ಮುಖ್ಯಮಂತ್ರಿ ಜಯಲಲಿತಾ ನಿಧನದಿಂದ ಇಡೀ ತಮಿಳುನಾಡಿನಾದ್ಯಂತ ಸೂತಕದ ಛಾಯೆ ಆವರಿಸಿದೆ. ಜಯಾ ಸಾವಿನ ಬೆನ್ನಲ್ಲೇ ಅವರ ಆಪ್ತ, ಹಿರಿಯ ಪತ್ರಕರ್ತ ಹಾಗೂ ರಾಜಕಾರಣಿ ಚೋ ಎಸ್.ರಾಮಸ್ವಾಮಿ ವಿಧಿವಶರಾಗಿದ್ದಾರೆ.
ಚೆನ್ನೈ(ಡಿ.07): ಮುಖ್ಯಮಂತ್ರಿ ಜಯಲಲಿತಾ ನಿಧನದಿಂದ ಇಡೀ ತಮಿಳುನಾಡಿನಾದ್ಯಂತ ಸೂತಕದ ಛಾಯೆ ಆವರಿಸಿದೆ. ಜಯಾ ಸಾವಿನ ಬೆನ್ನಲ್ಲೇ ಅವರ ಆಪ್ತ, ಹಿರಿಯ ಪತ್ರಕರ್ತ ಹಾಗೂ ರಾಜಕಾರಣಿ ಚೋ ಎಸ್.ರಾಮಸ್ವಾಮಿ ವಿಧಿವಶರಾಗಿದ್ದಾರೆ.
ರಾಮಸ್ವಾಮಿ ಅವರು ದಿ.ಜಯಲಿಲತಾ ಸೇರಿ ಅನೇಕ ರಾಜಕೀಯ ನಾಯಕರಿಗೆ ಆಪ್ತರಾಗಿದ್ದರು. ಉಸಿರಾಟದ ತೊಂದರೆಯಿಂದ ಕಳೆದ ವಾರ ರಾಮಸ್ವಾಮಿ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ನಸುಕಿನ 4.30ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಮಸ್ವಾಮಿ ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.
ತುಘಲಕ್ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಚೋ ರಾಮಸ್ವಾಮಿ ಅವರು ಕಠಿಣ ರಾಜಕೀಯ ವಿಮರ್ಶೆಗಳಿಗೆ ಖ್ಯಾತಿ ಪಡೆದಿದ್ದರು. ಅಷ್ಟೇ ಅಲ್ಲದೇ ತಮಿಳುನಾಡು ಸಿಎಂ ಜಯಲಲಿತಾ ಅವರ ಆಪ್ತರಾಗಿದ್ದು ಹಲವು ಸೂಲಹೆಗಳನ್ನು ನೀಡುತ್ತಿದ್ದರು. ಚೋ ರಾಮಸ್ವಾಮಿ ಅವರು ಅನಾರೋಗ್ಯಕ್ಕೀಡಾದಾಗ ಜಯಲಲಿತಾ ಹಾಗೂ ನರೇಂದ್ರ ಮೋದಿ ಅವರು ಅಪೋಲೋ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು.
ಬಹುಮುಖ ಪ್ರತಿಭೆಯಾಗಿದ್ದ ಚೋ ರಾಮಸ್ವಾಮಿ, ಕಾನೂನು ಪದವೀಧರರು, ಪತ್ರಕರ್ತ, ಬರಹಗಾರಾಗಿದ್ದ ಅವರು ನಟನೆಯಲ್ಲೂ ಖ್ಯಾತಿ ಪಡೆದಿದ್ದು ಹಲವು ದಾರಾವಾಹಿ, ಸಿನಿಮಾಗಳನ್ನೂ ನಿರ್ದೇಶಿಸಿದ್ದಾರೆ. ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್, ಜಯಲಲಿತಾ, ಕಮಲ ಹಾಸನ್, ರಜನಿಕಾಂತ್ ಸೇರಿದಂತೆ ಹಲವು ಖ್ಯಾತ ನಟ, ನಟಿಯರೊಂದಿಗೆ ಚೋ ರಾಮಸ್ವಾಮಿ ನಟಿಸಿದ್ದಾರೆ. ಕೇವಲ ಕಲೆಯಷ್ಟೇ ಅಲ್ಲದೇ ಕ್ರೀಡೆಯಲ್ಲೂ ಸಕ್ರಿಯರಾಗಿದ್ದ ಚೋ ರಾಮಸ್ವಾಮಿ ಅವರು 1950 ರಲ್ಲಿ ಬಿಆರ್ ಸಿ ಕ್ರಿಕೆಟ್ ಕ್ಲಬ್ ನ ಸದಸ್ಯರಾಗಿದ್ದರು. 1957-63 ರ ಅವಧಿಯಲ್ಲಿ ಮದ್ರಾಸ್ ಹೈಕೋರ್ಟ್ ನಲ್ಲಿ ಕಾನೂನು ಅಭ್ಯಾಸ ಮಾಡಿದ್ದ ರಾಮಸ್ವಾಮಿ ಅವರು ಟಿಟಿಕೆ& ಕೋ ಸಮೂಹ ಸಂಸ್ಥೆಗೆ 1978 ರ ವರೆಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. 20 ಕ್ಕೂ ಹೆಚ್ಚು ತಮಿಳು ನಾಟಕಗಳನ್ನು ಬರೆದು ನಿರ್ದೇಶಿಸಿರುವ ರಾಮಸ್ವಾಮಿಗಳು 180 ಕ್ಕೂ ಹೆಚ್ಚು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದು 4 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
