ವ್ಯಾಲೆಟ್‌ ಆಯ್ತು ಬಂದಿದೆ ಫೇಷಿಯಲ್‌ ಪೇಮೆಂಟ್‌!  ಚೀನಾದ ಅಂಗಡಿಗಳಲ್ಲಿ ಫೇಸಿಯಲ್‌ ಪೇಮೆಂಟ್‌ ವ್ಯವಸ್ಥೆ ಜಾರಿ |  ಕೌಂಟರ್‌ ಮುಂದೆ ನಿಮ್ಮ ಮುಖ ತೋರಿಸಿದರೆ ತಕ್ಷಣ ಹಣ ಪಾವತಿ |  ಕಾರ್ಡ್‌, ಸ್ಮಾರ್ಟ್‌ಪೋನ್‌, ಮೊಬೈಲ್‌ ವಾಲೆಟ್‌ ಯಾವುದೂ ಬೇಡ

ಬೀಜಿಂಗ್‌ (ಸೆ. 05): ಇಂದಿನ ದಿನಗಳಲ್ಲಿ ಹಣ ಪಾವತಿಗೆ ವಿವಿಧ ಮಾದರಿಯ ಮೊಬೈಲ್‌ ವಾಲೆಟ್‌ಗಳು ಬಂದಿವೆ. ಆದರೆ, ಹಣ, ಕಾರ್ಡ್‌ ಅಥವಾ ವಾಲೆಟ್‌ ಅಥವಾ ಸ್ಮಾರ್ಟ್‌ಫೋನ್‌ ಇಲ್ಲದೆಯೂ ಹಣ ಪಾವತಿಸಲು ಸಾಧ್ಯವೇ? ಚೀನಾದ ಅಂಗಡಿಗಳಲ್ಲಿ ನೀವು ವಸ್ತುಗಳನ್ನು ಖರೀದಿಸಿದ ಬಳಿಕ ಕೌಂಟರ್‌ನಲ್ಲಿ ನಿಮ್ಮ ಮುಖವನ್ನು ತೋರಿಸಿದರೆ ಸಾಕು. ನಿಮ್ಮ ಖಾತೆಯಿಂದ ಹಣ ಕಡಿತಗೊಳ್ಳಲಿದೆ!

ಹೌದು, ವಿಮಾನ ನಿಲ್ದಾಣಗಳಲ್ಲಿ ಮುಖ ಗುರುತಿಸುವ ವ್ಯವಸ್ಥೆ ಇರುವಂತೆ ಚೀನಾದಲ್ಲಿ ಫೇಷಿಯಲ್‌ ಪೇಮೆಂಟ್‌ (ಮೌಖಿಕ ಪಾವತಿ) ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಹೀಗಾಗಿ ಡಿಜಿಟಲ್‌ ಪಾವತಿಯಲ್ಲಿ ಅತ್ಯಾಧುನಿ ವ್ಯವಸ್ಥೆ ಎನ್ನಲಾದ ಮೊಬೈಲ್‌ ವಾಲೆಟ್‌ ಹಾಗೂ ಕ್ಯೂ ಆರ್‌ ಕೋಡ್‌ ತಂತ್ರಜ್ಞಾನ ಕೂಡ ಹಳೆಯ ಫ್ಯಾಷನ್‌ ಎನಿಸಿಕೊಂಡಿದೆ.

ಏನಿದು ಫೇಷಿಯಲ್‌ ಪೇಮೆಂಟ್‌?

ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದ ಬಳಿಕ ಕ್ಯಾಮರಾಗಳನ್ನು ಅಳವಡಿಸಿರುವ ಪಾಯಿಂಟ್‌ ಆಫ್‌ ಸೇಲ್‌ ಯಂತ್ರಗಳ ಮುಂದೆ ನಿಂತರೆ ಅದು ನಿಮ್ಮ ಮುಖವನ್ನು ಗುರುತು ಹಿಡಿದು ಬ್ಯಾಂಕ್‌ ಅಕೌಂಟ್‌ ಅಥವಾ ಪೇಮೆಂಟ್‌ ವ್ಯವಸ್ಥೆಯ ಜೊತೆ ಸಂಯೋಜನೆಗೊಂಡಿರುವ ನಿಮ್ಮ ಭಾವ ಚಿತ್ರಕ್ಕೆ ಹೋಲಿಸಿ ಹಣ ಪಾವತಿ ಮಾಡಲಿದೆ. ಇದಕ್ಕೆ ನೀವು ಮೊಬೈಲ್‌ ಒಯ್ಯಬೇಕಾಗೂ ಇಲ್ಲ.

