Asianet Suvarna News Asianet Suvarna News

ಸಚಿವರಿಬ್ಬರ ನಡುವೆಯೇ ಭುಗಿಲೆದ್ದ ಭಾರೀ ಅಸಮಾಧಾನ

ಇಷ್ಟು ದಿನಗಳ ಕಾಲ ಪಕ್ಷಗಳ ನಡುವೆ ಭುಗಿಲೆದ್ದ ಅಸಮಾಧಾನ ಇದೀಗ ಸ್ವತಃ ಸರ್ಕಾರದ ನಡುವೆಯೇ ಶುರುವಾಗಿದೆ.  ಇಬ್ಬರ ಸಚಿವರ ನಡುವಿನ ವಾಕ್ಸಮರ ಇದೀಗ ಬಯಲಾಗಿದೆ. 

Clash Between Puttaranga Shetty And N Mahesh
Author
Bengaluru, First Published Sep 26, 2018, 8:03 AM IST

ಚಾಮರಾಜನಗರ: ಹೇಳಿಕೆಯೊಂದಕ್ಕೆ ಸಂಬಂಧಪಟ್ಟು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್‌ನ ಪುಟ್ಟ ರಂಗಶೆಟ್ಟಿ ಮತ್ತು ಬಿಎಸ್‌ಪಿಯ ಎನ್. ಮಹೇಶ್ ನಡುವೆ ಅಸಮಾಧಾನ ಭುಗಿಲೆದ್ದಿದೆ. ‘ಕಾಂಗ್ರೆಸ್ ಗಿಡ ಕಿತ್ತು ಹಾಕುತ್ತೇನೆ’ ಎಂದು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ಇದೀಗ ಜಿಲ್ಲೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ, ‘ನಾವು(ಕಾಂಗ್ರೆಸ್) ಒಂದು ನಿಮಿಷ ಮನಸ್ಸು ಮಾಡಿದರೆ, ಎನ್.ಮಹೇಶ್ ಉಳಿಯೊಲ್ಲ ಎಂದು ತಿರುಗೇಟು ನೀಡಿದ್ದಾರೆ. 

ಇದಕ್ಕೆ ಸ್ಪಷ್ಟನೆ ನೀಡಿರುವ ಸಚಿವ ಮಹೇಶ್, ಗ್ರಾಮಾಂತರ ಪ್ರದೇಶದಲ್ಲಿ ಕಂಡುಬರುವ ಪಾರ್ಥೇನಿಯಂ ಗಿಡಕ್ಕೆ ಕಾಂಗ್ರೆಸ್ ಗಿಡ ಎಂದು  ಕರೆದಿದ್ದೇನೆಯೇ ಹೊರತು ಕಾಂಗ್ರೆಸ್ ಪಕ್ಷವನ್ನು ಜರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಚಿವರಿಬ್ಬರ ನಡುವೆ ಪ್ರಾರಂಭವಾದ ಈ ವಾಕ್ಸಮರ ಇದೀಗ ಕಾಂಗ್ರೆಸ್ ಮತ್ತು ಬಿಎಸ್ಪಿ ಕಾರ್ಯಕರ್ತರ ನಡುವೆಯೂ ಮುಂದುವರಿದಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಬಿಸಿಬಿಸಿ  ಚರ್ಚೆಯಾಗುತ್ತಿದೆ.

