ರಾಜ್ಯದೆಲ್ಲೆಡೆ ತಾಂಡವವಾಡುತ್ತಿರುವ ಬರದ ಬಿಸಿ ಪುಣ್ಯಕ್ಷೇತ್ರಗಳಿಗೆ ಜೋರಾಗಿಯೇ ತಟ್ಟಿದೆ. ಪುಣ್ಯಸ್ನಾನಕ್ಕೆ ನದಿಗಳಲ್ಲಿ ನೀರಿಲ್ಲದಂತಾಗಿದೆ. ಪ್ರತಿನಿತ್ಯ ನಡೆಯುವ ಅನ್ನದಾಸೋಹಕ್ಕೂ ನೀರು ಒದಗಿಸುವುದು ಕಷ್ಟವಾಗುತ್ತಿದೆ.

ಕೆಲವೆಡೆ ಅಭಿಷೇಕದ ನೀರಿಗೂ ಅಳಿದುಳಿದ ಒರತೆ ನೀರನ್ನು ಸಂಗ್ರಹಿಸಬೇಕಾದ ಅನಿವಾರ್ಯತೆ. ಶೀಘ್ರದಲ್ಲೇ ಮಳೆ ಬಾರದೇ ಹೋದರೆ ದೇವರೇ ಗತಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ್ಯಾವ ದೇವಾಲಯ ನೀರಿಗೆ ತೀವ್ರ ಸಮಸ್ಯೆಯಾಗಿದೆ ಎಂಬ ವಿವರ ಇಲ್ಲಿದೆ.

ಧರ್ಮಸ್ಥಳದಲ್ಲಿ 15 ದಿನದಲ್ಲಿ ಮಳೆಯಾಗದಿದ್ದಲ್ಲಿ ಸಂಕಷ್ಟ 

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೀರು ಪೂರೈಸುವ ನೇತ್ರಾವತಿ ನದಿಯಲ್ಲಿ ನೀರು ಆರಿ ಹೋಗಿ ದ್ದು, ನದಿ ಮಧ್ಯೆ ಬಂಡೆಗಳು ಎದ್ದು ಕಾಣುತ್ತಿವೆ. ಪ್ರತಿದಿನ 10 ಸಾವಿರಕ್ಕೂ ಅಧಿಕ ಮಂದಿ ಭೋಜನ ಪ್ರಸಾದ ಸ್ವೀಕರಿಸುತ್ತಾರೆ. ವಸತಿಗೃಹಗಳ 2 ಸಾವಿರಕ್ಕೂ ಹೆಚ್ಚಿನ ಕೊಠಡಿಗಳು ಭರ್ತಿಯಾಗುತ್ತವೆ. ಕ್ಷೇತ್ರಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬಳಕೆಯಾಗುವುದು ನೇತ್ರಾವತಿಯಿಂದಲೇ.

ಇಲ್ಲಿ ನದಿಗೆ ಅಣೆಕಟ್ಟು ಕಟ್ಟಿರುವುದರಿಂದ ಇದುವರೆಗೆ ನೀರು ತಕ್ಕಮಟ್ಟಿಗೆ ಇದೆ. ನೀರು ಬಳಕೆಯ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ಈಗಾಗಲೇ ಅನ್ನಪೂರ್ಣ ಛತ್ರದಲ್ಲಿ ಊಟದ ತಟ್ಟೆಗೆ ಬದಲಾಗಿ ಪತ್ರಾವಳಿ(ಎಲೆ) ಬಳಸಲಾಗುತ್ತಿದೆ. ಕ್ಷೇತ್ರದಲ್ಲಿ ನೀರಿನ ಕೊರತೆ ಬಹಳ ಇರುವುದರಿಂದ ಭಕ್ತಾದಿಗಳು ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ಕೊಂಚ ದಿನ ಮುಂದೂಡುವಂತೆ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಇತ್ತೀಚೆಗಷ್ಟೇ ತಿಳಿಸಿದ್ದರು.

