದು ವಿಜಯಪುರ ಜಿಲ್ಲೆಯ ವಿವಿಧೆಡೆ ನಡೆದ ಮೋಡ ಬಿತ್ತನೆಯಿಂದ ಆ ಭಾಗದಲ್ಲಿ 7.5 ಮಿ.ಮೀ.ನಷ್ಟುಮಳೆಯಾಗಿದೆ. ಆ.3 ಮತ್ತು 4 ರಂದು ಅಷ್ಟೇನೂ ಮಳೆಯಾಗಿಲ್ಲ ಎನ್ನಲಾಗಿದೆ.

ಮೋಡಬಿತ್ತನೆಯಿಂದ ಮಳೆಯಾಗಿದೆಯೇ?

ಈವರೆಗೆ ಮೋಡ ಬಿತ್ತನೆಯಿಂದ ಯಾವ್ಯಾವ ಭಾಗದಲ್ಲಿ ಎಷ್ಟುಹೆಚ್ಚುವರಿ ಮಳೆಯಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ. ಅದನ್ನು ಈಗಲೇ ಲೆಕ್ಕಾಚಾರ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ.

ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಹೆಚ್ಚು ಮೋಡಗಳು ಕಂಡುಬಂದರೂ ಮಳೆ ಸುರಿಸುವಷ್ಟುಉತ್ತಮ ತೇವಾಂಶದ ಮೋಡಗಳ ಕೊರತೆ ಈ ಬಾರಿ ಹೆಚ್ಚಾಗಿ ಕಂಡುಬರುತ್ತಿದೆ. ಹಾಗಾಗಿಯೇ ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯುಂಟಾಗಿದೆ. ಗುಣಮಟ್ಟದ ಮೋಡಗಳ ಕೊರತೆಯಿಂದಾಗಿ ಮಹತ್ವಾಕಾಂಕ್ಷಿ ಮೋಡ ಬಿತ್ತನೆ ಕಾರ್ಯದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಾಗುತ್ತಿಲ್ಲ ಎನ್ನುವುದು ಅಧಿಕಾರಿಗಳ ಉತ್ತರ.

ಅಲ್ಲೊಂದು ಇಲ್ಲೊಂದು ಸೃಷ್ಟಿಯಾಗುವ ಮೋಡಗಳು ರಾಡಾರ್‌ ಮಾಹಿತಿ ಪಡೆದು ವಿಮಾನಗಳು ಆಕಾಶಕ್ಕೆ ಹಾರಿ ಮೋಡ ಬಿತ್ತನೆ ಮಾಡುವಷ್ಟರಲ್ಲಿ ಕರಗಿಹೋಗುತ್ತಿವೆ. ಇದರಿಂದ ರಾಜ್ಯದ ರೈತರ ಪಾಲಿಗೆ ಮೋಡ ಬಿತ್ತನೆ ಯೋಜನೆ ಕೊಂಚ ಮಟ್ಟಿನ ನಿಟ್ಟುಸಿರು ನೀಡಬಹುದು ಎಂಬ ನಿರೀಕ್ಷೆ ಅಷ್ಟಾಗಿ ಫಲಿಸಲಾಗಿದೆ. ಹವಾಮಾನ ಇಲಾಖೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಮುಂಗಾರು ಚುರುಕಾಗಲಿದ್ದು, ಈ ವೇಳೆ ಉತ್ತಮ ತೇವಾಂಶದ ಮೋಡಗಳ ಸೃಷ್ಟಿಹೆಚ್ಚಾಗುವ ಮುನ್ಸೂಚನೆ ಇದೆ. ಈ ಅವಧಿಯಲ್ಲಿ ಹೆಚ್ಚಿನ ಮೋಡ ಬಿತ್ತನೆಯ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ.

Follow Us:
Download App:
  • android
  • ios