ಏಕವಚನದಲ್ಲೇ ನಿಂದಿಸಿದ ಪುಟ್ಟರಂಗಶೆಟ್ಟಿ : ‘ಕಾಂಗ್ರೆಸ್ ಕಿತ್ತು ಹಾಕುತ್ತೇನೆ ಎಂದು ಹೇಳೋಕೆ ಅವನ್ಯಾರು? ಕಿತ್ತು ಹಾಕ್ತಿನಿ ಎಂದು ಹೇಳಿದ್ರೆ  ಅವನೇ ಕಿತ್ತು ಹೋಗುತ್ತಾನೆ. ಕಾಂಗ್ರೆಸ್ ಬಹಳಷ್ಟು ಬೇರು ಇರುವ ಹೆಮ್ಮರ. ಒಂದು ಬೇರು ಕಿತ್ತರೆ ಮತ್ತೊಂದು ಬೇರು ಚಿಗುರುತ್ತದೆ. ದೊಡ್ಡ ದೊಡ್ಡ ಲೀಡರೇ ಕಿತ್ತು ಹಾಕೋಕಾಗಿಲ್ಲ. ಅಂತಹದ್ದರಲ್ಲಿ ಅವನು ಕಾಂಗ್ರೆಸ್ ಬಗ್ಗೆ ತಿಳಿದುಕೊಂಡು ಮತನಾಡಬೇಕು’ ಎಂದು ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ. ತಾಲೂಕಿನ ಕುದೇರು ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹೇಶ್ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದು ಕೊಂಡರು. ಸಮ್ಮಿಶ್ರ ಸರ್ಕಾರದಲ್ಲಿ ಎನ್.ಮಹೇಶ್ ಒನ್‌ಮ್ಯಾನ್ ಆರ್ಮಿ(ಒಬ್ಬನೇ ಸೈನಿಕ). ಕಾಂಗ್ರೆಸ್‌ನವರು ೮೦ ಮಂದಿ ಇದ್ದೇವೆ. ಜೆಡಿಎಸ್‌ನವರು 37 ಮಂದಿ ಇದ್ದು, ನಾವು (ಕಾಂಗ್ರೆಸ್) ಒಂದು ನಿಮಿಷ ಮನಸ್ಸು ಮಾಡಿದರೆ ಎನ್.ಮಹೇಶ್ ಉಳಿಯಲ್ಲ
ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಗಿಡ ಕಿತ್ತುಹಾಕಿ ಅಂದಿದ್ದೆ: ಪುಟ್ಟರಂಗಶೆಟ್ಟಿ ಅವರ ತಿರುಗೇಟಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮಹೇಶ್, ಕೊಳ್ಳೆಗಾಲದ ಶಾಲೆಯ ಸ್ವಚ್ಛತಾ  ಕಾರ್ಯಕ್ರಮದಲ್ಲಿ ಅಲ್ಲಿ ಬೆಳೆದಿದ್ದ ಕಾಂಗ್ರೆಸ್ ಗಿಡವನ್ನು ಕಿತ್ತು ಹಾಕಿ ಎಂದಿದ್ದೆ. ಗ್ರಾಮಾಂತರದಲ್ಲಿ ಪಾರ್ಥೇನಿಯಂ ಗಿಡಕ್ಕೆ ಕಾಂಗ್ರೆಸ್ ಗಿಡ ಎಂದು ಕರೆಯುತ್ತಾರೆ. ಹೀಗೆ ಹೇಳುವಾಗ ನನಗೆ ಕಾಂಗ್ರೆಸ್ ಪಕ್ಷದ ವಿಚಾರ ಬಂದಿರಲಿಲ್ಲ ಎಂದರು. ಇದೇವೇಳೆ ಮಹೇಶ್ ಕಾಂಗ್ರೆಸ್ ಮನಸ್ಸು  ಮಾಡಿದರೆ ಮಹೇಶ್ ಉಳಿಯೊಲ್ಲ ಎಂಬ ಪುಟ್ಟರಂಗಶೆಟ್ಟಿ ಅವರ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಸಚಿವನನ್ನಾಗಿ ಮಾಡಿದ್ದು ಕುಮಾರಣ್ಣ, ದೇವೇಗೌಡರು ಹಾಗೂ ಅಕ್ಕ ಮಾಯಾವತಿ. ಅವರನ್ನು ಬಿಟ್ಟರೆ ಯಾರ ಕೃಪೆಯೂ ಇಲ್ಲ. ನನ್ನನ್ನು ಕ್ಯಾಬಿನೆಟ್‌ನಿಂದ ಕಿತ್ತು ಹಾಕುವುದು ಅವರಿಗಷ್ಟೇ ಸಾಧ್ಯ. ಪುಟ್ಟರಂಗ ಶೆಟ್ಟಿ ಅವರಿಗೆ ಯಾವ ಸಂಬಂಧವೂ ಇಲ್ಲ. ನಾನು ಯಾರ ಹಂಗಿನಲ್ಲೂ ಇಲ್ಲ’ ಎಂದರು.  ಪುಟ್ಟರಂಗಶೆಟ್ಟಿಯವರು ಹಳ್ಳಿಯಿಂದ ಬಂದವರು. ಹಾಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದರು 

Follow Us:
Download App:
  • android
  • ios