ಇನ್ನೂ 15 ದಿನ ಬಿಸಿಲಿನ ವಾತಾವರಣ ಹೀಗೆಯೇ ಮುಂದುವರಿದರೆ ಕ್ಷೇತ್ರದ ವ್ಯವಸ್ಥೆಗಳನ್ನು ಸುಧಾರಿಸುವುದು ಸವಾಲಾಗಿ ಪರಿಣಮಿಸಲಿದೆ ಎನ್ನಲಾಗಿದೆ.

ಉಡುಪಿಯಲ್ಲಿ ಕೃಷ್ಣ ಅಭಿಷೇಕಕ್ಕೂ ತತ್ವಾರ 

ಇನ್ನು ಉಡುಪಿ ನಗರಕ್ಕೆ ನೀರು ಪೂರೈಸುವ ಸ್ವರ್ಣಾ ನದಿಗೆ ಕಟ್ಟಿರುವ ಬಜೆ ಅಣೆಕಟ್ಟೆಯಲ್ಲಿ ನೀರು ಒಣಗಿ 10 ದಿನಗಳೇ ಕಳೆದು ಹೋಗಿವೆ. ಅಲ್ಲಲ್ಲಿ ನದಿ ಗುಂಡಿಗಳಲ್ಲಿರುವ ನೀರನ್ನು ಅಣೆಕಟ್ಟೆಗೆ ಪಂಪ್ ಮಾಡಲಾಗುತ್ತಿದೆ.

ಇದರಿಂದಾಗಿ ಉಡುಪಿ ಶ್ರೀಕೃಷ್ಣಮಠದಲ್ಲೂ ನೀರಿನ ತೀವ್ರ ಕೊರತೆ ಉಂಟಾಗಿದೆ. ಇಲ್ಲಿ ಪೂಜೆಗಿಂತಲೂ ನಿತ್ಯ ಬರುವ 5-6 ಸಾವಿರ ಮಂದಿ ಪ್ರವಾಸಿಗರಿಗೆ ಮಧ್ಯಾಹ್ನದ ಊಟ ತಯಾರಿಸಲು ಸಾವಿ ರಾರು ಲೀಟರ್ ನೀರಿನ ಅಗತ್ಯವಿದೆ.

ಅದಕ್ಕಾಗಿ ಮಠದಲ್ಲಿ ರುವ 2 ಬಾವಿಗಳ ನೀರನ್ನು ಎತ್ತಲಾಗುತ್ತದೆ. ಆದರೆ ಈ ಬಾರಿ ಎರಡೂ ಬಾವಿಗಳು ಬತ್ತಿವೆ. ಆದ್ದರಿಂದ ಕೃಷ್ಣಮಠಕ್ಕೆ ದಿನಕ್ಕೆ ಸರಾಸರಿ 5 ಟ್ಯಾಂಕರ್ ನೀರನ್ನು ನಿತ್ಯ 15 ಸಾವಿರ ಹಣ ಕೊಟ್ಟು ಖರೀದಿಸಲಾಗುತ್ತಿದೆ. ಇನ್ನೊಂದೆರಡು ವಾರಗಳಲ್ಲಿ ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ.

ಶಿರಸಿ ದೇವಸ್ಥಾನದಲ್ಲಿ ಕಾಲು ತೊಳೆಯುವುದಕ್ಕೆ ಕಡಿವಾಣ

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಈವರೆಗೆ ನೀರಿನ ಸಮಸ್ಯೆ ಅಷ್ಟಾಗಿ ತಲೆದೋರಿಲ್ಲದಿದ್ದರೂ ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ಭಕ್ತರಿಗೆ ಕಾಲು ತೊಳೆಯಲು ಚಿಕ್ಕ ಚಿಕ್ಕ ಕಾರಂಜಿ ವ್ಯವಸ್ಥೆ ಮಾಡಲಾಗಿತ್ತು.

ನೀರಿನ ಮೂಲ ಕಡಿಮೆಯಾಗಿದ್ದರಿಂದ ಈಗ ವಿಶೇಷ ದಿನಗಳಲ್ಲಿ ಅಂದರೆ ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಸೀಮಿತಗೊಳಿಸಲಾಗಿದೆ. ಉಳಿದಂತೆ ಗೋಕರ್ಣ ಮಹಾಬಲೇಶ್ವರ ದೇವಾಲಯ, ಮುರ್ಡೇಶ್ವರ, ಶಿರಸಿ ಮಾರಿಕಾಂಬಾ, ಉಳವಿ ಚನ್ನಬಸವೇಶ್ವರ, ಇಡಗುಂಜಿ ವಿನಾಯಕ ದೇವಾಲಯಗಳಲ್ಲಿ ಪೂಜೆ, ಅಭಿಷೇಕಗಳಿಗೆ, ಪ್ರಸಾದ ವಿನಿಯೋಗಕ್ಕೆ ಯಾವುದೆ ಸಮಸ್ಯೆ ಉಂಟಾಗಿಲ್ಲ. 

