ಭೂತಾನ್'ಗೆ ಸೇರಬೇಕಾದ ಸಿಕ್ಕಿಂನ್ನು ಭಾರತ ತನ್ನ ವಶಕ್ಕೆ ಪಡೆದಿಟ್ಟುಕೊಂಡಿದೆ. ಭೂತಾನೀಯರೂ ಈಗಲೂ ಈ ವಿಚಾರವಾಗಿ ಪರಿತಪಿಸುತ್ತಿದ್ದಾರೆ. ಚೀನಾ ಸರಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಭೂತಾನ್ ಮತ್ತು ಸಿಕ್ಕಿಂ ವಿಚಾರದಲ್ಲಿ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕು ಎಂದು ಈ ಮಾಧ್ಯಮದ ಸಂಪಾದಕೀಯದಲ್ಲಿ ಬರೆಯಲಾಗಿದೆ.

ನವದೆಹಲಿ(ಜುಲೈ 06): ಭಾರತದ ವಿರುದ್ಧ ಕೆಂಡಕಾರಿ ಬೆದರಿಕೆ ಹಾಕುವುದನ್ನು ಚೀನೀಯರು ಮುಂದುವರಿಸಿದ್ದಾರೆ. ಸಿಕ್ಕಿಂ ಗಡಿಭಾಗದಲ್ಲಿ ಭಾರತೀಯ ಸೈನಿಕರನ್ನು ಒದ್ದು ಹೊರಹಾಕಬೇಕಾಗುತ್ತದೆ ಎಂದು ನಿನ್ನೆ ಬೆದರಿಸಿದ್ದ ಚೀನೀ ಮಾಧ್ಯಮಗಳು ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಕ್ಕಿಂ ರಾಜ್ಯವನ್ನು ಭಾರತದಿಂದ ಬೇರ್ಪಡಿಸುವ ವಿಷಕಾರಿ ಬೀಜ ಬಿತ್ತಲು ಯತ್ನಿಸಿವೆ.

ಸಿಕ್ಕಿಂನ ಸ್ವಾತಂತ್ರ್ಯದ ಪರವಾಗಿ ಚೀನಾದಲ್ಲಿ ಕೂಗುಗಳು ಕೇಳಿಬರುತ್ತಿವೆ. ಇದು ಸಿಕ್ಕಿಂನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಲಿವೆ" ಎಂದು ಚೀನಾದ ಸರಕಾರೀ ಸ್ವಾಮ್ಯದ "ಗ್ಲೋಬಲ್ ಟೈಮ್ಸ್" ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ. ಸಿಕ್ಕಿಂ ಮತ್ತು ಭೂತಾನ್ ವಿಷಯದಲ್ಲಿ ಚೀನಾ ಸರಕಾರ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕೆಂದೂ ಆ ಸಂಪಾದಕೀಯದಲ್ಲಿ ಸಲಹೆ ನೀಡಲಾಗಿದೆ.

"ಭೂತಾನ್ ಮೇಲೆ ಭಾರತದ ಜಬರದಸ್ತು"
ಭೂತಾನ್ ದೇಶವನ್ನು ಭಾರತ ಬಲವಂತವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡಿದೆ ಎಂದು ಚೀನೀ ಪತ್ರಿಕೆ ಅಭಿಪ್ರಾಯಪಟ್ಟಿದೆ. "ಭೂತಾನ್ ದೇಶವು ತನ್ನ ನೆರೆಯ ಚೀನಾದೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧ ಇಟ್ಟುಕೊಂಡಿಲ್ಲ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಇತರ ಯಾವುದೇ ಖಾಯಂ ಸದಸ್ಯ ರಾಷ್ಟ್ರದೊಂದಿಗೂ ಭೂತಾನ್'ನ ರಾಜತಾಂತ್ರಿಕ ಸಂಬಂಧ ಇಲ್ಲ. ಭಾರತವು ಅಸಮಾನ ಒಪ್ಪಂದಗಳ ಮೂಲಕ ಭೂತಾನ್'ನ ರಾಜತಾಂತ್ರಿಕ ಸಾರ್ವಭೌಮತ್ವವನ್ನು ಕಸಿದುಕೊಂಡಿದೆ. ಅಲ್ಲದೇ ಭೂತಾನ್'ನ ರಾಷ್ಟ್ರೀಯ ಭದ್ರತಾ ಪಡೆಗಳ ಮೇಲೂ ಭಾರತ ನಿಯಂತ್ರಣ ಹೊಂದಿದೆ" ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ಆರೋಪಿಸಿದೆ.

ಭೂತಾನ್'ಗೆ ಸೇರಬೇಕಾದ ಸಿಕ್ಕಿಂನ್ನು ಭಾರತ ತನ್ನ ವಶಕ್ಕೆ ಪಡೆದಿಟ್ಟುಕೊಂಡಿದೆ. ಭೂತಾನೀಯರೂ ಈಗಲೂ ಈ ವಿಚಾರವಾಗಿ ಪರಿತಪಿಸುತ್ತಿದ್ದಾರೆ. ಚೀನಾ ಸರಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಭೂತಾನ್ ಮತ್ತು ಸಿಕ್ಕಿಂ ವಿಚಾರದಲ್ಲಿ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕು ಎಂದು ಈ ಮಾಧ್ಯಮದ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಆದರೆ, ಸದ್ಯ ವಿವಾದಕ್ಕೆ ಕಾರಣವಾಗಿರುವ ದೋಕ್ಲಾಮ್ ಸೆಕ್ಟರ್'ನಲ್ಲಿ ಚೀನೀಯರು ನಡೆಸುತ್ತಿರುವ ರಸ್ತೆ ನಿರ್ಮಾಣಕ್ಕೆ ಭೂತಾನೀಯರೇ ಖುದ್ದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಲು ಭೂತಾನ್ ದೇಶವೇ ಮನವಿ ಮಾಡಿಕೊಂಡಿದ್ದರಿಂದ ಭಾರತದ ಭದ್ರತಾ ಪಡೆಗಳು ಡೋಕ್ಲಾಮ್'ಗೆ ತೆರಳಿ ಚೀನೀ ಸೈನಿಕರನ್ನು ಇದಿರುಗೊಂಡಿದ್ದರು. ಇದು ಚೀನಾವನ್ನು ಇನ್ನಿಲ್ಲದಂತೆ ಕೆರಳಿಸುತ್ತಿದೆ.