ಕಾನ್ಪುರ (ಸೆ. 02): ಶಾಲೆಗೆ ರಜೆ ಹಾಕಲು ವಿದ್ಯಾರ್ಥಿಗಳು ಏನೇನೋ ಕಸರತ್ತು, ನಾಟಕಗಳನ್ನು ಮಾಡುತ್ತಾರೆ. ಆದರೆ ತನ್ನ ಸಾವಿಗೆ ರಜೆ ಕೊಡಬೇಕೆಂದು ವಿದ್ಯಾರ್ಥಿಗಳು ಕೋರಿದ್ದು ನೀವು ಕೇಳಿದ್ದೀರಾ? ಅದರೆ ವಿದ್ಯಾರ್ಥಿಯೊಬ್ಬ ತಾನು ಸತ್ತು ಹೋಗಿದ್ದು ಹಾಗಾಗಿ ರಜೆ ಕೊಡಬೇಕು ಎಂದು ಕೇಳಿ ಪ್ರಾಂಶುಪಾಲರಿಂದಲೇ ರಜೆ ಗಿಟ್ಟಿಸಿಕೊಂಡ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಇಲ್ಲಿನ ಜಿ.ಟಿ ರಸ್ತೆಯಲ್ಲಿರುವ ಖಾಸಗಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ತಾನು ಬೆಳಗ್ಗೆ 10 ಗಂಟೆಗೆ ಸತ್ತು ಹೋಗಿದ್ದರಿಂದ ಬೇಗ ಮನೆಗೆ ಹೋಗಬೇಕು. ಆದ್ದರಿಂದ ಅರ್ಧ ದಿನ ರಜೆ ನೀಡಬೇಕೆಂದು ಎಂದು ಕೋರಿ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಿದ್ದ. ಪ್ರಾಂಶುಪಾಲರು ವಿದ್ಯಾರ್ಥಿಯ ಅರ್ಜಿಗೆ ಸಹಿ ಹಾಕಿ ರಜೆ ಮಂಜೂರು ಮಾಡಿದ್ದಾರೆ.

ಆ.20 ರಂದು ನಡೆದ ಈ ಘಟನೆ ವಿದ್ಯಾರ್ಥಿಗಳೆಡೆಯಲ್ಲಿ ಹರಿದಾಡಿದ್ದು ಶಾಲಾ ಆಡಳಿತ ಮಂಡಳಿಗೂ ತಲುಪಿದೆ. ಘಟನೆಯಿಂದ ಪ್ರತಿಷ್ಠಿತ ಶಾಲೆಗೆ ಇರಿಸುಮುರಿಸು ಉಂಟಾಗಿದ್ದು, ಪ್ರಾಂಶುಪಾಲರು ವಿಷಯವನ್ನು ಸರಿಯಾಗಿ ಗಮನಿಸದೇ ಸಹಿ ಮಾಡಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ ಎಂದು ಶಿಕ್ಷಕರು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.