ಕರಾವಳಿ ಭಾಗ ಹೊರತುಪಡಿಸಿ ರಾಜ್ಯಾದ್ಯಂತ ಭಾನುವಾರ ಮುಸ್ಲಿಮರು ಒಂದು ತಿಂಗಳ ಉಪವಾಸ ಕೊನೆಗೊಳಿಸಿ ಸೋಮವಾರ ರಂಜಾನ್‌ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಸಜ್ಜುಗೊಂಡಿದ್ದಾರೆ. ಭಕ್ತಿಯ ಜೊತೆಗೆ ಆತ್ಮ ಶುದ್ಧಿಯ ಪ್ರತೀಕವಾಗಿ ನಿರಂತರ ಒಂದು ತಿಂಗಳ ಕಾಲ ಬೆಳಗಿನ ಜಾವ 4.30ರಿಂದ ಸಂಜೆ 6.45 ವರೆಗೆ ಏನನ್ನೂ ಸೇವಿಸದೆ ಉಪವಾಸ ವ್ರತ ನಡೆಸಿದ ಮುಸ್ಲಿಮರು ಭಾನುವಾರ ಸಂಜೆ 6.49ಕ್ಕೆ ತಮ್ಮ ಉಪವಾಸ ಕೊನೆಗೊಳಿಸಿ, ಸೋಮವಾರದ ರಂಜಾನ್‌ ಹಬ್ಬದಾಚರಣೆಗೆ ಸಜ್ಜಾದರು.

ಬೆಂಗಳೂರು(ಜೂ.26): ಕರಾವಳಿ ಭಾಗ ಹೊರತುಪಡಿಸಿ ರಾಜ್ಯಾದ್ಯಂತ ಭಾನುವಾರ ಮುಸ್ಲಿಮರು ಒಂದು ತಿಂಗಳ ಉಪವಾಸ ಕೊನೆಗೊಳಿಸಿ ಸೋಮವಾರ ರಂಜಾನ್‌ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಸಜ್ಜುಗೊಂಡಿದ್ದಾರೆ. 
ಭಕ್ತಿಯ ಜೊತೆಗೆ ಆತ್ಮ ಶುದ್ಧಿಯ ಪ್ರತೀಕವಾಗಿ ನಿರಂತರ ಒಂದು ತಿಂಗಳ ಕಾಲ ಬೆಳಗಿನ ಜಾವ 4.30ರಿಂದ ಸಂಜೆ 6.45 ವರೆಗೆ ಏನನ್ನೂ ಸೇವಿಸದೆ ಉಪವಾಸ ವ್ರತ ನಡೆಸಿದ ಮುಸ್ಲಿಮರು ಭಾನುವಾರ ಸಂಜೆ 6.49ಕ್ಕೆ ತಮ್ಮ ಉಪವಾಸ ಕೊನೆಗೊಳಿಸಿ, ಸೋಮವಾರದ ರಂಜಾನ್‌ ಹಬ್ಬದಾಚರಣೆಗೆ ಸಜ್ಜಾದರು.

ಸೋಮವಾರ ರಾಜ್ಯಾದ್ಯಂತ ರಂಜಾನ್‌ ಹಬ್ಬದ ವಿಶಿಷ್ಟ ಆಚರಣೆ ಸಾಂಪ್ರದಾಯಬದ್ಧವಾಗಿ ನಡೆಯಲಿದೆ. ಸೋಮವಾರ ಮುಂಜಾನೆ 4 ಗಂಟೆಗೆ ಎದ್ದು ಶುಭ್ರರಾಗಿ ಶ್ಯಾವಿಗೆ ಪಾಯಸದೊಂದಿಗೆ ಮಹಮ್ಮದ್‌ ಪೈಗಂಬರ್‌'ರನ್ನು ಸ್ಮರಿಸಲಿದ್ದಾರೆ. ನಂತರ ಮಸೀದಿಗಳಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ ಬಳಿಕ ತಕ್‌ಬೀರ್‌ (ಮೆರವಣಿಗೆ) ನಡೆಸುವರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪವಿತ್ರ ದಿನವಾದ ಈದ್‌ನ ಸಂದೇಶ ಸಾರುವರು.

ಕರಾವಳಿಯಲ್ಲಿ ನಿನ್ನೆಯೇ ಸಂಭ್ರಮದ ರಂಜಾನ್‌ ಆಚರಣೆ

ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಭಾನುವಾರದಂದು ಮುಸ್ಲಿಮರು ಈದ್‌ ಉಲ್‌ ಫಿತರ್‌ ಆಚರಿಸಿದರು. ಕರಾವಳಿ ಭಾಗಗಳಲ್ಲಿ ಶನಿವಾರವೇ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮಂಗಳೂರು ನಗರ ಸೇರಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಭಾನುವಾರ ಬೆಳಗ್ಗೆಯೇ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು. ಹೊಸ ಬಟ್ಟೆತೊಟ್ಟುಕೊಂಡ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಸಂಭ್ರಮವನ್ನು ಶುಭಾಶಯಗಳ ಮೂಲಕ ಹಂಚಿ ಸಂಭ್ರಮಿಸಿದರು. ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಸಚಿವ ಯು.ಟಿ. ಖಾದರ್‌ ಪ್ರಾರ್ಥನೆ ಸಲ್ಲಿಸಿದರು. ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲೂ ಮುಂಜಾನೆ ವಿಶೇಷ ಪ್ರಾರ್ಥನೆ ಸಲ್ಲಿಸಿ ರಂಜಾನ್‌ ಆಚರಿಸಲಾಯಿತು.