ಮಂತ್ರಾಲಯ: ಬತ್ತಿದ ನದಿ ಭಕ್ತರಿಗೆ ಪರ‌್ಯಾಯ ವ್ಯವಸ್ಥೆ

ತುಂಗಭದ್ರಾ ನದಿ ದಂಡೆಯಲ್ಲಿರುವ ಮಂತ್ರಾಲಯ ರಾಘವೇಂದ್ರ ಮಠದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಶ್ರೀಮಠ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವುದರಿಂದ ಭಕ್ತರಿಗೆ ದೊಡ್ಡಮಟ್ಟಿನ ಸಮಸ್ಯೆಯಾಗಿಲ್ಲ.
ತುಂಗಾ ನದಿ ನೀರಿಲ್ಲದೆ ಬಣಗುಟ್ಟುತ್ತಿದೆ. ಆದರೆ ಮಂತ್ರಾಲಯ ಮಠ ಮುನ್ನೆಚ್ಚರಿಕಾ ಕ್ರಮವಾಗಿ ಬೋರ್‌ವೆಲ್‌ಗಳನ್ನು ಕೊರೆಸಿ ನದಿ ಪಕ್ಕದಲ್ಲಿಯೇ ನಲ್ಲಿ ಗಳನ್ನು ಅಳವಡಿಸಿದೆ. ಹೀಗಾಗಿ ಭಕ್ತಾದಿಗಳ ಪುಣ್ಯ ಸ್ನಾನಕ್ಕೆ ಯಾವುದೇ ಅಡ್ಡಿ ಇಲ್ಲ. ಅದೇ ರೀತಿಯಲ್ಲಿ ಶುದ್ಧಕುಡಿವ ನೀರನ್ನು ಪೂರೈಸಲು ಕೌಂಟರ್‌ಗಳನ್ನು ತೆರೆಯಲಾಗಿದೆ. ಭಕ್ತರು ನಿರಾತಂಕವಾಗಿ ಮಂತ್ರಾಲಯಕ್ಕೆ ಬಂದು ರಾಯರ ದರ್ಶನ ಪಡೆಯಬಹುದು.

ಕೊಲ್ಲೂರಿನಲ್ಲಿ ಎಂಟು ದಿನಕ್ಕೆ ಆಗುವಷ್ಟೇ ನೀರು ಉಳಿದಿದೆ

ಕೊಲ್ಲೂರು ಶ್ರೀ ಮುಕಾಂಬಿಕಾ ದೇವಾಲಯಕ್ಕೆ ಬೇಕಾದ ನೀರನ್ನು ಸೌಪರ್ಣಿಕಾ ನದಿಯಿಂದ ಎತ್ತಲಾಗುತ್ತದೆ. ಆದರೆ ಈ ಬೇಸಿಗೆಯಲ್ಲಿ ಸೌಪರ್ಣಿಕಾ ನದಿ ಸಂಪೂರ್ಣ ಬತ್ತಿದೆ. ಆದ್ದರಿಂದ ನದಿಯ ಗುಂಡಿಗಳಲ್ಲಿರುವ ನೀರು ಮುಂದಿನ 8 ದಿನಕ್ಕೆ ಸಾಕಾಗಬಹುದು. ಕೊಲ್ಲೂರಿನಲ್ಲಿಯೂ ನಿತ್ಯ ಐದಾರು ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇನ್ನೊಂದು ವಾರದೊಳಗೆ ಬಲವಾದ ಮಳೆಯಾಗದಿದ್ದಲ್ಲಿ ದೇವಳದ ವ್ಯವಸ್ಥಾಪನಾ ಮಂಡಳಿ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ.