ಕೊಲೆ ನಡೆದ 11 ದಿನದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ..!

Chitradurga judge disposes of murder case in 11 days; 75-year-old gets life term
Highlights

ಕೊಲೆ ನಡೆದು 48 ಗಂಟೆ ಒಳಗೆ ಚಾರ್ಜ್ ಶೀಟ್‌, 9 ದಿನಗಳ ಒಳಗಾಗಿ ವಿಚಾರಣೆ ಪೂರ್ಣಗೊಳಿಸಿ ಜೀವಾವಧಿ ತೀರ್ಪು ಪ್ರಕಟ. ಇಂತಹದ್ದೊಂದು ತ್ವರಿತ ಗತಿಯ ನ್ಯಾಯ ವಿತರಣೆಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸಾಕ್ಷಿಯಾಗಿದೆ.

ಚಿತ್ರದುರ್ಗ: ಕೊಲೆ ನಡೆದು 48 ಗಂಟೆ ಒಳಗೆ ಚಾರ್ಜ್ ಶೀಟ್‌, 9 ದಿನಗಳ ಒಳಗಾಗಿ ವಿಚಾರಣೆ ಪೂರ್ಣಗೊಳಿಸಿ ಜೀವಾವಧಿ ತೀರ್ಪು ಪ್ರಕಟ. ಇಂತಹದ್ದೊಂದು ತ್ವರಿತ ಗತಿಯ ನ್ಯಾಯ ವಿತರಣೆಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸಾಕ್ಷಿಯಾಗಿದೆ.

ಚಳ್ಳಕೆರೆ ತಾಲೂಕಿನ ವಲಸೆ ಗ್ರಾಮದ 75 ವರ್ಷದ ಪರಮೇಶ್ವರ ಸ್ವಾಮಿ ಎಂಬುವಾತ 65 ವರ್ಷದ ತನ್ನ ಹೆಂಡತಿ ಪುಟ್ಟಮ್ಮಳ ಶೀಲ ಶಂಕಿಸಿ ಜೂ. 27ರಂದು ಬೆಳಗಿನ ಜಾವ ಮೂರು ಗಂಟೆಗೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಸಂಬಂಧ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದೇ ಮಧ್ಯಾಹ್ನ ಮೂರು ಗಂಟೆಗೆ ಆರೋಪಿ ಪರಮೇಶ್ವರ ಸ್ವಾಮಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.

ಕೊಲೆ ಸಂಬಂಧ 30 ಜನರ ಸಾಕ್ಷಿ ಪಡೆದು ಅವರಲ್ಲಿ 17 ಮಂದಿ ಹೇಳಿಕೆ ಪಡೆದ ಪೊಲೀಸರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಎರಡು ದಿನದ ಒಳಗಾಗಿ ಅಂದರೆ 29ರಂದು ನ್ಯಾಯಾಲಯಕ್ಕೆ ಧೋಷಾರೋಪ ಪಟ್ಟಿಸಲ್ಲಿಸಿದ್ದಾರೆ. 

ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌ ಬಿ.ವಸ್ತ್ರಮಠ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಪರಮೇಶ್ವರ ಸ್ವಾಮಿಗೆ ಜುಲೈ 7ರಂದು ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಜಯರಾಂ ವಾದ ಮಂಡಿಸಿದ್ದರು.

loader