ವಿಶೇಷತೆ ಏನು?

ಡಿಜಿಟಲ್‌ ಪಾವತಿ ವ್ಯವಸ್ಥೆಯಲ್ಲಿ ಗ್ರಾಹಕರು ಪಾಸ್‌ವರ್ಡ್‌ ನಮೂದಿಸಬೇಕು. ಈ ವೇಳೆ ನಿಮ್ಮ ಪಾಸ್‌ವರ್ಡ್‌ ಅನ್ನು ಬೇರೆಯವರು ಕದ್ದು ನೋಡುವ ಅಪಾಯ ಅಪಾಯ ಇರುತ್ತದೆ. ಆದರೆ, ಫೇಷಿಯಲ್‌ ಪೇಮೆಂಟ್‌ ವ್ಯವಸ್ಥೆಯಲ್ಲಿ ನಿಮ್ಮ ಮುಖವೇ ಪಾಸ್‌ವರ್ಡ ಆಗಿರುತ್ತದೆ. ಹೀಗಾಗಿ ನಿಮ್ಮ ಹೊರತಾಗಿ ಬೇರೆಯವರು ಹಣ ಪಾವತಿಸಲು ಸಾಧ್ಯವಿಲ್ಲ.

ಚೀನಾದಲ್ಲಿ ಭಾರೀ ಬೇಡಿಕೆ:

ಡೇಟಾ ಭದ್ರತೆ, ಖಾಸಗಿತನದ ಸೋರಿಕೆಯ ಆತಂಕದ ಹೊರತಾಗಿಯೂ ಚೀನಾದಲ್ಲಿ ಫೇಷಿಯಲ್‌ ಪೇಮೆಂಟ್‌ ಭಾರೀ ಜನಪ್ರಿಯವಾಗಿದೆ. 100 ನಗರಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ. ಇ- ಕಾಮರ್ಸ್‌ ದೈತ್ಯ ಅಲಿಬಾಬಾದ ಹಣಕಾಸು ಅಂಗವಾಗಿರುವ ಅಲಿಪೇ, ಈ ತಂತ್ರಜ್ಞಾನ ಜಾರಿಗೆ ಸುಮಾರು 3 ಸಾವಿರ ಕೋಟಿ ರು. ಹೂಡಿಕೆ ಮಾಡಲಿದೆ.

ವಿ ಚ್ಯಾಟ್‌ ಆ್ಯಪ್‌ ಅನ್ನು ನಿರ್ವಹಿಸುತ್ತಿರುವ ಟೆನ್ಸೆಂಟ್‌ ಕಂಪನಿ 60 ಕೋಟಿ ಬಳಕೆದಾರರನ್ನು ಹೊಂದಿದ್ದು, ಫ್ರಾಗ್‌ ಪ್ರೋ ಹೆಸರಿನಲ್ಲಿ ನೂತನ ಫೇಷಿಯಲ್‌ ಪೇಮೆಂಟ್‌ ಯಂತ್ರಗಳನ್ನು ಆಗಸ್ಟ್‌ನಲ್ಲಿ ಪರಿಚಯಿಸಿದೆ. ಈ ತಂತ್ರಜ್ಞಾನದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಟಿಯಾಂಜಿನ್‌ನಲ್ಲಿರುವ ಐಪ್ಯೂರಿ ಸುಪರ್‌ ಮಾರ್ಕೆಟ್‌ ಮುಖದ ಉದ್ದ, ಅಗಲ ಮತ್ತು ಎತ್ತರವನ್ನು ಅಳೆಯಲು 3 ಡಿ ಕ್ಯಾಮರಾ ಸ್ಕಾ್ಯನರ್‌ಗಳನ್ನು ಅಳವಡಿಸಿದೆ.